ಇಂದು ಯಾರಿಗೂ ಸಿದ್ಧಾಂತಗಳೂ ಇಲ್ಲ, ವಿಚಾರಗಳೂ ಇಲ್ಲ: ಬಿ.ಆರ್.ಪಾಟೀಲ್

KannadaprabhaNewsNetwork |  
Published : Jul 02, 2025, 12:21 AM IST
1ಕೆಎಂಎನ್ ಡಿ26 | Kannada Prabha

ಸಾರಾಂಶ

ನಮ್ಮಂತಹವರು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದನ್ನು ಕೃಷ್ಣ ಅವರು ಕೂಡಾ ಅನುಭವಿಸಿ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು. ಇವೆಲ್ಲವನ್ನೂ ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ಸ್ವತಃ ತಾವೇ ಬರೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರಸ್ತುತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಇದ್ದಿದ್ದರೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದು ಬಾರಯ್ಯ ಎಂದು ನೇರವಾಗಿ ಹೇಳುತ್ತಿದ್ದರು ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

ಪಟ್ಟಣದ ಸುಲೋಚನಾ ರಾಮದಾಸ್ ಸಭಾಂಗಣದಲ್ಲಿ ಕೃಷ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ರಾಜಕಾರಣ ನೋಡಿದರೆ ನನ್ನನ್ನು ಸೇರಿಸಿಕೊಂಡಂತೆ ಬಹುತೇಕರಿಗೆ ಕಾಲ ಮುಗಿದು ಹೋಗಿದೆ. ಈಗ ನಡೆಯುತ್ತಿರುವುದು ಪ್ರೀತಿಯ ರಾಜಕಾರಣ ಅಲ್ಲ. ಹಣ ಬಲದ ರಾಜಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮಂತಹವರು ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲದಂತಾಗಿದೆ. ಇದನ್ನು ಕೃಷ್ಣ ಅವರು ಕೂಡಾ ಅನುಭವಿಸಿ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದರು. ಇವೆಲ್ಲವನ್ನೂ ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ಸ್ವತಃ ತಾವೇ ಬರೆದುಕೊಂಡಿದ್ದಾರೆ. ಈ ಹಿಂದೆ ಕೃಷ್ಣ ಅವರಿಗೆ ಜನರೆ ದುಡ್ಡು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಏನಾಗಿದೆ?, ಈಗಿನ ಯಾವ ರಾಜಕೀಯ ಪಕ್ಷಗಳು ಸರಿಯಿಲ್ಲ ಎಂದು ವಿಷಾದಿಸಿದರು.

ಕೃಷ್ಣ ಹಾಗೂ ನಾನು ಸಮಕಾಲೀನ ರಾಜಕಾರಣಿಗಳು. ನಮ್ಮಗಳ ಕಾಲದಲ್ಲಿ ಸೂಟ್‌ಕೇಸ್ ರಾಜಕಾರಣ ಇರಲಿಲ್ಲ. ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾ ಅವರ ತತ್ವ, ಸಿದ್ಧಾಂತಗಳು ನಮ್ಮನ್ನೆಲ್ಲ ಮುನ್ನೆಲೆಗೆ ಬರುವಂತೆ ಮಾಡಿದವು ಎಂದರು.

