ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣ ಸೇರಿದಂತೆ ತಾಲೂಕಿನ ಕವಿಗಳು, ಲೇಖಕರ ಮನೆಗಳಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಮಾತನಾಡಿ, ಭಕ್ತಿಯನ್ನು ಭಯದ ಸಂಕೇತವಾಗಿ ಮಾಡಿ ಜನರಲ್ಲಿ ಮೌಢ್ಯವನ್ನು ಬಿತ್ತುವ ಕಾರ್ಯ ನಡೆಯಿತು. ಆದರೆ, ಜ್ಞಾನದ ಸಂಕೇತವಾದ ಪುಸ್ತಕಕ್ಕೆ ಮೊದಲಿನಿಂದಲೂ ನಿರ್ಲಕ್ಷ್ಯ ಮಾಡಲಾಯಿತು ಎಂದರು.
ಮನೆಗಳಲ್ಲಿ ಪೂಜಾ ಮಂದಿರವಿರುವಂತೆ ಗ್ರಂಥಾಲಯಕ್ಕೊಂದು ಕೊಠಡಿ ಇಲ್ಲದಂತಾಗಿದೆ. ಓದುವ, ಅರಿವಿನ ಜ್ಞಾನವನ್ನು ಮಾನವರಲ್ಲಿ ನಮ್ಮ ಹಿರಿಯರು ಹಿಂದಿನಿಂದಲೇ ಮಾಡಿದ್ದರೆ ಪ್ರತಿ ಮನೆಗಳಲ್ಲಿ ಗ್ರಂಥಾಲಯವಿರುತ್ತಿತ್ತು ಎಂದರು.ದೇವಾಲಯ ಹಾಗೂ ಇತರೆಡೆ ಮಂಗಳಾರತಿ ತಟ್ಟೆಗೆ, ಜೋಯಿಸರಿಗೆ ಬೇರೊಬ್ಬರು ಮೆಚ್ಚಲಿ ಎಂಬಂತೆ ದುಬಾರಿ ಕಾಣೆಕೆ ನೀಡಿ ಆಶೀರ್ವಾದ ಬೇಡುವ ನಾವು ಕಡಿಮೆ ಬೆಲೆಯ ಪುಸ್ತಕ ತೆಗೆದುಕೊಳ್ಳಲು, ದಿನಪತ್ರಿಕೆ ಕೊಂಡು ಓದುವದಿಕ್ಕೆ ಹಿಂದೆ ಮುಂದೆ ನೋಡುತ್ತೇವೆ ಎಂದರು.
ಕನಿಷ್ಠ ಒಂದು ಲಕ್ಷ ಮನೆಮನೆಯಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ಪಡೆದು ಪ್ರತಿಯೊಂದು ಮನೆ ಗ್ರಂಥಾಲಯಕ್ಕೂ ಒಂದಿಷ್ಟು ಪುಸ್ತಕ ಕೊಡುವ ಕಾರ್ಯವನ್ನು ಮಾಡಲಾಗುವದು. ಬದುಕಿನಲ್ಲಿ ಬದುಕುವ ಕಲೆಯನ್ನು ಯಾರೂ ಹೇಳಿ ಕೊಡುವುದಿಲ್ಲ. ಆದರೆ, ಆ ಕೆಲಸವನ್ನು ಕಲಿಸಿಕೊಡುವ ಏಕೈಕ ಸಾಧನವೆಂದರೆ ಅದು ಪುಸ್ತಕವಾಗಿದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಕಾಸರವಾಡಿ ಮಹಾದೇವು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವದ ಬಗ್ಗೆ ಮಾತನಾಡಿದರು. ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಲೇಖಕ ಮೊಹಮದ್ ಅಜರುದ್ದೀನ್, ಕಲಾವಿದ ಅಭಿನಂದನ್, ಶಶಿಧರ ಭಾರಿಘಾಟ್, ಪಟ್ಟಣದ ಲೇಖಕ ಚಾ.ಶಿ.ಜಯಕುಮಾರ್ ಮತ್ತು ಕವಿಯತ್ರಿ ಧನಲಕ್ಷ್ಮಿ ಪ್ರಕಾಶ್ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ನಡೆಯಿತು.
ಪ್ರೊ.ಸುಜನಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಸಾಹಿತಿ ಬಲ್ಲೇನಹಳ್ಲಿ ಮಂಜುನಾಥ್, ಕಸಾಪ ತಾಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಕೆ.ಕಾಳೇಗೌಡ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಕುಶಾಲ್ ಬರಗೂರು ಮಾತನಾಡಿದರು. ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಕಲಾವಿದ ಉಮಾಶಂಕರಸ್ವಾಮಿ, ಕುಮಾರ್, ಪ್ರಕಾಶ್, ವೀಣಾ ಸೇರಿದಂತೆ ಹಲವು ಗಣ್ಯರು, ಲೋಕಾಯನ ಬಳಗದ ಸದಸ್ಯರು ಭಾಗವಹಿಸಿದ್ದರು.