ಇಂದು ಪ್ರೊ.ಎಚ್‌ಎಬಿ ಅಮೃತ ಮಹೋತ್ಸವ ಸಂಭ್ರಮ

KannadaprabhaNewsNetwork |  
Published : Oct 25, 2026, 02:00 AM IST
ಹರಿಹರ ಕಡ್ಡಾಯವಾಗಿ ತೆಗೆದುಕೊಳ್ಳಿ.. | Kannada Prabha

ಸಾರಾಂಶ

ಸಾಹಿತಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಅಮೃತ ಮಹೋತ್ಸವ ಹಾಗೂ ಕಾವ್ಯ ಸಂಭ್ರಮ ಸಮಾರಂಭ ಅ.25ರಂದು ವಿದ್ಯಾನಗರದ ಐರಣಿ ಮಠ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಅಮೃತ ಮಹೋತ್ಸವ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಹೇಳಿದ್ದಾರೆ.

- ಐರಣಿ ಮಠ ಸಭಾಭವನದಲ್ಲಿ ಕಾವ್ಯ ಸಂಭ್ರಮ ಸಮಾರಂಭ: ಪ್ರೊ. ಸಿ.ವಿ.ಪಾಟೀಲ್‌- - -

ಕನ್ನಡಪ್ರಭ ವಾರ್ತೆ ಹರಿಹರ

ಸಾಹಿತಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಅಮೃತ ಮಹೋತ್ಸವ ಹಾಗೂ ಕಾವ್ಯ ಸಂಭ್ರಮ ಸಮಾರಂಭ ಅ.25ರಂದು ವಿದ್ಯಾನಗರದ ಐರಣಿ ಮಠ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಅಮೃತ ಮಹೋತ್ಸವ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಹೇಳಿದರು.

ನಗರದ ಎಸ್‌ಜೆವಿಪಿ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ಸಾಹಿತಿಯಾದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ. ನಿತ್ಯ ಕನ್ನಡತಾಯಿ ಭುವನೇಶ್ವರಿ ದೇವಿಯ ರಥವನ್ನು ಎಳೆಯುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದರು.

ಪ್ರೊ. ಎಚ್.ಎ.ಬಿ. ಸಂಕ್ಷಿಪ್ತ ಪರಿಚಯ:

ಅಂದಿನ ಧಾರವಾಡ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮಾಪುರ ಗ್ರಾಮದ ಶಿವಪೂಜಾ ನಿಷ್ಠರು ಹಾಗೂ ರಂಗಕರ್ಮಿಗಳು ಆಗಿದ್ದ ವೇ. ಅಡಿವೆಯ್ಯ ಸ್ವಾಮಿ ಮತ್ತು ದೇವೀರಮ್ಮ ದಂಪತಿಯ ಹಿರಿಯ ಪುತ್ರರಾದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದು, ಹರಿಹರ ನಗರದ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದ, ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ 1973ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ, ಪ್ರಾಚಾರ್ಯರಾಗಿ, ಶೈಕ್ಷಣಿಕ ಸಲಹೆಗಾರರಾಗಿ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮುದಾಯ, ಸಾಂಸ್ಕೃತಿಕ, ಸಂಘಟನೆ ಅಧ್ಯಕ್ಷರಾಗಿ ಹಲವು ರಂಗ ಚಟುವಟಿಕೆಗಳಲ್ಲಿ ಭಾಗವಹಿಸಿದವರು. ಇಂಗ್ಲಿಷ್ ಭಾಷೆಯ ಅಧ್ಯಯನ, ಅಧ್ಯಾಪನದ ಜೊತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗೆ ಅಪಾರವಾದ ಪ್ರೀತಿ- ಗೌರವ ಅಭಿಮಾನವುಳ್ಳವರಾಗಿರುವ ಎಚ್.ಎ. ಭಿಕ್ಷಾವರ್ತಿಮಠ ಅವರೊಳಗೆ ಅವಿತಿದ್ದ ಕವಿತ್ವ ಹಾಗೂ ಕವಿಯನ್ನು ಜಾಗೃತಗೊಳಿಸಿದವು. ಅದರ ಫಲಶೃತಿಯಂತೆ ಹರಿಹರದ ಅಭಯ ಪ್ರಕಾಶನದ ಮೂಲಕ 1981ರಲ್ಲಿ ಪ್ರಕಟವಾದ ಕನ್ನಡ ಶಾಯಿರಿಲೋಕ ಕೃತಿ ಮೂಲಕ, ಶಾಯಿರಿ ಕವಿಗಳೆಂದು ನಾಡಿನಾದ್ಯಾಂತ ಖ್ಯಾತರಾದರು. ನಂತರ ಚುಟುಕು ಕಾವ್ಯ ಮತ್ತು ಆಧುನಿಕ ವಚನ ರಚನೆಗಳಲ್ಲಿ ತಮ್ಮ ಪೂರ್ಣ ಪ್ರಮಾಣದ ಅನುಭವ ಹಾಗೂ ಅನುಭಾವಗಳನ್ನು ಅಭಿವ್ಯಕ್ತಿಸಿದ್ದಾರೆ. ಇವುಗಳೊಟ್ಟಿಗೆ ಸಾಮಾನ್ಯ ಕಾವ್ಯ ರಚನೆ ಮಾಡಿದ್ದಾರೆ ಎಂದರು.

