21 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ಮಾರುವಂತಿಲ್ಲ: ಎಡಿಸಿ ರಾಜು

KannadaprabhaNewsNetwork |  
Published : Sep 03, 2026, 03:00 AM IST
ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು | Kannada Prabha

ಸಾರಾಂಶ

21 ವರ್ಷದ ಒಳಗಿನ ವ್ಯಕ್ತಿಗಳಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಸೂಚಿಸಿದರು.

ಮಂಗಳೂರು: 21 ವರ್ಷದ ಒಳಗಿನ ವ್ಯಕ್ತಿಗಳಿಗೆ ಸಿಗರೇಟ್ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಸೂಚಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯಿದೆ 2024ಕ್ಕೆ ತಂದಿರುವ ತಿದ್ದುಪಡಿ ಅನ್ವಯ 21 ವರ್ಷದೊಳಗಿನ ಯಾವುದೇ ವ್ಯಕ್ತಿಗಳಿಗೆ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ಸಿಗರೇಟ್ ಚಿಲ್ಲರೆಯಾಗಿ ಮಾರುವುದನ್ನೂ ಹಾಗೂ ಶಾಲಾ-ಕಾಲೇಜುಗಳ 100 ಮೀಟರ್ ಅಂತರದಲ್ಲಿ ಇವುಗಳ ಮಾರಾಟ ನಿಷೇಧಿಸಲಾಗಿದೆ. ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುವವರಿಗೂ 21 ವರ್ಷ ಆಗಿರಬೇಕು ಎಂದರು.

ಈ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳು ಅಂಗಡಿ, ಹೋಟೆಲ್, ಕೆಫೆಗಳಲ್ಲಿ ನಿರಂತರ ತಪಾಸಣೆ ನಡೆಸಬೇಕು. ಅಪ್ರಾಪ್ತರಿಗೆ ಸಿಗರೇಟ್ ಮಾರಾಟ ಕಂಡುಬಂದರೆ, ಅವುಗಳ ಲೈಸನ್ಸ್ ರದ್ದು ಮಾಡಬೇಕು. ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ/ಗ್ರಾಮ ಪಂಚಾಯಿತಿ ಮತ್ತು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಿಗರೇಟ್‍ಗಳನ್ನು ಇಡೀ ಪ್ಯಾಕ್‍ನಲ್ಲಿ ಮಾರಾಟ ಮಾಡಬೇಕು. ಪ್ಯಾಕ್ ತೆರೆದು ಸಿಂಗಲ್ ಆಗಿ ಸಿಗರೇಟ್ ಮಾರಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಿಗರೇಟ್ ಸೇದುವವರಿಗೆ ಅನುಕೂಲವಾಗಲು ಲೈಟರ್ ಅಥವಾ ಬೆಂಕಿಪೆಟ್ಟಿಗೆ ಇಡುವವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಎಳೆಯುವುದು, ತಂಬಾಕು ತಿಂದು ಉಗಿಯುವುದು ಕಂಡುಬಂದರೆ ಅವರಿಗೆ ನಿಯಮಾನುಸಾರ 1,000 ರು. ದಂಡ ವಿಧಿಸಿ, ಎಚ್ಚರಿಕೆ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಆಗಿಂದಾಗ್ಗೆ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸಬೇಕು. ಈ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್‍ಗಳನ್ನು ಆಗಿಂದಾಗ್ಗೆ ಪರಿಶೀಲಿಸುವಂತೆ ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಗೆ ಸೂಚಿಸಿದ ಅವರು, ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯೊಳಗಿರುವ ಅಂಗಡಿಗಳಲ್ಲಿ ಸಿಗರೇಟ್-ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಿಗಾ ವಹಿಸಬೇಕು. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಸ್‍ಡಿಎಂಸಿಗಳು ‘ತಂಬಾಕು ಮುಕ್ತ ಶಾಲೆ’ಗಳೆಂದು ಪ್ರತಿ ತಿಂಗಳು ದೃಢಢೀಕರಣ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಧೂಮಪಾನ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಅಂಗಡಿ, ಹೋಟೆಲ್‍ಗಳಿಗೆ ಲೈಸನ್ಸ್ ನೀಡುವಾಗ ತಂಬಾಕು ನಿಯಂತ್ರಣ ಕಾಯಿದೆಯ ಷರತ್ತು ಮತ್ತು ನಿಬಂಧನೆಗಳನ್ನು ನಮೂದಿಸಬೇಕು ಎಂದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಎಸಿಪಿ ನಝ್ಮಾ ಫಾರೂಖಿ, ವೆನ್‍ಲಾಕ್ ಆಧೀಕ್ಷಕ ಡಾ.ಶಿವಪ್ರಕಾಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಅಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್ ಮತ್ತಿತರರು ಇದ್ದರು.

---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮವಿಲ್ಲ
ಅಭಿವೃದ್ಧಿ ಪ್ರವರ್ತಕ ಮುರುಗೇಶ ನಿರಾಣಿಗೆ 61ರ ಸಂಭ್ರಮ