ಕನ್ನಡಪ್ರಭ ವಾರ್ತೆ ದಾವಣಗೆರೆ
ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿಶ್ವ ವಿದ್ಯಾನಿಲಯದ 11ನೇ ಘಟಿಕೋತ್ಸವ ಸಮಾರಂಭ ಮಾ.12ರಂದು ನಡೆಯಲಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ 14,357 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪದವಿಯನ್ನು, 45 ವಿದ್ಯಾರ್ಥಿಗಳು 79 ಚಿನ್ನದ ಪದಕ ಹಾಗೂ 64 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿದ್ದಾರೆ ಎಂದು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.ತಾಲೂಕಿನ ಶಿವಗಂಗೋತ್ರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ 11ಕ್ಕೆ ದಾವಿವಿ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರ ಅಧ್ಯಕ್ಷತೆಯ ಘಟಿಕೋತ್ಸವದಲ್ಲಿ ಸಹ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರಲಿದ್ದಾರೆ. ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಕಳೆದ ವರ್ಷ ಬಿಎ, ಬಿಕಾಂ, ಬಿಎಸ್‌ಸಿ, ಬಿಇಡಿ, ಬಿಪಿಇಡಿ, ಬಿವಿಎ ಸೇರಿ ಸ್ನಾತಕ ಪದವಿಯಲ್ಲಿ ಒಟ್ಟು16,140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12,265 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರೊಂದಿಗೆ ಶೇ.75.99ರಷ್ಟು ಫಲಿತಾಂಶ ಬಂದಿದೆ. ಇವರಲ್ಲಿ 4977 ಪುರುಷ, 7288 ಮಹಿಳಾ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.ದಾವಿವಿಯ ಒಟ್ಟು 9 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದರೆ, 12 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ. 20 ವಿದ್ಯಾರ್ಥಿಗಳು 2 ಮತ್ತು 3ನೇ ರ‍್ಯಾಂಕ್ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 2177 ವಿದ್ಯಾರ್ಥಿಗಳು ಹಾಜರಾಗಿದ್ದು, 2092 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.96.09 ಫಲಿತಾಂಶ ಲಭಿಸಿದೆ. ಈ ಪೈಕಿ 778 ವಿದ್ಯಾರ್ಥಿಗಳು, 1314 ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿಗೆ ಭಾಜನರಾಗಿದ್ದಾರೆ. ಒಟ್ಟು 30 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಪಡೆದರೆ, 33 ವಿದ್ಯಾರ್ಥಿಗಳು ಚಿನ್ನದ ಪದಕ ಗಳಿಸಿದ್ದಾರೆ. 51 ವಿದ್ಯಾರ್ಥಿಗಳು 2 ಮತ್ತು 3ನೇ ರ‍್ಯಾಂಕ್ ಪಡೆಯಲಿದ್ದಾರೆ ಎಂದು ಪ್ರೊ.ಬಿ.ಡಿ.ಕುಂಬಾರ ವಿವರಿಸಿದರು.
ಕುಲ ಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲ ಸಚಿವ ಪ್ರೊ.ಸಿ.ಕೆ.ರಮೇಶ, ಹಣಕಾಸು ಅಧಿಕಾರಿ ದ್ಯಾಮನಗೌಡ ತಮ್ಮನಗೌಡ್ರ, ವಿವಿಧ ನಿಕಾಯಗಳ ಡೀನ್‌ಗಳಾದ ಪ್ರೊ.ಯು.ಎಸ್.ಮಹಾಬಲೇಶ್ವರ, ಪ್ರೊ.ಆರ್.ಶಶಿಧರ, ಪ್ರೊ.ಕೆ.ವೆಂಕಟೇಶ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಿದ್ದರು.............
