ಇಂದು ಗುರುಗುಂಟಾ ಅಮರೇಶ್ವರ ಜಾತ್ರೆ, ರಥೋತ್ಸವ

KannadaprabhaNewsNetwork | Published : Mar 25, 2024 12:46 AM

ಸಾರಾಂಶ

ಕಳಸ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಪುರವಂತಿಗೆ ಸೇವೆ, ಕುಸ್ತಿ, ಭಾರ ಎತ್ತುವ ಸ್ಪರ್ಧೆ ಆಯೋಜನೆ. ಸುತ್ತಮುತ್ತ ಗ್ರಾಮಗಳ ಜನರ ಸಂಪ್ರದಾಯ, ಪದ್ಧತಿ, ರೂಢಿಗಳ ಚಾಚು ತಪ್ಪದೇ ಆಚರಣೆ ಮಾಡುತ್ತಾರೆ. ಜಾತ್ರೆಗೆ ಅಗತ್ಯದ ಸೌಲತ್ತುಗಳನ್ನು ಲಿಂಗಸುಗೂರು ತಾಲೂಕು ಆಡಳಿತ ಸಿದ್ಧತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಜಿಲ್ಲೆಯ ಐತಿಹಾಸಿಕ ಬಹು ಧಾರ್ಮಿಕ ನೆಲೆ, ಗುರುಗುಂಟಾ ಅಮರೇಶ್ವರ ಜಾತ್ರೆಗೆ ಸುಕ್ಷೇತ್ರ ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ.

ಹೋಳಿ ಹುಣ್ಣುಮೆ ದಿನ ಪೂರ್ವ ದಿಕ್ಕಿನಲ್ಲಿ ಪೂರ್ಣ ಚಂದ್ರನ ದರ್ಶನವಾಗುತ್ತಿದ್ದಂತೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಮರೇಶ್ವರ ದೇವರ ಮಹಾರಥೋತ್ಸವ ಎಳೆಯಲಾಗುತ್ತದೆ. ಹುಣ್ಣಿಮೆ ದಿನ ನಡೆಯುವ ಜಾತ್ರೆ ಪ್ರಕೃತಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಇಂದಿಗೂ ಇದೇ ಸಂಪ್ರದಾಯ ಮುಂದುವರಿದಿದೆ.

ರಥೋತ್ಸವಕ್ಕೂ ಮೊದಲು ಗುರುಗುಂಟಾ, ಗುಂತಗೋಳದ ಸಂಸ್ಥಾನದ ಅರಸು ಮನೆತನಗಳು, ಹೊನ್ನಹಳ್ಳಿ, ಯರಡೋಣೀ, ದೇರವಬೂಪುರ, ಮೆಟ್ಟಮರಡಿದೊಡ್ಡಿ ಸೇರಿದಂತೆ ಕಳಸ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಪುರವಂತಿಗೆ ಸೇವೆ, ಕುಸ್ತಿ, ಭಾರ ಎತ್ತುವ ಸ್ಪರ್ಧೆಯೂ ಇರುತ್ತದೆ. ಸುತ್ತಮುತ್ತ ಗ್ರಾಮಗಳ ಜನರ ಸಂಪ್ರದಾಯ, ಪದ್ಧತಿ, ರೂಢಿಗಳ ಚಾಚು ತಪ್ಪದೇ ಆಚರಣೆ ಮಾಡುತ್ತಾರೆ. ಜಾತ್ರೆಗೆ ಅಗತ್ಯದ ಸೌಲತ್ತುಗಳನ್ನು ತಾಲೂಕು ಆಡಳಿತ ಸಿದ್ಧತೆ ಮಾಡಿದೆ.

ಜಾತ್ರೆಗೆ 50 ಬಸ್‌ಗಳು: ಅಮರೇಶ್ವರ ಜಾತ್ರೆಗೆ ಬಂದು ಹೋಗಲು ಲಿಂಗಸುಗೂರು ಸಾರಿಗೆ ಘಟಕದಿಂದ ಈ ಸಲ 50ಕ್ಕೂ ಅಧಿಕ ಬಸ್ಸುಗಳು ಜಾತ್ರೆಯಲ್ಲಿ ಸಂಚರಿಸಲಿವೆ. ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಮನಗಂಡಿರುವ ತಾಲೂಕು ಆಡಳಿತ ಮತ್ತು ದೇವಸ್ಥಾನ ಸಮಿತಿ ಜನರಿಗೆ ಓಡಾಡಲು ಸುಗಮ ಸಾರಿಗೆ ವ್ಯವಸ್ಥೆ ಮಾಡಿದೆ.

