ಇಂದು ಐತಿಹಾಸಿಕ ಶ್ರೀಭೋಗಾಪುರೇಶ ರಥೋತ್ಸವ

KannadaprabhaNewsNetwork | Published : Apr 5, 2025 12:47 AM

ಸಾರಾಂಶ

ಮಧ್ಯಮ ಪಾಂಡವ, ಅರ್ಜುನನ ಮರಿಮೊಮ್ಮಗನಾದ ಜನಮೇಜಯ ಮಹಾರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭೋಗಾಪುರೇಶ ದೇವಸ್ಥಾನ ಸುಪ್ರಸಿದ್ಧಿ ಹೊಂದಿದೆ. ಭಿನ್ನ ವಿಗ್ರಹ ಪೂಜೆಗೊಳ್ಳುತ್ತಿರುವ ಏಕೈಕ ದೇವಸ್ಥಾನ ಇದಾಗಿದೆ. ದಾಸರು, ಸಂತರು, ವಿಜ್ಞಾನಿಗಳು, ಪೀಠಾಧಿಪತಿಗಳು ದರ್ಶನ ತೆಗೆದುಕೊಂಡು ಅನುಗ್ರಹಿತರಾದ ವಿಶಿಷ್ಟ ಕ್ಷೇತ್ರವಾಗಿದ್ದು, ಶ್ರೀ ಭೋಗಾಪುರೇಶ ನವಲಿ ವಿಶಿಷ್ಟ ಕ್ಷೇತ್ರಗಳಲ್ಲಿ ಒಂದಾಗಿದೆ.

ಅಮರಪ್ಪ ಕುರಿ

ನವಲಿ:

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನವಲಿ ಶ್ರೀ ಭೋಗಾಪುರೇಶ್ವರ ಜಾತ್ರೆ ಏ. 5ರಂದು ನಡೆಯಲಿದೆ. ಈ ಹಿನ್ನೆಲೆ ದೇವಸ್ಥಾನದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ಶನಿವಾರ ಮಹಾ ರಥೋತ್ಸವ, ಸೋಮವಾರ ಕೊಂಡ (ಓಕಳಿ) ನಡೆಯಲಿದೆ.

ಮಧ್ಯಮ ಪಾಂಡವ, ಅರ್ಜುನನ ಮರಿಮೊಮ್ಮಗನಾದ ಜನಮೇಜಯ ಮಹಾರಾಜನಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಭೋಗಾಪುರೇಶ ದೇವಸ್ಥಾನ ಸುಪ್ರಸಿದ್ಧಿ ಹೊಂದಿದೆ. ಭಿನ್ನ ವಿಗ್ರಹ ಪೂಜೆಗೊಳ್ಳುತ್ತಿರುವ ಏಕೈಕ ದೇವಸ್ಥಾನ ಇದಾಗಿದೆ. ದಾಸರು, ಸಂತರು, ವಿಜ್ಞಾನಿಗಳು, ಪೀಠಾಧಿಪತಿಗಳು ದರ್ಶನ ತೆಗೆದುಕೊಂಡು ಅನುಗ್ರಹಿತರಾದ ವಿಶಿಷ್ಟ ಕ್ಷೇತ್ರವಾಗಿದ್ದು, ಶ್ರೀ ಭೋಗಾಪುರೇಶ ನವಲಿ ವಿಶಿಷ್ಟ ಕ್ಷೇತ್ರಗಳಲ್ಲಿ ಒಂದಾಗಿದೆ.

