ವಿದೇಶಗಳಲ್ಲಿ ಕೆಲಸ ನಿರ್ವಹಿಸಲು ಇಂದು ಸಾಕಷ್ಟು ಅವಕಾಶ

KannadaprabhaNewsNetwork | Published : May 15, 2024 1:36 AM

ಸಾರಾಂಶ

ರಾಷ್ಟ್ರಮಟ್ಟದ ಕಾರ್ಯಾಗಾರಗಳು ಜಾಗತಿಕ ಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತಿವೆ. ಮೊದಲು ನಾವು ದಾವಣಗೆರೆಯಲ್ಲಿ ಓದಿದರೆ ಬರೀ ಇಲ್ಲಿಯೇ ಸುತ್ತಮುತ್ತಲ ಕೆಲಸ ಮಾಡುವಂತಹ ವಾತಾವರಣ ಇತ್ತು. ಈಗ ನೀವೆಲ್ಲಾ ಜಾಗತಿಕ ನಾಗರೀಕರಾಗಿದ್ದೀರಿ, ನೀವು ಇಲ್ಲಿ ಚೆನ್ನಾಗಿ ಓದಿದ ಮೇಲೆ ಯಾವುದೇ ದೇಶಗಳಲ್ಲಿಯೂ ಕೆಲಸ ಮಾಡಬಹುದು. ಇದಕ್ಕೆ ಪೂರಕವಾಗಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಜಿ.ಎಂ. ವಿಶ್ವವಿದ್ಯಾಲಯ ಉಪ ಕುಲಪತಿ ಎಸ್.ಆರ್.ಶಂಕಪಾಲ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಉಪ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿಕೆ ।

- ಜಿಎಂ ವಿ.ವಿ.ಯಿಂದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಷ್ಟ್ರಮಟ್ಟದ ಕಾರ್ಯಾಗಾರಗಳು ಜಾಗತಿಕ ಮಟ್ಟಕ್ಕೆ ಬೆಳೆಯಲು ಕಾರಣವಾಗುತ್ತಿವೆ. ಮೊದಲು ನಾವು ದಾವಣಗೆರೆಯಲ್ಲಿ ಓದಿದರೆ ಬರೀ ಇಲ್ಲಿಯೇ ಸುತ್ತಮುತ್ತಲ ಕೆಲಸ ಮಾಡುವಂತಹ ವಾತಾವರಣ ಇತ್ತು. ಈಗ ನೀವೆಲ್ಲಾ ಜಾಗತಿಕ ನಾಗರೀಕರಾಗಿದ್ದೀರಿ, ನೀವು ಇಲ್ಲಿ ಚೆನ್ನಾಗಿ ಓದಿದ ಮೇಲೆ ಯಾವುದೇ ದೇಶಗಳಲ್ಲಿಯೂ ಕೆಲಸ ಮಾಡಬಹುದು. ಇದಕ್ಕೆ ಪೂರಕವಾಗಿ ಸಾಕಷ್ಟು ಅವಕಾಶಗಳು ಸಿಗುತ್ತವೆ ಜಿ.ಎಂ. ವಿಶ್ವವಿದ್ಯಾಲಯ ಉಪ ಕುಲಪತಿ ಎಸ್.ಆರ್.ಶಂಕಪಾಲ್ ಹೇಳಿದರು.

ನಗರದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಮಂಗಳವಾರ ಜಿ.ಎಂ. ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ವತಿಯಿಂದ 3 ದಿನಗಳ ಕಾಲ ಏರ್ಪಡಿಸಿರುವ "ವ್ಯಾಪಾರ ಶಿಕ್ಷಣ; ಗಡಿಗಳನ್ನು ಸರಿದೂಗಿಸುವುದು, ಭವಿಷ್ಯವನ್ನು ರೂಪಿಸುವುದು " ವಿಷಯ ಕುರಿತು ಆಯೋಜಿಸಿದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದೇಶಗಳಲ್ಲಿ ನಿರ್ವಹಿಸುವ ಕೆಲಸಗಳ ಅವಕಾಶಗಳಿಗಾಗಿ ನೀವು ಸಿದ್ಧರಾಗಿರಬೇಕು. ಕೆಲವರಿಗೆ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಹೋಗಿ ಅದರ ಬಗ್ಗೆ ತಿಳಿದುಕೊಳ್ಳಲು ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಗೇ ವಿದೇಶ ವಿಶ್ವವಿದ್ಯಾಲಯಗಳವರನ್ನು ಕರೆಸಿ, ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಇದರಿಂದ ನಿಮಗೆ ಜಾಗತಿಕ ಸಂಪರ್ಕ ಬೆಳೆಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳನ್ನು, ಗುರಿಗಳನ್ನು ಇಟ್ಟುಕೊಳ್ಳಬೇಕು. ಬರೀ ಎಂಬಿಎ ಓದಿ ಸೇಲ್ಸ್ ಮ್ಯಾನ್ ಆದರೆ ಉಪಯೋಗ ಆಗುವುದಿಲ್ಲ. ಸಣ್ಣ ಸಣ್ಣ ಹುದ್ದೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಡಿ. ಏನಿದ್ದರೂ ದೊಡ್ಡ ದೊಡ್ಡ ಕೆಲಸಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಭಾಷ್ ಇಂಡಿಯಾ ಫೌಂಡೇಷನ್ ಮತ್ತು ಕನ್ಸಲ್ಟೆಂಟ್‌ನ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಮಾಜಿ ಮುಖ್ಯಸ್ಥ ಲೆಬರ್ನ್ ರೋಸ್ ಮಾತನಾಡಿ, ಎಂಬಿಎ ಎನ್ನುವುದು ದೊಡ್ಡ ಭೌತಿಕ ಸವಾಲಾಗಿದೆ. ಅದರಲ್ಲೂ ಕೂಡ ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ಬದಲಾವಣೆ ತರಲು ಸಾಧ್ಯ. ಇದಕ್ಕೆ ಸಾಕಷ್ಟು ಅವಕಾಶಗಳಿವೆ. ಸಣ್ಣ ಸಣ್ಣ ಬದಲಾವಣೆಗಳೇ ದೊಡ್ಡ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ನೀವು ಸಣ್ಣ ಬದಲಾವಣೆ ಎಂದು ಕಡೆಗಣಿಸದೇ ನೀವು ತರುವ ಬದಲಾವಣೆಗಳು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ನೆರವಾಗುತ್ತವೆ. ವಿಶ್ವವಿದ್ಯಾಲಯದಲ್ಲಿ ಆರಂಭಿಸಿದ ಹೊಸ ಕೋರ್ಸ್‌ ಹಲವರ ಜೀವನದಲ್ಲಿ ಬದಲಾವಣೆ ತಂದಿದೆ ಎಂದು ಅನುಭವವನ್ನು ಹಂಚಿಕೊಂಡರು.

3 ದಿನಗಳ ಕಾಲ ಆಯೋಜಿಸಿದ ಈ ವಿಚಾರ ಸಂಕಿರಣದಲ್ಲಿ ವಿಟಿಯು ಎಂಬಿಎ ವಿಭಾಗ ಅಧ್ಯಕ್ಷ ಡಾ. ಎಂ.ಎಂ. ಮುನ್ಶಿ, ಜಿಎಂಯು ಪ್ರೊ.ಪೂರ್ಣಿಮಾ ಚರಂತಿಮಠ್, ಲಂಡನ್ ಸೌತ್ ಬ್ಯಾಂಕ್ ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಎಂಬಿಎ ವಿದ್ಯಾರ್ಥಿಗಳಿಗೆ, ಬೋಧಕರಿಗೆ ಮಾರ್ಗದರ್ಶನ ನೀಡುವರು.