ಪ್ರೊ. ಎಚ್.ಎ.ಭಿಕ್ಷಾವರ್ತಿಮಠ ಅವರಿಂದ ರಚಿತವಾದ ಕೃತಿಗಳು ಕನ್ನಡ ಶಾಯಿರಿ ಲೋಕ, ನಾ ಹೀಗಿರುವೆ ಬಸವ, ಮಿಂಚು ಗೊಂಚಲು, ಹೂ ಬಾಣ, ವಚನ ಸಿಂಚನ, ವಚನ ಚಂದನ, ಆಧುನಿಕ ವಚನ ಸ್ಪಂದನ, ನನ್ನ ಕವಿತೆಯೇ ಹೀಗೆ, ಪಂಚಾಮೃತ (ಸಂಪಾದನೆ), ಯೋಗ ಪರಿಚಯ (ಅನುವಾದಿತ), ಚುಟುಕು ಗುಟುಕು ಮೂಲಕ ಅವರು ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಅಂದಿನ ಚಿತ್ರದುರ್ಗ, ಇಂದಿನ ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿಯೂ ಸಹ ಖ್ಯಾತಿ ಪಡೆದವರಾಗಿದ್ದಾರೆ.

ಸಾಹಿತ್ಯಿಕವಾಗಿ ಅವರು ಸಲ್ಲಿಸಿದ ಸೇವೆಗಾಗಿ ತಾಲೂಕು ಹಾಗೂ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಚನ ರಚನೆಗಾಗಿ ರಮಣ ಶ್ರೀ ಪ್ರಶಸ್ತಿ, ಡಾ. ಜ.ಚ.ನಿ ಪ್ರಶಸ್ತಿ, ಮುರುಘಾ ಶ್ರೀ ಪ್ರಶಸ್ತಿ ಹಾಗೂ ಶಾಯಿರಿ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೆ 2005ರಲ್ಲಿ ಹರಪನಹಳ್ಳಿಯಲ್ಲಿ ನಡೆದ ದಾವಣಗೆರೆ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೂ ಪಾತ್ರರಾಗಿದ್ದಾರೆ. ಬಡತನ, ಗ್ರಾಮೀಣ ಬದುಕು ಮತ್ತು ಭಾಷೆಗಳ ಶುಚಿ ಹಾಗೂ ರುಚಿಗಳನ್ನು ಬಲ್ಲವರಾದ ಇವರು, ಪ್ರಸ್ತುತ ತಮ್ಮ ಜನ್ಮಭೂಮಿ ರಾಣೆಬೆನ್ನೂರು ನಗರದ ಬಿಎಜೆಎಸ್‌ಎಸ್ ಸಂಸ್ಥೆಯಲ್ಲಿ ಶೈಕ್ಷಣಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ಬದುಕಿನ ಸಾರ್ಥಕ 75 ವಸಂತಗಳನ್ನು ಪೂರೈಸಿ, ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ. ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅವರ ಸಾರ್ಥಕ ಕೌಟುಂಬಿಕ ಜೀವನದ ಸಂತೃಪ್ತಿಗೆ ಕಾರಣರಾದ ಅವರ ಶ್ರೀಮತಿ ಉಮಾದೇವಿ ಮಕ್ಕಳಾದ ಡಾ.ಶಿವರಾಜ ಮತ್ತು ಡಾ.ಶಿವಯೋಗಿ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳ ಸಹಕಾರದಿಂದ ಇದೆ. ಅ.25ರಂದು ಭಾನುವಾರ ಅಮೃತ ಮಹೋತ್ಸವ ಹಾಗೂ ಕಾವ್ಯ ಸಂಭ್ರಮ ಸಮಾರಂಭ ನಡೆಸಲು ಸಿದ್ಧತೆ ಮಾಡಿರುವುದಾಗಿ ಪ್ರೊ. ಸಿ.ವಿ.ಪಾಟೀಲ್ ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಅಮೃತ ಮಹೋತ್ಸವ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಡಾ. ಎಸ್.ಎಚ್. ಪ್ಯಾಟಿ, ಎಚ್.ಕೆ. ಕೊಟ್ರಪ್ಪ, ಗೌರವ ಸಲಹೆಗಾರ ಬಿ.ರೇವಣಸಿದ್ದಪ್ಪ, ಉಪಾಧ್ಯಕ್ಷರಾದ ಎಸ್.ಎಚ್. ಹೂಗಾರ, ಕೆ.ಬಿ ರಾಜಶೇಖರ, ಶೇಖರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಚ್.ನಿಜಗುಣ, ಸಹ ಕಾರ್ಯದರ್ಶಿ ಪ್ರಕಾಶ ಜಿಗಳಿ, ಸಂಘಟನಾ ಕಾರ್ಯದರ್ಶಿ ಬಿ.ಬಿ. ರೇವಣ್ಣ ನಾಯ್ಕ, ಸದಸ್ಯರಾದ ವಿ.ಎಸ್. ಮಲ್ಲಿಕಾರ್ಜುನ, ಬಿ.ಕೆ. ಪಂಚಾಕ್ಷರಿ, ಕೃಷ್ಣ ಪಿ. ರಾಜೋಳಿ, ಡಾ.ಶಿವರಾಜ್ ಜಿ.ಎಚ್., ಡಾ.ಶಿವಯೋಗಿ ಬಿ.ಎಚ್. ಉಪಸ್ಥಿತರಿದ್ದರು.

- - -

-22ಎಚ್.ಆರ್.ಆರ್1:

ಅಮೃತ ಮಹೋತ್ಸವ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಂಜಾದಾರದ ವಿರುದ್ಧ ಮುಂದುವರಿದ ಪೊಲೀಸರ ಸಮರ
ಒಂದೇ ಮಳೆಗೆ ಒಳಚರಂಡಿ ಅವ್ಯವಸ್ಥೆ ಬಯಲು!