ಕನ್ನಡಪ್ರಭ ವಾರ್ತೆ ರಾಮನಾಥಪುರ
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ 7 ಮತ್ತು 63ರ ವ್ಯಾಪ್ತಿಯ ಹರಾಜು ಮಾರುಕಟ್ಟೆಯಲ್ಲಿ ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತದೆ. ಈಗಾಗಲೇ ಬಹುತೇಕ ಬೆಳೆಗಾರರು ಉತ್ಸಾಹದಿಂದ ತಂಬಾಕು ಹದ ಮಾಡುವುದರಲ್ಲಿ ಮತ್ತು ಕಟಾವು ಹಾಗೂ ಹದ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಈ ವರ್ಷ ಮೇ ಮತ್ತು ಜೂನ್‌ನಲ್ಲಿ ಸತತ ಮಳೆ ಸುರಿದಿದ್ದರಿಂದ ಅತಿಯಾದ ತೇವಾಂಶ ಉಂಟಾಗಿದ್ದು, ತಂಬಾಕು ಗಿಡಗಳ ಬೆಳವಣಿಗೆ ಕುಗ್ಗಿದೆ. ಪ್ರತಿ ವರ್ಷದಂತೆ ಗಿಡಗಳು ಬೆಳವಣಿಗೆ ಆಗದೆ ತಂಬಾಕು ಉತ್ಪಾದನೆ ತಗ್ಗುವ ಸಾಧ್ಯತೆಗಳು ಹೆಚ್ಚಿವೆ. ನಾಟಿ ಮಾಡಿದ ನಂತರ ಮಾಡಬೇಕಾಗಿರುವ ಎಲ್ಲಾ ಕೃಷಿ ಚಟುವಟಿಕೆಗಳನ್ನು ಮಾಡಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಗಿಡಗಳು ಬೆಳವಣಿಗೆ ಆಗದಿರುವುದು ಈ ಬಾರಿ ಬೆಳೆ ಇಳುವರಿ ಕುಂಠಿತವಾಗಲಿದೆ.
ಮೇ ತಿಂಗಳಲ್ಲಿ ಮಳೆ ಕಡಿಮೆ ಇದ್ದುದರಿಂದ ನಾಟಿ ಮಾಡಿದ ಗಿಡಗಳು ಸಾಕಷ್ಟು ಬೆಳವಣಿಗೆ ಆಗಲು ಸಾಧ್ಯವಾಯಿತು. ನಂತರದಲ್ಲಿ ನಾಟಿ ಮಾಡಿದ ತಂಬಾಕು ಗಿಡಗಳು ಸತತ ಮಳೆಯಿಂದಾಗಿ ಸಮರ್ಪಕವಾಗಿ ಬೇರು ಬಿಡಲು ಮತ್ತು ಬೆಳವಣಿಗೆ ಆಗಲು ತೊಂದರೆಯಾಯಿತು. ಈ ಬಾರಿ ಪ್ಲಾಟ್ ಫಾರಂ 7 ಮತ್ತು 63ರ ವ್ಯಾಪ್ತಿಯಲ್ಲಿ ಸುಮಾರು 20 ರಿಂದ 25 ಸಾವಿರ ತಂಬಾಕು ಬೆಳಗಾರರಿದ್ದು ಬಹುತೇಕ ತಂಬಾಕು ಹದಗೊಳಿಸುತ್ತಿದ್ದಾರೆ.