ಸುಂಟಿಕೊಪ್ಪ: ಥೈಲ್ಯಾಂಡ್‌ನ ಬ್ಯಾಂಕಾಕ್ ಮತ್ತು ಶ್ರೀಲಂಕಾದ ರತ್ನಪುರದಲ್ಲಿ ನ.13ರವರೆಗೆ ನಡೆಯುವ ಅಂತಾರಾಷ್ಟ್ರೀಯ ಸೆಸ್ಟೋ ಬಾಲ್ ಚಾಂಪಿಯನ್ ಶಿಪ್‌ನ ಭಾರತ ಪುರುಷರ ತಂಡದ ನಾಯಕನಾಗಿ ಸುಂಟಿಕೊಪ್ಪದ ಮೊಹಮ್ಮದ್ ಶಾಹಿಲ್ ಅವರು ಆಯ್ಕೆಯಾಗಿದ್ದಾರೆ.
ಈ ಪಂದ್ಯಾವಳಿ ಯಲ್ಲಿ ಭಾಗವಹಿಸಲು ಶಾಹಿಲ್ ಅವರು ಮಂಗಳವಾರ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಿದರು. ಶಾಹಿಲ್ ಅವರು ಸುಂಟಿಕೊಪ್ಪದ ಕೆಇಬಿ ಬಳಿ ನಿವಾಸಿ ಕೆ.ಎ. ಉಸ್ಮಾನ್ ಮತ್ತು ಅಸ್ಮತ್ ದಂಪತಿಯ ಪುತ್ರ. ಬ್ಯಾಂಕಾಕ್‌ಗೆ ಪ್ರಯಾಣಿಸಿದ ಭಾರತ ಸೆಸ್ಟೋ ಬಾಲ್ ತಂಡವನ್ನು ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಂತಾಮಣಿ ಶಾಸಕ ಡಾ.ಎಂ.ಸಿ. ಸುಧಾಕರ್ ಹಾಗೂ ಎಐಸಿಸಿ ಯುವ ಕಾಂಗ್ರೆಸ್ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು.ಸುಂಟಿಕೊಪ್ಪದ ಮೊಹಮ್ಮದ್ ಶಾಹಿಲ್ ಅವರ ನಾಯಕತ್ವದಲ್ಲಿ ಭಾರತ ಸೆಸ್ಟೋ ಬಾಲ್ ತಂಡ ಜಯ ಗಳಿಸಿ ಕೊಡಗಿನ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಲೆಂದು ಕ್ರೀಡಾಪ್ರೇಮಿಗಳು ಹಾರೈಸಿದ್ದಾರೆ.