ಗದಗ: ತಾಲೂಕಿನ ಸುಕ್ಷೇತ್ರ ಬೆಳಧಡಿ ಸ್ವಯಂ ಉದ್ಭವ ಬಯಲು ಬಸವೇಶ್ವರ ದೇವಸ್ಥಾನದ ನೂತನ ತೇರು ಹಾಗೂ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 28ರಂದು ದೇವರಿಗೆ ಮಹಾರುದ್ರಾಭಿಷೇಕ, ಹೋಮ, ಹವನ, ಕಳಸಾರೋಹಣ ಜರುಗಲಿದ್ದು, ಸಾಯಂಕಾಲ ಅದ್ಧೂರಿ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಮಾರ್ಚ್ 1ರ ಸಂಜೆ 5ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಡುಬಿನ ಕಾಳಗ ಜರುಗಲಿದೆ.
ವಾರದಿಂದ ಪ್ರವಚನ: ಫೆ. 20ರಿಂದ ಗ್ರಾಮದಲ್ಲಿ ಪ್ರತಿದಿನ ಸಂಜೆ 7 ರಿಂದ 8 ರ ವರೆಗೆ ಶಿರುಂಜ ಗ್ರಾಮದ ಬಸವ ಸಮರ್ಥ ಜ್ಞಾನಯೋಗಾಶ್ರಮದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ನಡೆದುಕೊಂಡು ಬಂದಿದ್ದು, ಗ್ರಾಮದ ಸಾವಿರಾರು ಭಕ್ತರು ನಿತ್ಯವೂ ಪ್ರವಚನದಲ್ಲಿ ಭಾಗಿಯಾಗಿ ತಮ್ಮ ಆಧ್ಯಾತ್ಮಿಕ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡಿದ್ದು ಗ್ರಾಮದಲ್ಲಿ ವಿಶೇಷ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಇಂದು "ಸತ್ಯದ ದೀಪ ಹಚ್ಚಿದ ಬಡವ " ನಾಟಕ ಪ್ರದರ್ಶನ
ಬಯಲು ಬಸವೇಶ್ವರ ನೂತನ ತೇರು ಹಾಗೂ ಪ್ರಥಮ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಬಯಲು ಬಸವೇಶ್ವರ ನಾಟ್ಯ ಸಂಘ ಬೆಳಧಡಿ ಇವರಿಂದ "ಸತ್ಯದ ದೀಪ ಹಚ್ಚಿದ ಬಡವ ಅರ್ಥಾತ್ ಧರ್ಮದ ಮನೆಯಲ್ಲೊಂದು ಕರ್ಮದಕಾಂಡ " ಎನ್ನುವ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಜಿಗಳು ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಬಸವಸಮರ್ಥ ಸ್ವಾಮೀಜಿಗಳು ನೆರವೇರಿಸಲಿದ್ದಾರೆ ಗ್ರಾಮದ ಪ್ರಮುಖ ಮಂಜುನಾಥ ಹಳ್ಳೂರಮಠ ಹೇಳಿದರು.