ಇಂದು ಯುವ ಪೀಳಿಗೆಯನ್ನು ಸದೃಢವಾಗಿ ಕಟ್ಟಬೇಕಿದೆ: ಸಂಸದ ಬಿ. ವೈ. ರಾಘವೇಂದ್ರ ಕರೆ

KannadaprabhaNewsNetwork |  
Published : Feb 21, 2026, 01:45 AM IST
ಫೋಟೋ:೨೦ಕೆಪಿಸೊರಬ-೦೧ : ಸೊರಬ ತಾಲೂಕಿನ  ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದರು. | Kannada Prabha

ಸಾರಾಂಶ

ನಾವೆಲ್ಲ ಹಿಂದೂ ಎಂಬ ಮನೋಭಾವನೆಯನ್ನು ಮೂಡಿಸಿಕೊಂಡು ಒಗ್ಗಟ್ಟಿನಿಂದ ಧ್ವನಿ ಎತ್ತಿದಾಗ ಮಾತ್ರ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ನಾವೆಲ್ಲ ಹಿಂದೂ ಎಂಬ ಮನೋಭಾವನೆಯನ್ನು ಮೂಡಿಸಿಕೊಂಡು ಒಗ್ಗಟ್ಟಿನಿಂದ ಧ್ವನಿ ಎತ್ತಿದಾಗ ಮಾತ್ರ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ, ಚಂದ್ರಗುತ್ತಿ, ಹೆಚ್ಚೆ ಹಾಗೂ ನ್ಯಾರ್ಶಿ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಅಫ್ಘಾನಿಸ್ತಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳು ಇಂದು ವಿಭಜನೆಯಿಂದಾಗಿ ಪ್ರತ್ಯೇಕಗೊಂಡಿವೆ. ಅಲ್ಲಿನ ಹಿಂದೂ ಬಾಂಧವರು ಅಲ್ಪಸಂಖ್ಯಾತರಾಗಿ ಗೌರವಯುತ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ನಮ್ಮ ಪೂರ್ವಜರ ನಿರಂತರ ಹೋರಾಟ ಮತ್ತು ಪರಿಶ್ರಮದ ಫಲವಾಗಿ ಇಂದು ಭಾರತದಲ್ಲಿ ಹಿಂದೂಗಳ ಅಸ್ಮಿತೆ ಉಳಿದಿದೆ ಎಂದು ಅವರು ಸ್ಮರಿಸಿದರು.

ಇಂದಿನ ದಿನದಲ್ಲಿ ಮಕ್ಕಳು ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಾಗ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಮುಂದಾಗುತ್ತಿರುವುದು ವಿಷಾದನೀಯ. ಪೋಷಕರು ಮನೆಯಲ್ಲಿಯೇ ಮಕ್ಕಳಿಗೆ ನಮ್ಮ ಸಂಸ್ಕೃತಿ, ಧರ್ಮದ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಸ್ವಾತಂತ್ರ‍್ಯಕ್ಕಾಗಿ, ನಮ್ಮ ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟಂತಹ ಮಹಾಪುರುಷರ ಇತಿಹಾಸವನ್ನು ಇಂದು ಪಠ್ಯ ಪುಸ್ತಕಗಳಲ್ಲಿ ಅಳಿಸುವ ಪ್ರಯತ್ನಗಳ ನಡೆದಿದ್ದಾವೆ. ಇವುಗಳ ವಿರುದ್ಧ ಜಾಗೃತವಾಗಿ ಯುವ ಪೀಳಿಗೆಯನ್ನು ಸದೃಢವಾಗಿ ಕಟ್ಟಬೇಕಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟಿಷರ ಕಾಲದ ಗುಲಾಮಗಿರಿಯ ಸಂಕೇತಗಳನ್ನು ತೊಡೆದು ಹಾಕುತ್ತಿದ್ದಾರೆ. ಕಿಂಗ್ಸ್‌ ವೇಯನ್ನು ಕರ್ತವ್ಯ ಪಥ ಎಂದು ಬದಲಿಸಿರುವುದು ಮತ್ತು ಭವ್ಯವಾದ ಹೊಸ ಸಂಸತ್‌ ಭವನ ನಿರ್ಮಿಸಿರುವುದು ದೇಶದ ಆತ್ಮಗೌರವದ ಸಂಕೇತವಾಗಿದೆ. ಈ ಮಣ್ಣಿನ ಅನ್ನ, ನೀರು ಸೇವಿಸುವ ಪ್ರತಿಯೊಬ್ಬರೂ ಭಾರತ ಮಾತೆಯನ್ನು ಗೌರವಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರಾಘಾ ಮಠದ ಮಹಾಂತ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಋಷಿಮುನಿಗಳು, ಸಾಧು-ಸಂತರು, ದಾರ್ಶನಿಕರು ಪ್ರಪಂಚವೇ ಚೆನ್ನಾಗಿರಬೇಕೆಂದು ಬಯಸಿದ್ದರು ಮತ್ತು ವಸುದೈವ ಕುಟುಂಬಕಂ ಎಂಬಂತೆ ಬದುಕಬೇಕೆಂದು ತಿಳಿಸಿರುವ ಧರ್ಮ ನಮ್ಮ ಹಿಂದೂ ಧರ್ಮವಾಗಿದೆ. ಪ್ರಪಂಚದ ಯಾವುದೇ ಸಂಸ್ಕೃತಿಯ ಮೇಲೆ ದಾಳಿ ಮಾಡದ ಏಕೈಕ ರಾಷ್ಟ್ರ ಭಾರತವಾಗಿದ್ದು, ಜಗತ್ತಿನ ಕಲ್ಯಾಣವನ್ನು ಬಯಸುವ ಹಿಂದೂ ಯಾವಾಗಲೂ ಭಯೋತ್ಪಾದಕನಾಗಲು ಸಾಧವಿಲ್ಲ ಎಂದರು.

ವಿಶ್ವ ಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಚಾಲಕ ಸತೀಶ್ ಪೂಜಾರ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಜಯಪ್ಪ ಗೌಡ್ರು ಹಿರೇಕಸವಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಗುತ್ತಿ, ಹೆಚ್ಚೆ, ನ್ಯಾರ್ಶಿ, ಮಂಡಲದ ಸದಸ್ಯರು, ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರಂತರ ಚಿರತೆ ಹಾವಳಿ: ರೈತರಲ್ಲಿ ತಪ್ಪದ ಭೀತಿ
ಸಾಮಾಜಿಕ ನ್ಯಾಯದ ಪ್ರತಿಪಾದಕ ಕವಿ ಸರ್ವಜ್ಞ: ಸಿ.ಎಸ್.ಚಂದ್ರಭೂಪಾಲ