ದುಃಖ ಕಳೆದು ಸುಖ ದೊರೆಯಲು ಧರ್ಮ ಮಾರ್ಗದಲ್ಲಿ ನಡೆಯಿರಿ

KannadaprabhaNewsNetwork |  
Published : May 06, 2025, 12:15 AM IST
ಫೋಟೋ : ನವಲಗುಂದ ತಾಲ್ಲೂಕಿನ ತಿರ್ಲಾಪುರ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಓಣಿಯ ಎಲ್ಲ ಮಹಿಳೆಯರಿಂದ ಗ್ರಾಮ ದೇವತೆ ಮೂರ್ತಿಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದರು | Kannada Prabha

ಸಾರಾಂಶ

ತಿರ್ಲಾಪುರ ಗ್ರಾಮದಲ್ಲಿ ಹಿಂದೆಂದೂ ಕಂಡರಿಯದಂತೆ ಎತ್ತ ನೋಡಿದರೂ ಜನವೋ ಜನ. ಅಸಂಖ್ಯಾತ ಭಕ್ತ ಸಾಗರ ಭಕ್ತಿಭಾವದಲ್ಲಿ ತೇಲುತ್ತಿದೆ. ಅವಿಸ್ಮರಣೀಯ ಧಾರ್ಮಿಕ ಪವಿತ್ರತೆಯ ಭಾವನಾತ್ಮಕ ಅಭೂತಪೂರ್ವ ದೃಶ್ಯ ನೋಟಕ್ಕೆ ಗ್ರಾಮ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವವು ಸೋಮವಾರ ಸಾಕ್ಷಿಯಾಗಿತ್ತು.

ನವಲಗುಂದ: ಮನುಷ್ಯನಿಗೆ ಸುಖವೆಂಬುದು ಗಗನ ಕುಸುಮವಾಗಿದೆ. ದುಃಖ ಕಳೆದು ಸುಖ ದೊರೆಯಬೇಕಾದರೆ ನಾವೆಲ್ಲರೂ ಧರ್ಮದಿಂದ ನಡೆಯಬೇಕು ಎಂದು ಕುಂದಗೋಳ ಕಲ್ಯಾಣಪುರಮಠದ ಬಸವಣ್ಣಜ್ಜನವರು ಆಶೀರ್ವಚನ ನೀಡಿದರು.

ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅವರು, ಜೀವನದಲ್ಲಿ ಶಾಂತಿ, ಸಮೃದ್ಧಿ, ನೆಮ್ಮದಿ ದೊರೆಯಬೇಕಾದರೆ ನಾವೆಲ್ಲರೂ ಗ್ರಾಮ ದೇವತೆಯರನ್ನು ಭಜಿಸಬೇಕು. ತಿರ್ಲಾಪುರ ಗ್ರಾಮವೀಗ ಭಕ್ತಿ- ಭಾವಗಳ ತವರೂರಾಗಿದೆ. ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹಿರಿಯರೊಂದಿಗೆ ಯುವಕರು ಸಹ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸೇವಾಧಾರಿಗಳಾಗುತ್ತಿರುವುದು ಸಮಾಜದ ಅಭಿವೃದ್ಧಿಯ ಸೂಚಕವಾಗಿದೆ ಎಂದರು.

ಜನವೋ ಜನ: ತಿರ್ಲಾಪುರ ಗ್ರಾಮದಲ್ಲಿ ಹಿಂದೆಂದೂ ಕಂಡರಿಯದಂತೆ ಎತ್ತ ನೋಡಿದರೂ ಜನವೋ ಜನ. ಅಸಂಖ್ಯಾತ ಭಕ್ತ ಸಾಗರ ಭಕ್ತಿಭಾವದಲ್ಲಿ ತೇಲುತ್ತಿದೆ. ಅವಿಸ್ಮರಣೀಯ ಧಾರ್ಮಿಕ ಪವಿತ್ರತೆಯ ಭಾವನಾತ್ಮಕ ಅಭೂತಪೂರ್ವ ದೃಶ್ಯ ನೋಟಕ್ಕೆ ಗ್ರಾಮ ದೇವತೆಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವವು ಸೋಮವಾರ ಸಾಕ್ಷಿಯಾಗಿತ್ತು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಇರುವ ಕಾರಣ ಸುತ್ತಮುತ್ತಲ ಗ್ರಾಮ, ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಆಗಮಿಸಿ ದ್ಯಾಮವ್ವ ಹಾಗೂ ದುರ್ಗವ್ವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು.

