ಕಾರ್ಕಳದ ಬೊಳ್ಳೆಟ್ಟು ಎಂಬಲ್ಲಿ ಇಬ್ಬರು ನಕ್ಸಲರ ಹತ್ಯೆ ಮಾಡಿದ್ದ ಪೊಲೀಸ್
ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ
ರಾಜ್ಯದಲ್ಲೇ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದು ಇಂದಿಗೆ 21 ವರ್ಷ ಸಂದಿವೆ. ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಳ್ಳೆಟ್ಟು ಎಂಬಲ್ಲಿ 2003ರ ನವೆಂಬರ್ 17ರ ಮುಂಜಾನೆ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಅಡಗಿದ್ದ ಶಸ್ತ್ರ ಸಜ್ಜಿತ ಐವರು ನಕ್ಸಲರ ಪೈಕಿ ಇಬ್ಬರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಒಬ್ಬರನ್ನು ವಶಕ್ಕೆ ಪಡೆದಿದ್ದು, ಇಬ್ಬರು ತಪ್ಪಿಸಿಕೊಂಡಿದ್ದರು.ಅಂದು ನಡೆದ ಕಹಿ ಘಟನೆಯನ್ನು ಎನ್‌ಕೌಂಟರ್ ನಡೆದ ಮನೆಯ ಯಜಮಾನ ರಾಮಪ್ಪ ಪುಜಾರಿ ಅವರ ಪುತ್ರ ಪ್ರಶಾಂತ್ ಪೂಜಾರಿ ನೆನಪಿಸಿದ್ದಾರೆ.
2003ರ ನವೆಂಬರ್ 16ರಂದು ರಾತ್ರಿ ರಾಮಪ್ಪ ಪೂಜಾರಿ ಅವರ ಮನೆಗೆ ಐದು ಮಂದಿ ಶಸ್ತ್ರ ಸಜ್ಜಿತ ನಕ್ಸಲ್ ತಂಡ ಬಂದಿತ್ತು. ರಾತ್ರಿ ಊಟ ಮುಗಿಸಿದ ನಂತರ ಮನೆಯ ಚಾವಡಿಯಲ್ಲಿ ನಾಲ್ವರು ಮಲಗಿದ್ದರು. ಮನೆಯ ಹೊರಗೆ ಸರತಿಯಂತೆ ಗಂಟೆಗೊಮ್ಮೆ ಓರ್ವ ನಕ್ಸಲ್ ಗಸ್ತು ತಿರುಗುತ್ತಿದ್ದರು. ನಕ್ಸಲರ ಚಲನವಲನಗಳ ಮಾಹಿತಿಯಿದ್ದ ಪೊಲೀಸರು, ಮುಂಜಾನೆ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ನಕ್ಸಲರ ಮೇಲೆ ದಾಳಿ ನಡೆಸಿದ್ದರು. ಅಂದಿನ ಉಡುಪಿ ಎಸ್ಪಿಯಾಗಿದ್ದ ಮುರುಗನ್ ನೇತೃತ್ವದ ಪೊಲೀಸ್ ತಂಡ, ಮನೆಯ ಎದುರು ಗಸ್ತು ತಿರುಗುತ್ತಿದ್ದ ನಕ್ಸಲ್ ಪಾರ್ವತಿಯ ಕುತ್ತಿಗೆ ಬಂದುಕಿನಿಂದ ಗುಂಡು ಹಾರಿಸಿತ್ತು. ಗಾಯಗೊಂಡ ಪಾರ್ವತಿ, ಚಾವಡಿಯಲ್ಲಿ ಮಲಗಿದ್ದ ನಾಲ್ವರನ್ನು ಓಡಿ ಎಂದು ಉದ್ಘರಿಸಿ ಸಾವಿಗೀಡಾಗಿದ್ದಳು. ಘಟನೆ ವೇಳೆ ನಕ್ಸಲರಾದ ಆನಂದ ಹಾಗೂ ವೇಣು ಮನೆಯ ಹಿಂಬಾಗಿಲಿನಿಂದ ಕಾಡಿನತ್ತ ಓಡಿದ್ದರು. ಒಳಗಿದ್ದ ಹಾಜೀಮಾ ಎಂಬಾಕೆ ಪೊಲೀಸರ ಗುಂಡೇಟಿಗೆ ಗಾಯಗೊಂಡಿದ್ದು, ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಳು. ಯಶೋದಾ ಎಂಬಾಕೆಗೆ ಗುಂಡೇಟು ತಗುಲಿದ್ದು, ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಳು.ಎನ್ಕೌಂಟರ್ ನಡೆದ ಬಳಿಕ ಹಳೆಯ ಮನೆಯನ್ನು ಕೆಡವಿ ಹೊಸ ಮನೆಯನ್ನು ರಾಮಪ್ಪ ಪೂಜಾರಿ ಕಟ್ಟಿಸಿದ್ದಾರೆ. ರಾಮಪ್ಪ ಪೂಜಾರಿ ನಿಧನರಾಗಿದ್ದು, ಮಗ ಪ್ರಶಾಂತ್ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ. ಎನ್ಕೌಂಟರ್ ಕರಾಳ ಘಟನೆ ಮತ್ತೆಂದೂ ಮರುಕಳಿಸದಿರಲಿ ಎನ್ನುತ್ತಾರೆ ಪ್ರಶಾಂತ್ ಪೂಜಾರಿ.ಅಂದಿನ ಎನ್ಕೌಂಟರ್ ಘಟನೆ ನಡೆದು 21 ವರ್ಷಗಳು ಕಳೆದಿವೆ. ಬೊಳ್ಳೆಟ್ಟು ಪ್ರದೇಶವು ಇಪ್ಪತ್ತು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಇನ್ನಾದರು ಅಭಿವೃದ್ಧಿಯಾಗಲಿ ಎಂಬುವುದು ಪ್ರಶಾಂತ್ ಪೂಜಾರಿ ಆಶಯ
------------ಸರ್ಕಾರದ ಸೇವೆಗಳು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಪ್ಯಾಕೇಜ್ ನೀಡಲು ಆದ್ಯತೆ ನೀಡಲಾಗುವುದು. ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.।ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