ಭೋಗಾಪುರೇಶ ದೇವಸ್ಥಾನದಲ್ಲಿ ಎರಡು ಮೂರ್ತಿಗಳು ಇದ್ದು, ಅದರಲ್ಲಿ ಒಂದು ಪ್ರಾಣದೇವರ ಮೂರ್ತಿ, ಇನ್ನೊಂದು ಉತ್ಸವ ಮೂರ್ತಿ. ಪಾಂಡವರ ಮರಿಮೊಮ್ಮಗನಾದ ಜನಮೇಜಯ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾನೆಂಬ ಪ್ರತೀತಿ ಇದೆ. ಈ ಹಿಂದೆ ಇಲ್ಲಿ ಕಳ್ಳರು ಪ್ರಾಣ ದೇವರ ಮೂರ್ತಿ ಅಡಿ ಇಟ್ಟಿದ ನಿಧಿ ತೆಗೆದುಕೊಂಡು ಆ ಮೂರ್ತಿಯನ್ನು ತುಂಡು-ತುಂಡಾಗಿ ಕತ್ತರಿಸಿ ದೇವಸ್ಥಾನದ ಎಡ ಭಾಗದಲ್ಲಿರುವ ಕೊಳ್ಳದಲ್ಲಿ (ಮಡವಿನಲ್ಲಿ) ಹಾಕಿ ಹೋಗಿದ್ದರು. ಮರುದಿನ ಅರ್ಚಕರು ಪೂಜೆಗೆ ಬಂದಾಗ ಮೂರ್ತಿ ಇಲ್ಲದೆ ಇರುವುದರಿಂದ ಆತಂಕಕ್ಕೆ ಒಳಗಾಗಿ ಗ್ರಾಮಸ್ಥರಿಗೆ ತಿಳಿಸಿದರು. ಆಗ ಶೀಘ್ರವೇ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಗ್ರಾಮಸ್ಥರು ನಿರ್ಣಯಿಸಿದರು. ಅದೇ ದಿನ ಅರ್ಚಕರ ಕನಸಿನಲ್ಲಿ ಕಾಣಿಸಿಕೊಂಡ ಶ್ರೀ ಭೋಗಾಪುರೇಶ, ನಾನು ದೇವಸ್ಥಾನದ ಎಡಭಾಗದ ಕೊಳದಲ್ಲಿ ಇದ್ದೇನೆ. ನನ್ನನ್ನು ಕಳ್ಳರು ತುಂಡು ತುಂಡಾಗಿ ಕತ್ತರಿಸಿ ಹಾಕಿದ್ದಾರೆ, ಆದ್ದರಿಂದ ನನ್ನನ್ನೇ ಪುನಃ ಪ್ರತಿಷ್ಠಾಪಿಸಿ ಹಾಗೂ 11 ದಿನ ದ್ವಾರದ ಬಾಗಿಲು ಮುಚ್ಚಿ ನಿಷ್ಠೆಯಿಂದ ಪೂಜೆ ಮಾಡಬೇಕೆಂದು ತಿಳಿಸಿದನು. ಅದರಂತೆ ಪ್ರತಿದಿನ ಪೂಜಾ-ಕೈಂಕರ್ಯ ನಡೆದವು. 10ನೇ ದಿನ ಪೂಜೆ ಮುಕ್ತಾಯವಾಗುವ ಸಮಯದಲ್ಲಿ ಬಲಕುಂದಿ ಗ್ರಾಮದಿಂದ ಬಂದಿದ್ದ ಭಕ್ತರೊಬ್ಬರು ನನಗೆ ದೇವರ ದರ್ಶನಬೇಕೆಂದು ಹಠ ಹಿಡಿದನು. ಆಗ ಅರ್ಚಕರು ಮತ್ತು ಗ್ರಾಮಸ್ಥರು ಬಾಗಿಲು ತೆಗೆದು ಶ್ರೀ ಭೋಗಾಪುರೇಶ್ವರನ ದರ್ಶನ ಮಾಡಿಸಿದರು. ಈ ಭಕ್ತನ ಹಠದಿಂದಾಗಿ ಮೂರ್ತಿಯು ಭಿನ್ನವಾಗಿದ್ದು, 11 ದಿನ ಪೂಜೆ ಮುಗಿದಿದ್ದರೆ ಮೂರ್ತಿ ಸಮಗ್ರವಾಗಿರುತ್ತಿತ್ತು ಎಂದು ಭಕ್ತರು ಹೇಳುತ್ತಾರೆ.

ಉತ್ಸವ ಮೂರ್ತಿ:

ಇಲ್ಲಿಯ ಉಪ್ಪಾರ ಸಮಾಜ ಈ ಉತ್ಸವ ಮೂರ್ತಿ ಪೂಜೆ ಮಾಡುತ್ತಿದೆ. ಅರ್ಚಕರು ಹೇಳುವಂತೆ 800 ವರ್ಷಗಳಿಂದ ನಮ್ಮ ಕುಟುಂಬ ಪೂಜೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿ ನೂರಾರು ವರ್ಷಗಳ ಹಿಂದೆ ಭೋಗಾಪುರ ಎಂಬ ಗ್ರಾಮವಿತ್ತು. ಅದು ನಶಿಸಿ ಹೋಗಿದ್ದರಿಂದ ಈಗ ನವಲಿ ಭೋಗಾಪುರೇಶ ಎಂದು ಕರೆಯುತ್ತಾರೆ.

ನವಲಿ ಭೋಗಪುರೇಶ್ವರ ದೇವಸ್ಥಾನ ಐತಿಹಾಸಿಕವಾಗಿದೆ. ಇಲ್ಲಿ ಭೋಗಪುರೇಶನ ಭಿನ್ನ ಮೂರ್ತಿಗೆ ಪೂಜೆ ನಡೆಯುತ್ತದೆ. ಪ್ರತಿ ವರ್ಷದಂತೆ ನಡೆಯುವ ಮಹಾರಥೋತ್ಸವ ಮತ್ತು ಓಕುಳಿ ಕೊಂಡೋತ್ಸವ ಕಾರ್ಯಕ್ರಮಕ್ಕೆ ನೆರೆಯ ಜಿಲ್ಲೆಗಳ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಭೋಗಪುರೇಶನ ಕೃಪೆಗೆ ಪಾತ್ರರಾಗುತ್ತಾರೆ.

ಶಿವರಡ್ಡಿ ಖ್ಯಾಡೇದ ನವಲಿ, ಸದಸ್ಯರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರನಮ್ಮ ಮೂಲ ಸ್ಥಳ ಸಂಕನಾಳ. ನಮ್ಮ ತಂದೆ 36 ವರ್ಷದಿಂದ ಶ್ರೀ ಭೋಗಾಪುರೇಶನ ಸೇವೆ ಮಾಡುತ್ತಿದ್ದಾರೆ. ನಮ್ಮ ಮನೆ ದೇವರೆಂದು ಪೂಜಿಸುತ್ತಿದ್ದೇವೆ.

ಡಾ. ವೆಂಕಟೇಶ ನಾಯಕ ಸಂಕನಾಳ, ಹುಳ್ಕಿಹಾಳ ಗ್ರಾಪಂ ಪಿಡಿಒ

Share this article