ದೀಪ್ತಿ ದಾವಿವಿ ಚಿನ್ನದ ರಾಣಿ!ದಾವಣಗೆರೆ ವಿವಿಯಲ್ಲಿ ಈ ಸಲವೂ ಮಹಿಳೆಯರೇ ಉತ್ತಮ ಶೈಕ್ಷಣಿಕ ಸಾಧನೆ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ದೀಪ್ತಿ ಜೆ.ಗೌಡರ್ 5 ಪದಕಗಳೊಂದಿಗೆ ಈ ವರ್ಷ ದಾವಿವಿ ಚಿನ್ನದ ರಾಣಿ ಕೀರ್ತಿಗೆ ಪಾತ್ರರಾಗಿದ್ದಾರೆ. ಸ್ನಾತಕ ಪದವಿಯಲ್ಲಿ ಹೊನ್ನಾಳಿ ಎಸ್ಎಂಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎಸ್.ಸಿಂಧುಬಾಯಿ 3 ಚಿನ್ನದ ಪದಕ ಗಳಿಸಿದ್ದಾರೆ. ಸ್ನಾತಕ, ಸ್ನಾತಕೋತ್ತರ ಪದವಿ ಸೇರಿ ಒಟ್ಟು 79 ಚಿನ್ನದ ಪದಕ 45 ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದು, ಇದರಲ್ಲಿ 39 ವಿದ್ಯಾರ್ಥಿನಿಯರಿದ್ದರೆ, 6 ವಿದ್ಯಾರ್ಥಿಗಳಿದ್ದಾರೆ. ಸ್ನಾತಕ ಪದವಿಯಲ್ಲಿ 10 ವಿದ್ಯಾರ್ಥಿನಿಯರು, ಇಬ್ಬರು ಪುರುಷ ವಿದ್ಯಾರ್ಥಿಗಳು 20 ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 29 ವಿದ್ಯಾರ್ಥಿನಿಯರು, 4 ವಿದ್ಯಾರ್ಥಿಗಳು, 50 ಸ್ವರ್ಣ ಪದಕ ಗಳಿಸಿದ್ದಾರೆ.
................ವಿವಿಯಿಂದ 64 ಮಂದಿಗೆ ಪಿಎಚ್‌ಡಿ ಪದವಿ
ದಾವಿವಿಲ್ಲಿ ಈ ಸಲ ಒಟ್ಟು 14 ಅಧ್ಯಯನ ವಿಭಾಗಗಳ 64 ಸಂಶೋಧಕರು ಪಿಎಚ್‌ಡಿ ಪದವಿ ಪಡೆಯಲಿದ್ದಾರೆ. ಅರ್ಥಶಾಸ್ತ್ರ ಅಧ್ಯಯನ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ ತಲಾ 13 ಜನ ಪಿಎಚ್‌ಡಿ ಪದವಿ ಪಡೆದರೆ, ಗಣಿತ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ 9, ಶಿಕ್ಷಣ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ 6 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ಆಡಳಿತ ನಿರ್ವಹಣೆ ವಿಭಾಗ, ಅಣು ಜೀವಿ ವಿಜ್ಞಾನ, ಆಹಾರ ತಂತ್ರಜ್ಞಾನ, ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ತಲಾ ಮೂವರು, ಸಮಾಜ ಸೇವೆ ಅಧ್ಯಯನ ವಿಭಾಗ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ತಂತ್ರಜ್ಞಾನ ವಿಭಾಗದಲ್ಲಿ ತಲಾ ಇಬ್ಬರು, ಇಂಗ್ಲೀಷ್ ಅಧ್ಯಯನ ವಿಭಾಗದಲ್ಲಿ ಒಬ್ಬರು ಪಿಎಚ್‌ಡಿ ಪದವಿ ಪಡೆದಿದ್ದಾರೆ...........................
ದಾವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ದಾವಣಗೆರೆ ವಿಶ್ವ ವಿದ್ಯಾನಿಲಯದಿಂದ ಈ ಬಾರಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ, ಹಿರಿಯ ವ್ಯಂಗ್ಯ ಚಿತ್ರಕಾರ ಎಚ್.ಬಿ.ಮಂಜುನಾಥ್‌ರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಗೌರವ ಡಾಕ್ಟರೇಟ್ ಪದವಿಗಾಗಿ ಒಟ್ಟು 6 ಅರ್ಜಿ ಬಂದಿದ್ದವು. ಅವುಗಳ ಉನ್ನತ ಮಟ್ಟದ ತಜ್ಞರ ಸಮಿತಿ ಪರಿಶೀಲಿಸಿ, ನಾಲ್ವರ ಹೆಸರು ಶಿಫಾರಸ್ಸು ಮಾಡಿತ್ತು. ಅದರಲ್ಲಿ ರಾಜ್ಯಪಾಲರು ಮೂವರ ಹೆಸರು ಅಂತಿಮಗೊಳಿಸಿದ್ದಾರೆ ಎಂದು ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
........