ಗ್ರಾಮ ದೇವತೆ ಯುವಕ ಮಂಡಳ, ಪರ್ವತ ಮಲ್ಲಿಕಾರ್ಜುನ ಯುವಕ ಮಂಡಳ, ಶರಣಬಸವೇಶ್ವರ ಯುವಕ ಮಂಡಳ, ಮಾರುತಿ ಯುವಕ ಮಂಡಳ, ಇಂಚಗೇರಿಮಠ ಯುವಕ ಮಂಡಳ, ಹುಚ್ಚೀರೇಶ್ವರ ಯುವಕ ಮಂಡಳ, ಬೀರದೇವರ ಯುವಕ ಮಂಡಳ ಸೇರಿದಂತೆ ಗ್ರಾಮದ ಎಲ್ಲ ಮಹಿಳಾ ಸಂಘಗಳ ಮಹಿಳೆಯರು, ಯುವ ಬಳಗ ಶಾಲಾ ವಿದ್ಯಾರ್ಥಿಗಳು, ಗ್ರಾಮದ ಎಲ್ಲ ಹಿರಿಯರು ಸಮಾಗಮದಲ್ಲಿ ವಿವಿಧ ಕಾರ್ಯಗಳು ನೆರವೇರಿದವು. ನಂತರ ಪ್ರಸಾದ ಸೇವೆ ಜರುಗಿತು.

ತಿರ್ಲಾಪುರ ಗ್ರಾಮ ಸರ್ವಧರ್ಮದ, ಸರ್ವಜಾತಿಯ ಭಕ್ತರ ಕೇಂದ್ರವಾಗಿದೆ. ಗ್ರಾಮ ದೇವತೆಯರು ನಾಡಿನ ಜನರನ್ನು ಪೊರೆಯುವ ಆರಾಧ್ಯ ದೇವಿಗಳು. ಧರ್ಮ ರಕ್ಷಣೆಯೊಂದಿಗೆ ನಾಡಿನ ಶ್ರೇಯಸ್ಸಿಗೆ ದೇವಿಯ ಆಶೀರ್ವಾದವಿದೆ ಎಂದು ಪೌರಸೇವಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಕದಂ ಹೇಳಿದರು.

ಗ್ರಾಮದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಬಿಸಿಲು ಲೆಕ್ಕಿಸದೆ ಚಿಕ್ಕ ಮಕ್ಕಳು ಹಾಗೂ ಮಹಿಳೆಯರು, ಹಿರಿಯರು, ಯುವಕರು ದಂಡು ತಂಡೋಪತಂಡವಾಗಿ ಬರುತ್ತಿರುವುದನ್ನು ನೋಡಿದರೆ ಈ ಜನರು ಗ್ರಾಮ ದೇವತೆಗಳ ಮೇಲೆ ಇಟ್ಟಿರುವ ಆ ಭಕ್ತಿಯೇ ಸಾಕ್ಷಿ ಎಂದು ಸೋಮೇಶ್ವರ ರೈತರ ಸಹಕಾರಿ ಸಂಘ ನೂಲಿನ ಗಿರಣಿ ಲಕ್ಷ್ಮೇಶ್ವರ ಉಪಾಧ್ಯಕ್ಷ ಗುರುಸಿದ್ದಪ್ಪ ಮೆಣಸಿನಕಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