ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ವಿದ್ಯುತ್‌ ಯೋಜನೆ ಗೃಹಜ್ಯೋತಿಗೆ ನಾಳೆಗೆ ವರ್ಷ

KannadaprabhaNewsNetwork | Updated : Aug 03 2024, 10:46 AM IST

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯು ಭಾನುವಾರಕ್ಕೆ (ಆ.4) ಒಂದು ವರ್ಷ ಪೂರೈಸಲಿದ್ದು, ಜೂನ್‌ ವೇಳೆಗೆ ಕಳೆದ ಹನ್ನೊಂದು ತಿಂಗಳಲ್ಲಿ 1.65 ಕೋಟಿ ಕುಟುಂಬಗಳಿಗೆ 8,100 ಕೋಟಿಗೂ ಹೆಚ್ಚು ಮೊತ್ತದ ವಿದ್ಯುತ್‌ ಉಚಿತವಾಗಿ ಪೂರೈಕೆ ಮಾಡಲಾಗಿದೆ.

ಶ್ರೀಕಾಂತ್‌ ಎನ್. ಗೌಡಸಂದ್ರ

 ಬೆಂಗಳೂರು :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹ ಜ್ಯೋತಿ’ ಯೋಜನೆಯು ಭಾನುವಾರಕ್ಕೆ (ಆ.4) ಒಂದು ವರ್ಷ ಪೂರೈಸಲಿದ್ದು, ಜೂನ್‌ ವೇಳೆಗೆ ಕಳೆದ ಹನ್ನೊಂದು ತಿಂಗಳಲ್ಲಿ 1.65 ಕೋಟಿ ಕುಟುಂಬಗಳಿಗೆ 8,100 ಕೋಟಿಗೂ ಹೆಚ್ಚು ಮೊತ್ತದ ವಿದ್ಯುತ್‌ ಉಚಿತವಾಗಿ ಪೂರೈಕೆ ಮಾಡಲಾಗಿದೆ.

- ಈ ಪೈಕಿ 2023ರ ಆಗಸ್ಟ್‌ನಿಂದ 2024ರ ಏಪ್ರಿಲ್‌ವರೆಗಿನ ಬಳಕೆಯ 6,589 ಕೋಟಿ ರು.ಗಳನ್ನು ಸರ್ಕಾರದಿಂದ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಗೃಹ ಜ್ಯೋತಿಯಡಿ ನೋಂದಣಿ ಆಗಿರುವ 1.65 ಕೋಟಿ ಗೃಹ ಬಳಕೆದಾರರ ಪೈಕಿ 85 ಲಕ್ಷ ಗೃಹ ಬಳಕೆದಾರರು ಶೂನ್ಯ ಬಿಲ್‌ಗೆ ಅರ್ಹತೆ ಪಡೆದಿದ್ದಾರೆ. ತನ್ಮೂಲಕ ಪ್ರತಿ ತಿಂಗಳು 350 ಕೋಟಿ ರು.ಗಳಷ್ಟು ಹಣವನ್ನು ಶೂನ್ಯ ಬಿಲ್‌ ಪಾವತಿಗೆ ಭರಿಸುತ್ತಿದ್ದು, ಇಷ್ಟೂ ಕುಟುಂಬ ಯಾವುದೇ ಹಣ ಪಾವತಿಸದೆ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಈವರೆಗೆ ಎಸ್ಕಾಂಗಳಿಗೆ ಬಿಡುಗಡೆಯಾಗಿರುವ ಹಣದ ಪೈಕಿ 2023ರ ಆಗಸ್ಟ್‌ನಿಂದ 2024ರ ಮಾರ್ಚ್‌ವರೆಗಿನ ವಿದ್ಯುತ್‌ ಬಳಕೆಗೆ 5,830 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ 2024ರ ಏಪ್ರಿಲ್‌, ಮೇ, ಜೂನ್ ತಿಂಗಳ ಬಳಕೆಯ ವಿದ್ಯುತ್‌ ಶುಲ್ಕಕ್ಕೆ ಸಂಬಂಧಿಸಿದಂತೆ 2,270 ಕೋಟಿ ರು. ಹಣ ಬಿಡುಗಡೆಗೂ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಈ ಮೂಲಕ ಜೂನ್‌ ವೇಳೆಗೆ 8,145 ಕೋಟಿ ರು. ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ.

ಜೂ.18ರಿಂದ ನೋಂದಣಿಗೆ ಚಾಲನೆ:

ಗೃಹಜ್ಯೋತಿ ಅಡಿ 2022-23ನೇ ಸಾಲಿನ ಸರಾಸರಿ ವಿದ್ಯುತ್‌ ಬಳಕೆಗೆ ಶೇ.10 ರಷ್ಟು ಹೆಚ್ಚು ಹಾಗೂ ಗರಿಷ್ಠ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯಲು ಅರ್ಹ ಗೃಹ ಬಳಕೆ ಗ್ರಾಹಕರು ನೋಂದಣಿ ಮಾಡಿಕೊಳ್ಳಲು ಜೂ.18 ರಿಂದಲೇ ಅವಕಾಶ ಮಾಡಿಕೊಡಲಾಗಿತ್ತು.

