ಇಂದು ಕೂಸನೂರ ಗ್ರಾಮದೇವಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ

KannadaprabhaNewsNetwork | Published : Feb 6, 2025 11:48 PM

ಸಾರಾಂಶ

ಗ್ರಾಮದ ಅಧಿದೇವತೆ ಗ್ರಾಮದೇವಿಯ ಸುಂದರ ಶಿಲ್ಪಕಲೆಯ ವಿನ್ಯಾಸದೊಂದಿಗೆ ನೂತನವಾಗಿ ನಿರ್ಮಾಣಗೊಂಡ ತಾಲೂಕಿನ ಕೂಸನೂರ ಗ್ರಾಮದ ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಹಾನಗಲ್ಲ: ಗ್ರಾಮದ ಅಧಿದೇವತೆ ಗ್ರಾಮದೇವಿಯ ಸುಂದರ ಶಿಲ್ಪಕಲೆಯ ವಿನ್ಯಾಸದೊಂದಿಗೆ ನೂತನವಾಗಿ ನಿರ್ಮಾಣಗೊಂಡ ತಾಲೂಕಿನ ಕೂಸನೂರ ಗ್ರಾಮದ ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ.

ಗ್ರಾಮದಲ್ಲಿ ಪುರಾತನ ಕಾಲದಿಂದ ಅಸ್ತಿತ್ವದಲ್ಲಿದ್ದ ದ್ಯಾಮವ್ವದೇವಿ ತನ್ನ ಪವಾಡಗಳಿಂದಲೇ ಖ್ಯಾತಿ ಹೊಂದಿದ್ದಾಳೆ. ಮಣ್ಣು ಮತ್ತು ಕಟ್ಟಿಗೆಯ ಹಳೆಯ ದೇವಸ್ಥಾನ ತೆರವು ಮಾಡಿ ನೂತನ ಶಿಲಾ ಕಟ್ಟಡ ನಿರ್ಮಾಣಕ್ಕೆ ಈಗ ಮೂರು ವರ್ಷದ ಹಿಂದೆ ರಚನೆಗೊಂಡ ದೇವಸ್ಥಾನ ಟ್ರಸ್ಟ್ ಮುಂದಾಗಿತ್ತು.

ಭಕ್ತರ ದೇಣಿಗೆ ಹಣದಿಂದ ದೇವಸ್ಥಾನ ಸುಂದರವಾಗಿ ರೂಪುಗೊಂಡಿದ್ದು, ಫೆ. 7ರಂದು ದೇವಿ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಕಳಸಾರೋಹಣ ಆಚರಣೆಗಳು ನೆರವೇರಲಿವೆ.

ಇದಕ್ಕೂ ಮುನ್ನ ಗ್ರಾಮದಲ್ಲಿ ಧಾರ್ಮಿಕ ಆಚರಣೆಗಳು ಮೇಳೈಸಿದ್ದು, ಜ. 24ರಿಂದ ಆರಂಭಗೊಂಡ ಶಿವಶರಣೆ ಗುಡ್ಡಾಪುರದ ಶ್ರೀ ದಾನಮ್ಮದೇವಿ ಪುರಾಣ ಫೆ. 4ರಂದು ಮಂಗಳವಾರ ಸಂಪನ್ನಗೊಂಡಿದೆ. ಸೋಮವಾರ ದೇವಸ್ಥಾನ ಪ್ರವೇಶ ನಿಮಿತ್ತ ಗಂಗೆಪೂಜೆ, ಗೋಪೂಜೆ, ವಾಸ್ತುಬಾಗಿಲು ಪೂಜೆ, ನವಗ್ರಹಶಾಂತಿ, ಪೂರ್ಣಾಹುತಿ, ನೇತ್ರೋನ್ಮೀಲನ ಮತ್ತಿತರ ಆಚರಣೆಗಳು ನಡೆದವು.

ಸಂಜೆ ಧಾರ್ಮಿಕ ಸಭೆ ನಡೆಯಿತು. ಬೆಂಗಳೂರ ಉತ್ತರಾಧಿಮಠದ ಸತ್ಯಧ್ಯಾನಾಚಾರ್ಯ ಕಟ್ಟಿ, ಕೂಡಲ ಗುರುಮಹೇಶ್ವರ ಸ್ವಾಮೀಜಿ, ಜಡೆ ಸಂಸ್ಥಾನಮಠದ ಮಹಾಂತ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಅರೆಮಲ್ಲಾಪೂರದ ಪ್ರಣವಾನಂದ ಸ್ವಾಮೀಜಿ, ಕೂಸನೂರ ತಿಪ್ಪಯ್ಯಸ್ವಾಮಿ ಆಶ್ರಮದ ಜ್ಯೋತಿರ್ಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಬುಧವಾರ ಬೆಳಗ್ಗೆ ದೇವಸ್ಥಾನ ಪ್ರಾಂಗಣದಲ್ಲಿ ಸುದರ್ಶನ ಮಹಾಯಾಗ ನಡೆಯಿತು. ಸಂಜೆ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತೀರ್ಥಹಳ್ಳಿ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಕುರಿತು ಯಕ್ಷಗಾನ ಪ್ರದರ್ಶನಗೊಂಡಿತು.

ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದೇವಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ನಂತರ ಕಳಸಾರೋಹಣ ನೆರವೇರಲಿದೆ.

ಕೂಸನೂರ ಗ್ರಾಮದೇವಿಗೆ ಭಕ್ತರು ದಂಡು ಅಧಿಕ. ಬಹಳ ದೂರದಿಂದ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಇಷ್ಟಾರ್ಥಗಳ ಸಿದ್ಧಿಗಾಗಿ ದೇವಿಗೆ ಹರಕೆ ಕಟ್ಟುತ್ತಾರೆ. ಮಕ್ಕಳ ಭಾಗ್ಯಕ್ಕೆ ದೇವಿಗೆ ಮೊರೆಯಿಡುತ್ತಾರೆ. ವ್ಯಾಜ್ಯಗಳು ದೇವಸ್ಥಾನದಲ್ಲಿ ಬಗೆಹರಿಯುತ್ತವೆ. ಕಳುವಾದ ವಸ್ತುಗಳು ದೇವಿಯ ಕೃಪೆಯಿಂದ ಲಭ್ಯವಾಗುತ್ತವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ ದೇವಸೂರ, ಕಾರ್ಯದರ್ಶಿ ಡಾ. ಸುನೀಲ ಹಿರೇಮಠ ಹೇಳುತ್ತಾರೆ.

Share this article