ಕುಡಿಯುವ ನೀರು, ಕ್ಯಾಮೆರಾ ವ್ಯವಸ್ಥೆ: ದೇವಸ್ಥಾನ ಗರ್ಭಗುಡಿ, ಪ್ರಾಂಗಣದಲ್ಲಿ 16 ಸಿಸಿ ಕ್ಯಾಮೆರಾಗಳು ಇವೆ. ಲಕ್ಷಾಂತರ ಜನರ ಓಡಾಟ ಇರುವುದರಿಂದ ಒಟ್ಟು 50 ಸಿಸಿ ಕ್ಯಾಮೆರಾಗಳ ಕಣ್ಗಾವಲು ಇದೆ. ಜಾತ್ರೆಗೆ ಕುಡಿಯುವ ನೀರು ಒದಗಿಸುವ ಸವಾಲಿನ ಕೆಲಸವಾಗಿದೆ. ಬೀಕರ ಬರದಿಂದ ಜಲಮೂಲ ಪಾತಾಳ ಕಂಡಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಸ್ಥಳೀಯ ಜಲಮೂಲದ ಜೊತೆಗೆ ಬಲದಂಡೆ ನಾಲೆಯಿಂದ ನೀರು ಪಡೆಯಲಾಗುತ್ತದೆ. ತಾಲೂಕು ಪಂಚಾಯಿತಿ ಸೂಕ್ತ ಏರ್ಪಾಡು ಮಾಡಿವೆ.

ಆಸ್ಪತ್ರೆ: ಬಿಸಿಲಿನ ಬೇಗೆ ಹೇಳತೀರದಾಗಿದೆ. ಇದರಿಂದ ಆರೋಗ್ಯ ಇಲಾಖೆಗಳಿಂದ ಪಶು ಮತ್ತು ಮನುಷ್ಯರಿಗೆ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿವೆ. ಜಾತ್ರೆಯಲ್ಲಿ ಪಾಲ್ಗೊಂಡ ಜನ ಹಾಗೂ ಜಾನುವಾರಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ತೆರೆಯಲಾಗಿದೆ.

ಸ್ವಚ್ಛತೆಗೆ ಆಧ್ಯತೆ: ರಥಬೀದಿ, ಶೌಚಾಲಯ, ಪಾದಚಾರಿ ರಸ್ತೆ, ಬಸ್ ನಿಲ್ದಾಣ, ದೇವಸ್ಥಾನದ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಈ ಸಲದ ಜಾತ್ರಾ ತಯಾರಿಯಲ್ಲಿ ಪ್ರಮುಖವಾಗಿ ಕಂಡು ಬಂದಿದ್ದು ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ.

ಪ್ರತ್ಯೇಕ ಮಳಿಗೆ: ಆಟಿಕೆ ಸಾಮಾನು, ಬಳೆ, ಬಾಂಡೆ ಸಾಮಾನು, ಮಣ್ಣಿಗೆ ಗಡಿಗಿ, ಬೆಂಡು ಬೆತ್ತಾಸು, ಖಾನಾವಳಿ, ಹೊಟೇಲ್, ಮನೋರಂಜನೆ ಸೇರಿದಂತೆ ಪ್ರತ್ಯೇಕ ಮಳಿಗೆಗಳು ತೆರೆಯಲಾಗಿದೆ. ಕೃಷಿ ಪರಿಕರಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ಅಮರೇಶ್ವರದಲ್ಲಿ ತಾಲೂಕು ಆಡಳಿತ ದೇವಸ್ಥಾನ ಸಮಿತಿ ಸರ್ವ ರೀತಿಯಲ್ಲಿ ಏರ್ಪಾಡುಗಳನ್ನು ಒಪ್ಪ-ಹೊರಣವಾಗಿ ಮಾಡಿಕೊಂಡಿದೆ. ಅಮರೇಶ್ವರ ಜಾತ್ರೆಗೆ ತಾಲೂಕು ಆಡಳಿತದಿಂದ ಎಲ್ಲಾ ಕ್ರಮಗಳ ವಹಿಸಲಾಗಿದೆ. ಕುಡಿಯುವ ನೀರು, ಸಂಚಾರ, ಜಾನುವಾರುಗಳ ಜಾತ್ರೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ರಥೋತ್ಸವದ ಯಶಸ್ವಿಗೆ ದೇವಸ್ಥಾನ ಸಮಿತಿ ಸಕಲ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ.

ಡಾ.ಮಲ್ಲಪ್ಪ ಯರಗೋಳ, ತಹಸೀಲ್ದಾರ್‌, ಲಿಂಗಸುಗೂರು.

Share this article