ಬಳಿಕ ಆ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಜ್ಯೋತಿ ಯೋಜನೆಗೆ ಅಧಿಕೃತಕವಾಗಿ ಚಾಲನೆ ನೀಡಿದ್ದರು.

ಗೃಹ ಜ್ಯೋತಿ ಹಣ ಬಹುತೇಕ ಬಿಡುಗಡೆ:2023ರ ಸೆಪ್ಟೆಂಬರ್‌ನಲ್ಲಿ ಆಗಸ್ಟ್‌ ತಿಂಗಳ ಗೃಹ ಜ್ಯೋತಿ ವಿದ್ಯುತ್‌ ಬಳಕೆಗೆ ಗ್ರಾಹಕರ ಪರವಾಗಿ ಬೆಸ್ಕಾಂಗೆ 235.07 ಕೋಟಿ ರು., ಮೆಸ್ಕಾಂಗೆ 52.73 ಕೋಟಿ ರು., ಹೆಸ್ಕಾಂಗೆ 83.48 ಕೋಟಿ ರು., ಗೆಸ್ಕಾಂಗೆ 53.46 ಕೋಟಿ ರು., ಚೆಸ್ಕಾಂಗೆ 51.26 ಕೋಟಿ ರು. ಸೇರಿದಂತೆ 478.95 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಬಳಿಕ ಪ್ರತಿ ವರ್ಷ ಸರಾಸರಿ 750 ಕೋಟಿ ರು.ಗಳಂತೆ ಶುಲ್ಕ ಭರಿಸಿದ್ದು, ಎಸ್ಕಾಂಗಳಿಗೆ 2024ರ ಮಾರ್ಚ್‌ ಅಂತ್ಯಕ್ಕೆ ಬರೋಬ್ಬರಿ 5,830 ಕೋಟಿ ರು.ಗಳನ್ನು ಸಂಪೂರ್ಣ ಬಿಡುಗಡೆ ಮಾಡಲಾಗಿದೆ. ಜತೆಗೆ ಏಪ್ರಿಲ್‌-ಮೇ ಬಳಕೆ ಪೈಕಿ ಮೇ ತಿಂಗಳಲ್ಲಿ 759 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ಏಪ್ರಿಲ್‌ನಿಂದ ಜೂನ್‌ವರೆಗೆ ಬಳಕೆಯ ಒಟ್ಟು ಹಣದಲ್ಲಿ ಸುಮಾರು 2,170 ಕೋಟಿ ರು.ಗಳಷ್ಟು ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಗೃಹ ಜ್ಯೋತಿ ಬಳಕೆಯ ಹಣ ಹೆಚ್ಚು ದಿನ ಬಾಕಿ ಉಳಿಸಿಕೊಳ್ಳುತ್ತಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 ಅರ್ಹ ಗೃಹ ಬಳಕೆದಾರರು: 1.65 ಕೋಟಿ ಕುಟುಂಬಶೂನ್ಯ ಬಿಲ್‌ಗೆ ಅರ್ಹತೆ ಪಡೆದವರು- 85 ಲಕ್ಷ ಕುಟುಂಬ

ಪ್ರತಿ ತಿಂಗಳ ಸರಾಸರಿ ವೆಚ್ಚ - 750 ಕೋಟಿ ರು.

ಆ.2023ರಿಂದ 2024ರ ಏಪ್ರಿಲ್‌.ವರೆಗಿನ 6,589 ಕೋಟಿ ರು. ಬಿಡುಗಡೆ 

ವರ್ಷವಾದರೂ ಡಿ-ಲಿಂಕ್‌ಗೆ ಇಲ್ಲ ಅವಕಾಶ!

ಗೃಹಜ್ಯೋತಿ ಯೋಜನೆಗೆ ಒಂದು ವರ್ಷ ಆದರೂ ಡಿ-ಲಿಂಕ್‌ಗೆ ಅವಕಾಶ ನೀಡದೆ ಇಂಧನ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಡಿ-ಲಿಂಕ್‌ ಆಯ್ಕೆ ನೀಡಿರುವುದಾಗಿ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಫೆಬ್ರುವರಿಯಲ್ಲೇ ಪ್ರಕಟಿಸಿದ್ದರು. ಆದರೆ ಈವರೆಗೂ ಆಯ್ಕೆ ನೀಡಲಾಗಿಲ್ಲ.

ಇದರಿಂದ ಗ್ರಾಹಕರು ತಮ್ಮ ಮನೆ ಬದಲಾಯಿಸಿದ ಹಾಗೂ ಇತರ ಸಂದರ್ಭಗಳಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಮನೆಯಿಂದ (ವಿದ್ಯುತ್‌ ಸಂರ್ಪಕ) ಸೌಲಭ್ಯ ಪಡೆಯುವುದನ್ನು ಸ್ಥಗಿತಗೊಳಿಸಿ ಮತ್ತೊಂದು ಮನೆಗೆ ಹೋದಾಗ ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿಲ್ಲದೆ ಸಾವಿರಾರು ಬಾಡಿಗೆದಾರರು ಅವಕಾಶದಿಂದ ವಂಚಿತರಾಗಿದ್ದಾರೆ.

Share this article