ಕಾರ್ಯಕ್ರಮದಲ್ಲಿ ಜಿಎಂಐಟಿ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ಡೀನ್ ಡಾ.ಬಸವರಾಜ ಸ್ವಾಮಿ, ಡಾ. ಬಿ.ಬಕ್ಕಪ್ಪ, ಟಿ.ಆರ್. ತೇಜಸ್ವಿ ಕಟ್ಟಿಮನಿ, ಡಾ.ಮಹೇಶ್ವರಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು, ಎಂಬಿಎ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

ಬಾಕ್ಸ್‌ ಸಂಪತ್ತು ಗಳಿಸಲು ಪರಿಶ್ರಮ ಅರಿವಿರಲಿಲ್ಲ: ಲಾರೆನ್ಸ್‌ ವಿಶರ್‌ ಭಾಷ್ ಇಂಡಿಯಾ ಫೌಂಡೇಷನ್ ಮತ್ತು ಕನ್ಸಲ್ಟೆಂಟ್‌ನ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಮಾಜಿ ಮುಖ್ಯಸ್ಥ ಲಾರೆನ್ಸ್ ವಿಶರ್ ಮಾತನಾಡಿ, ನಾವುಗಳು ಚಿಕ್ಕವಯಸ್ಸಿನಲ್ಲಿದ್ದಾಗ ಕಲಿಕೆ ಬಗ್ಗೆ ಆಸಕ್ತಿಯನ್ನು ತೋರಲಿಲ್ಲ. ನಮಗೆ ಜೀವನದಲ್ಲಿ ಸಾಕಷ್ಟು ಆಸ್ತಿ, ಸಂಪತ್ತು ಗಳಿಸಬೇಕು ಎಂಬ ಆಸೆ ಇತ್ತು. ಅದಕ್ಕೆ ಪರಿಶ್ರಮ ಪಡಬೇಕೆಂಬುದು ನನಗೆ ಇರಲಿಲ್ಲ. ಆಗ ನಾನು ಹೋಗುತ್ತಿರುವ ದಾರಿ ಸರಿಯಿಲ್ಲ ಎಂಬುದು ಅರಿವಾಯಿತು ಎಂದರು. ಬಳಿಕ ಓದಿನ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಸೇಲ್ಸ್ ಬಾಯ್ ಆಗಿ ಕೆಲಸ ನಿರ್ವಹಿಸಿದೆ. ಹೀಗೆ ಹಲವಾರು ವರ್ಷಗಳು ಕಳೆದ ನಂತರ ನನಗೆ ಕಾಲೇಜಿನಲ್ಲಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿತು. ಕಷ್ಟಪಟ್ಟು ಓದಿ ಪದವಿ ಪಡೆದರೆ ಮುಂದೆ ಅನುಕೂಲವಾಗುತ್ತದೆ ಎಂದೆಸಿತು. ಆಗ ಕಾಲೇಜಿಗೆ ಸೇರಿ ಎಂಬಿಎ ವಿದ್ಯಾಭ್ಯಾಸ ಮಾಡಿದೆ. ನನ್ನ ಜೊತೆಗೆ ಇದ್ದವರೆಲ್ಲರೂ ನನ್ನ ಹಾಗೆ ಮೊದಲು ಕೆಲಸವನ್ನು ಮಾಡಿ, ಮುಂದೆ ಓದಿನ ಕಡೆ ಗಮನಹರಿಸಿದವರೇ ಇದ್ದರು. ಎಲ್ಲದರಲ್ಲೂ ಕೂಡ ನಾನು ಮೊದಲಿಗನಾಗಿ ಮುಂದೆ ಬಂದೆ. ಅನಂತರ ಕಾಲೇಜು ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತ ಬಂದೆನು. ಇದೆಲ್ಲಾ ನನಗೆ ಸಾಕಷ್ಟು ಸಂತೋಷ ತಂದಿದೆ ಎಂದರು.

- - - -14ಕೆಡಿವಿಜಿಃ:

ದಾವಣಗೆರೆಯಲ್ಲಿ ಜಿ.ಎಂ. ವಿಶ್ವವಿದ್ಯಾಲಯದಿಂದ ಜಿಎಂಐಟಿ ಕಾಲೇಜಿನಲ್ಲಿ ನಡೆದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು.

Share this article