ಶಿಶುಪಾಲನಾ ಕೇಂದ್ರದ ಮುಖ್ಯಸ್ಥರಿಗೆ ಜಿ.ಪಂ. ಸಿಇಒ ನೋಟಿಸ್

KannadaprabhaNewsNetwork | Published : Aug 10, 2024 1:38 AM

ಸಾರಾಂಶ

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಶಿಶುಪಾಲನಾ ಕೇಂದ್ರದ ನಿರ್ವಹಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನದಲ್ಲಿರುವ ವಿವಿಧ ಜನಪರ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವನ್ನು ಉದ್ದೇಶಿತ ಯೋಜನೆಗಳ ಅನುಷ್ಠಾನಕ್ಕಾಗಿ ಸದ್ಬಳಕೆ ಮಾಡಿಕೊಂಡು ಮುಂದಿನ ಮೂರು ದಿನಗಳೊಳಗಾಗಿ ವರದಿ ನೀಡುವಂತೆ ಜಿ.ಪಂ ಸಿಇಒ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನದಲ್ಲಿರುವ ಸಾಂತ್ವನ, ಸಖಿ, ಸ್ತ್ರೀಶಕ್ತಿ ಯೋಜನೆ ಮತ್ತು ಶಿಶುಪಾಲನಾ ಕೇಂದ್ರಗಳ ನಿರ್ವಹಣೆ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಭದ್ರಾವತಿ ತಾಲೂಕಿನಲ್ಲಿ ಇರುವ ಶಿಶುಪಾಲನಾ ಕೇಂದ್ರದ ನಿರ್ವಹಣೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಶಿಶುಪಾಲನಾ ಕೇಂದ್ರದ ಮುಖ್ಯಸ್ಥರಿಗೆ ನೋಟೀಸ್ ಜಾರಿ ಗೊಳಿಸಿದರು. ನಂತರ ಸ್ಥಳೀಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನಾ ವರದಿ ಸಲ್ಲಿಸಬೇಕು. ಅಲ್ಲಿನ ಹಣಕಾಸು ಮತ್ತು ಆಡಳಿತ ವ್ಯವಸ್ಥೆ ಬಗ್ಗೆಯೂ ಮಾಹಿತಿ ಒದಗಿಸುವಂತೆ ಅವರು ಮಹಿಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

ಅಲ್ಲದೇ ಸ್ಥಳೀಯ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧೀನದಲ್ಲಿ ಮಹಿಳಾ ಸಂಘಗಳಿಗೆ ನೀಡಲಾಗಿರುವ ವಾಣಿಜ್ಯ ಸಂಕೀರ್ಣದಲ್ಲಿ ರೂಮುಗಳನ್ನು ಬಾಡಿಗೆ ಪಡೆದ ಬಾಡಿಗೆದಾರರು ಹಲವು ವರ್ಷಗಳಿಂದ ಬಾಡಿಗೆ ಹಣ ಪಾವತಿಸುತ್ತಿಲ್ಲ. ಅಲ್ಲದೆ ಕಟ್ಟಡದ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಆದ್ದರಿಂದ ಮಹಿಳಾ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಡಲೇ ವರದಿ ನೀಡುವಂತೆ ತಾಕೀತು ಮಾಡಿದರು.

ಎಲ್ಲಾ ಅಂಗನವಾಡಿ ಕೇಂದ್ರಗಳ ನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿಯ ವಿವಿಧ ಯೋಜನೆಗಳಡಿಯಲ್ಲಿ ನೀಡಲಾಗಿರುವ ಹಣ ಸದ್ಬಳಕೆಯಾಗದಿರುವುದು ಗಮನಕ್ಕೆ ಬಂದಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಲ್ಲದೇ ಈಗಾಗಲೇ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳದೇ ವಿವಿಧ ಉದ್ದೇಶಗಳಿಗಾಗಿ ಹಣ ಬಿಡುಗಡೆಗೊಳಿಸುವಂತೆ ಬೇಡಿಕೆ ಪಟ್ಟಿ ಸಲ್ಲಿಸುತ್ತಿರುವುದು ಆಶ್ಚರ್ಯವೆನಿಸಿದೆ. ಬಿಡುಗಡೆಯಾಗಿರುವ ಅನುದಾನ, ಬಳಕೆಯಾಗದೇ ಉಳಿದ ಅನುದಾನ ಮತ್ತಿತರ ಹಣಕಾಸು ವಿಷಯಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ತಿಳಿಸಿದರು.

ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮುಂತಾದ ವಿವಿಧ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ಕಾನೂನು ಸಲಹೆ ಹಾಗೂ ಇತರ ನೆರವು ನೀಡುವ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಆರಂಭಿಸಲಾಗಿರುವ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿರುವ ಪ್ರಕರಣಗಳು, ಇತ್ಯರ್ಥಗೊಂಡ ಪ್ರಕರಣಗಳು, ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಲಾದ ಮತ್ತಿತರ ವಿಷಯಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ ಅವರು, ಈ ಎಲ್ಲಾ ಕೇಂದ್ರಗಳ ನಿರ್ವಹಣೆ ಕುರಿತು ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು.

ಸಾಂತ್ವನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಮಾಲೋಚಕರು ಹಾಗೂ ಕೇಂದ್ರದ ಮುಖ್ಯಸ್ಥರು ಆಯಾ ತಿಂಗಳ ಮಾಸಿಕ ವರದಿ ಹಾಗೂ ಆರ್ಥಿಕ ಸ್ಥಿತಿ-ಗತಿಗಳ ಕುರಿತು ವರದಿ ನೀಡುವಂತೆ ಸೂಚಿಸಿದ ಅವರು, ಈವರೆಗೆ ಮಾಹಿತಿ ಸಲ್ಲಿಸದಿರುವ ಕೇಂದ್ರಗಳಿಗೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರದಲ್ಲಿ ಸಿಸಿ ಟಿ.ವಿ. ಕ್ಯಾಮರಾ, ಕಂಪ್ಯೂಟರ್ ಅಳವಡಿಕೆ, ಬಯೋಮೆಟ್ರಿಕ್ ವ್ಯವಸ್ಥೆ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ವೈದ್ಯಾಧಿಕಾರಿ ಡಾ. ಕಿರಣ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಸೇರಿದಂತೆ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

Share this article