ಇಂದು ಯಾರಿಗೂ ಸಿದ್ಧಾಂತಗಳೂ ಇಲ್ಲ. ವಿಚಾರಗಳೂ ಇಲ್ಲ. ಕೆಲವು ವ್ಯಕ್ತಿಗಳು ತಮ್ಮ ವಿಚಾರಗಳು ಹಾಗೂ ಸಿದ್ಧಾಂತಗಳ ಮೂಲಕ ಇನ್ನೂ ಬದುಕಿದ್ದಾರೆ. ಇಂತಹ ಸಿದ್ಧಾಂತಗಳ ಮೂಲಕ ಕೆ.ಆರ್.ಪೇಟೆ ಕೃಷ್ಣ ಬದುಕಿದ್ದರು. ಅಧಿಕಾರ ಅಂತಸ್ತು ಎಲ್ಲಾ ಕೈಯ್ಯಲ್ಲಿದ್ದರು ಸಹ ಎಂದು ಕೂಡ ಅಹಂ ಪಟ್ಟವರಲ್ಲ. ಅಧಿಕಾರವನ್ನು ತಲೆಗೆ ಹಾಕಿಕೊಂಡವರಲ್ಲ. ತಮ್ಮ ಜೀವಿತದಲ್ಲಿ ಯಾವುದೆ ಕಪ್ಪು ಚುಕ್ಕೆಯಿಲ್ಲದಂತೆ ಸಮಾಜಮುಖಿ ಜೀವನ ನಡೆಸಿದ್ದರು ಬಿ.ಆರ್.ಪಾಟೀಲ್ ಬಣ್ಣಿಸಿದರು.

ಕೃಷ್ಣ ಪುರಸ್ಕಾರವನ್ನು ಪಡೆದ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಬುದ್ಧ, ಬಸವಣ್ಣ, ಲೋಹಿಯಾ, ಅಂಬೇಡ್ಕರ್, ಕುವೆಂಪು ಅವರನ್ನು ಓದಿಕೊಂಡು ಅವರ ಮೌಲ್ಯಯುತ ಜೀವನ ರೂಢಿಸಿಕೊಂಡಿರುವವರು ನಾವು. ಇದಲ್ಲದೇ, ಅಂಬೇಡ್ಕರ್ ಅವರ ಪ್ರತಿರೂಪವಾಗಿರುವ ಮಾಜಿ ಸಚಿವ ಬಸವಲಿಂಗಪ್ಪ ಅವರ ಜೊತೆ ಜೊತೆಗೆ ಇದ್ದವರು. ಜಾತ್ಯತೀತ ಮನೋಭಾವದ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪುರಸ್ಕಾರವನ್ನು ಅತ್ಯಂತ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ ಎಂದರು.

ಇದೇ ವೇಳೆ ಶಿಕ್ಷಣ ತಜ್ಞ ಕಾಳೇಗೌಡ ನಾಗವಾರ, ಹಿರಿಯ ರೈತ ಮುಖಂಡ ಎಂ.ವಿ.ರಾಜೇಗೌಡ, ಖ್ಯಾತ ವೈದ ಡಾ.ಕೃಷ್ಣ ಕಿಕ್ಕೇರಿ, ಹಾಗೂ ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡರಿಗೆ ಪ್ರತಿಷ್ಠಾನದ ವತಿಯಿಂದ ಕೃಷ್ಣ ನಾಗರಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೊತೆಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿಯರನ್ನು ಕೂಡಾ ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜ್, ಪುರಸಭೆ ಅಧ್ಯಕ್ಷೆ ಪಂಕಜಾ ಪ್ರಕಾಶ್, ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೆಹೊಸಹಳ್ಳಿ ಜವರಾಯಿಗೌಡ, ಗೌರವಾಧ್ಯಕ್ಷೆ ಪ್ರೊ.ಇಂದಿರಾಕೃಷ್ಣ, ಮನ್ಮುಲ್ ನಿರ್ದೇಶಕರುಗಳಾದ ಡಾಲುರವಿ, ಎಂ.ಬಿ.ಹರೀಶ್, ಸಮಾಜ ಸೇವಕ ಮಲ್ಲಿಕಾರ್ಜುನ್, ಕೃಷ್ಣ ಪ್ರತಿಷ್ಠಾನದ ಕಾರ್ಯದರ್ಶಿ ಕತ್ತರಘಟ್ಟ ವಾಸು ಸೇರಿದಂತೆ ಅಭಿಮಾನಿಗಳು ಉಪಸ್ಥಿತರಿದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