ಪರಧರ್ಮ ಸಹಿಷ್ಣತೆ ಸಂವಿಧಾನದ ಆಶಯ : ಸಿಎಂ

KannadaprabhaNewsNetwork |  
Published : Sep 06, 2025, 01:00 AM IST
ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಮಿಲಾದ್-ಉನ್ ನಬಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವರಾದ ಸಚಿವರಾದ ಜಮೀರ್ ಅಹಮದ್ ಖಾನ್, ಕೆ.ಜೆ. ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸೇರಿದಂತೆ ಹಲವು ಗಣ್ಯರು, ಧಾರ್ಮಿಕ ಮುಖಂಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ‌ ಆಶಯವಾಗಿದ್ದು, ಸಂವಿಧಾನ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

  ಬೆಂಗಳೂರು :  ಪರಧರ್ಮ ಸಹಿಷ್ಣುತೆ ಸಂವಿಧಾನದ ಮೂಲ‌ ಆಶಯವಾಗಿದ್ದು, ಸಂವಿಧಾನ ಪಾಲನೆಯೇ ನಮ್ಮೆಲ್ಲರ ಗುರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಈದ್ ಮಿಲಾದ್ ಅಂಗವಾಗಿ ಅರಮನೆ ಮೈದಾನದಲ್ಲಿ ಶುಕ್ರವಾರ ಜರುಗಿದ ಅಂತಾರಾಷ್ಟ್ರೀಯ ಮಿಲಾದ್-ಉನ್ ನಬಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಪ್ರವಾದಿಯವರ ಬೋಧನೆಗಳು ಮಾನವ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಅವರು ಸಮಸ್ತ ಮಾನವಕೋಟಿಗೆ ನ್ಯಾಯ, ಸಮಾನತೆ ಮತ್ತು ಧಾರ್ಮಿಕ ಸೌಹಾರ್ದದ ಮಾರ್ಗಗಳನ್ನು ತೋರಿಸಿದರು. ಬಸವಣ್ಣನವರ ನೇತೃತ್ವದ ಶರಣ ಚಳವಳಿಯೂ ಮಾನವ ಕುಲ ಒಂದೇ ಎನ್ನುವ ಮೌಲ್ಯವನ್ನೇ ಸಾರಿತ್ತು ಎಂದರು.

ಪ್ರವಾದಿಗಳು ಶಾಂತಿ ಧೂತರು. ಇಡೀ ಮಾನವ ಕುಲ ಶಾಂತಿಗಾಗಿ, ಭ್ರಾತೃತ್ವ, ಸಹೋದರತ್ವಕ್ಕಾಗಿ ಕೆಲಸ ಮಾಡಬೇಕು ಎನ್ನುವುದು ಪ್ರವಾದಿಗಳ ಬೋಧನೆ. ನಮ್ಮ ಸಂವಿಧಾನದ ಮೂಲ ಆಶಯ ಕೂಡ ಭ್ರಾತೃತ್ವ ಮತ್ತು ಪರಧರ್ಮ ಸಹಿಷ್ಣತೆಯೇ ಆಗಿದೆ. ಆದ್ದರಿಂದ ಸಂವಿಧಾನವನ್ನು ಆಚರಿಸುವುದು, ಪಾಲಿಸುವುದು ನಮ್ಮೆಲ್ಲರ ಗುರಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಸಚಿವರಾದ ಜಮೀರ್ ಅಹಮದ್ ಖಾನ್, ಕೆ.ಜೆ. ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಎನ್.ಎ ಹ್ಯಾರಿಸ್ ಸೇರಿ ಹಲವು ಗಣ್ಯರು, ಧಾರ್ಮಿಕ ಮುಖಂಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು.ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ

ಜಿಎಸ್‌ಟಿ ಸರಳೀಕರಣದ ನಿರ್ಧಾರದಿಂದ ರಾಜ್ಯಕ್ಕೆ 15,000 ದಿಂದ 20,000 ಕೋಟಿ ರು. ನಷ್ಟ ಉಂಟಾಗಲಿದೆ. ಆದರೂ ಜನಸಾಮಾನ್ಯರ ಮೇಲಿನ ಆರ್ಥಿಕ ಭಾರ ತಗ್ಗಿಸುವ ಸಲುವಾಗಿ ಈ ನಿರ್ಧಾರ ಸ್ವಾಗತಿಸುತ್ತೇವೆ. ಆದರೆ, ಈ ಲಾಭ ಬಳಕೆದಾರರಿಗೆ ನೀಡದೆ ವ್ಯಾಪಾರಿಗಳು, ಉದ್ಯಮಿಗಳು ದುರುಪಯೋಗ ಮಾಡಿಕೊಳ್ಳದಂತೆ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಎಸ್‌ಟಿ ಸರಳೀಕರಣ ಎಂಬುದು ಮೋದಿ ಸರ್ಕಾರದ ಹೊಸ ಅವಿಷ್ಕಾರವೇನಲ್ಲ. ಅತ್ಯಂತ ಅವಸರದಲ್ಲಿ ಎನ್‌ಡಿಎ ಸರ್ಕಾರ 2017ರಲ್ಲಿ ದೋಷಪೂರ್ಣ ಜಿಎಸ್‌ಟಿ ಜಾರಿಗೊಳಿಸಿದಾಗಲೇ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರು ಸುಧಾರಣೆಗೆ ಒತ್ತಾಯಿಸಿದ್ದರು. ಗಬ್ಬರ್ ಸಿಂಗ್ ತೆರಿಗೆ ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶ ಮಾಡಿದ್ದನ್ನು ಸಾಕ್ಷ್ಯಸಹಿತ ಬಹಿರಂಗಪಡಿಸಿದ್ದರು. ಕೊನೆಗೂ ಮೋದಿ ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಾಸ್ತವದಲ್ಲಿ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕಪಿಮುಷ್ಟಿಯಲ್ಲಿದೆ. ಇದೀಗ ರಾಜ್ಯಗಳ ಒತ್ತಾಯದಿಂದ ಜಿಎಸ್‌ಟಿ ಸರಳೀಕರಣಕ್ಕೆ ಮುಂದಾಗಿದ್ದಾರೆ. ಜಿಎಸ್ಟಿ ಸುಧಾರಣೆಯ ಲಾಭ ಬಳಕೆದಾರ ಜನತೆಗೆ ತಲುಪುವಂತೆ ಮಾಡುವುದು ಕೇಂದ್ರ ಸರ್ಕಾರ ಮತ್ತು ಕೇಂದ್ರ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಜವಾಬ್ದಾರಿ. ಈ ತೆರಿಗೆ ಸುಧಾರಣೆಯನ್ನು ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಲಾಭಾಂಶ ಹೆಚ್ಚಿಸಲು ದುರುಪಯೋಗ ಮಾಡದಂತೆ ಕೇಂದ್ರ ತಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿಎಸ್ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!