ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಕೀಲಾರ- ಆಲಕೆರೆಯಲ್ಲಿ ವೀರಭದ್ರೇಶ್ವರಸ್ವಾಮಿ ಕೊಂಡ ಬಂಡಿ ಉತ್ಸವದಲ್ಲಿ ರಾಜ್ಯದ ಅತಿ ದೊಡ್ಡ ಕೊಂಡೋತ್ಸವಕ್ಕೆ ಮಂಗಳವಾರ ಭಕ್ತರ ಜೈಕಾರದೊಂದಿಗೆ ಸಂಜೆ ಅಗ್ನಿ ಸ್ಪರ್ಶ ಮಾಡಲಾಯಿತು. ಅಗ್ನಿ ಕೊಂಡಕ್ಕೆ ಸುಮಾರು 100 ಟನ್ ಕಟ್ಟಿಗೆ ಬಳಕೆ ಮಾಡಲಾಗಿದೆ. 72 ಅಡಿ ಉದ್ದ, 15 ಅಡಿ ಅಗಲ ಹಾಗೂ 22 ಅಡಿ ಎತ್ತರದ ಕೊಂಡೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.ಮಂಗಳವಾರ ಬೆಳಗ್ಗಿನಿಂದಲೇ ಕೊಂಡ ಪ್ರದಕ್ಷಣಿಯಲ್ಲಿ ಮಹಿಳೆಯರು ಹೆಜ್ಜೆ ನಮಸ್ಕಾರ ಹಾಕುವ ಮೂಲಕ ಹಾಗೂ ಬಾಯಿಬೀಗದಲ್ಲಿ ಸಾವಿರಾರು ಜನ ಭಾಗವಹಿಸಿ ಹರಕೆ ತೀರಿಸಿದರು.
ಕೀಲಾರದ ಕಂಚಿನ ಮಾರಮ್ಮ ಹಾಗೂ ಸೋಮೇಶ್ವರ ದೇವಸ್ಥಾನದಿಂದ ಕೀಲಾರ ಗ್ರಾಮಸ್ಥರು 4 ಜೋಡೆತ್ತುಗಳೊಂದಿಗೆ ಮೆರವಣಿಗೆ ಮೂಲಕ ಆಲಕೆರೆ ಗ್ರಾಮದ ಗಡಿಗೆ ಬಂದರು. ಆಲಕೆರೆ ಗ್ರಾಮಸ್ಥರು ಎಲ್ಲರನ್ನೂ ಬರಮಾಡಿಕೊಂಡರು. ತಮಟೆ ಸದ್ದಿನ ಜತೆ ಮೆರವಣಿಗೆ ಮೂಲಕ ಜೋಡೆತ್ತುಗಳು ಹಾಗೂ ಗ್ರಾಮಸ್ಥರು ದೇವಸ್ಥಾನದ ಆವರಣಕ್ಕೆ ಆಗಮಿಸಿದ್ದು ವಿಶೇಷ ಎನಿಸಿತು.ಆಲಕೆರೆ ಗ್ರಾಮದ ಬಂಡಿಗಳನ್ನು ಕಟ್ಟಿ ಗುಡ್ಡಪ್ಪರನ್ನು ಹೊತ್ತ ಬಂಡಿಗಳು ಕೊಂಡದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಜೆ 5.05ಕ್ಕೆ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಕೊಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.
ಉತ್ಸವದಲ್ಲಿ ರಾತ್ರಿಯಿಡೀ ರಂಗ ಕುಣಿತ ನಡೆಯುತ್ತದೆ. ಮಧ್ಯರಾತ್ರಿ ದೇವರಿಗೆ ಹೂ ಹೊಂಬಾಳೆ ನಡೆಸಿ ಬುಧವಾರ ಬೆಳಗ್ಗೆ ದೇವರ ಗುಡ್ಡರಾದ ರೇಣುಕಾಸ್ವಾಮಿ ಹಾಗೂ ಕಾಂತೇಶ್ ಕುಮಾರ್ ಅವರು ಕೊಂಡ ಹಾಯುವರು. ಪ್ರತಿ 12 ವರ್ಷಕ್ಕೊಮ್ಮೆ ಕೊಂಡೋತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಕಳೆದ 24 ವರ್ಷಗಳಿಂದ ಕೊಂಡೋತ್ಸವ ಹಾಗೂ ಜಾತ್ರಾಮಹೋತ್ಸವ ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ಕೊಂಡೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.