ಶಿರಸಿ:
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಮೂರು ದಿನ ಹಮ್ಮಿಕೊಳ್ಳಲಾದ ದಕ್ಷಿಣ ಭಾರತದ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಜ. ೧೩ರಂದು ಚಾಲನೆ ಸಿಗಲಿದೆ.ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಮತ್ತು ಉಜ್ಜಯಿನಿ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಜ.೧೩ರಂದು ಬೆಳಗ್ಗೆ ೧೦ಕ್ಕೆ ಗಂಗಾಧರೇಂದ್ರ ಸರಸ್ವತೀ ಶ್ರೀ ಹಾಗೂ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶಂಕರಾಚಾರ್ಯ ಶ್ರೀಅಭಿನವ ಶಂಕರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟನೆ ಆಗಲಿದೆ. ಶಾಸಕ ಶಿವರಾಮ ಹೆಬ್ಬಾರ್, ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ. ಪ್ರಫುಲ್ಲಕುಮಾರ ಮಿಶ್ರ, ಕಾರ್ಯದರ್ಶಿ ಪ್ರೊ. ವಿರೂಪಾಕ್ಷ ವಿ. ಜಡ್ಡೀಪಾಲ, ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಯಲ್ಲಾಪುರದ ಧಾತ್ರೀ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ಭಾಗವಹಿಸಲಿದ್ದಾರೆ. ಈ ವೇಳೆ ವಿಶ್ರಾಂತ ಕುಲಪತಿ ಪ್ರೊ.ಕಾ. ಈ. ದೇವನಾಥನ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಸಂಜೆ ಶೋಭಾಯಾತ್ರೆ:ಚತುರ್ವೇದಗಳ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ೧೩ರ ಸಂಜೆ ೪ ಗಂಟೆಯಿಂದ ಶಿರಸಿ ನಗರದಲ್ಲಿ ವೇದಶೋಭಾ ಆಯೋಜಿಸಲಾಗಿದೆ. ಶಿರಸಿಯ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡು ಶಿವಾಜಿ ಚೌಕ್, ಸಿ.ಪಿ. ಬಝಾರ್, ದೇವಿಕೆರೆ ಮಾರ್ಗವಾಗಿ ಸಾಗಿ ಯೋಗಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ.ಈ ವಿಶಿಷ್ಟ, ವಿನೂತನ ವೇದಮಾತೆಯ ಸೇವಾಕೈಂಕರ್ಯದ ಶೋಭಾಯಾತ್ರೆಯಲ್ಲಿ ಸ್ವರ್ಣವಲ್ಲೀ ಶ್ರೀ, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀಅಭಿನವ ಶಂಕರ ಭಾರತೀ ಶ್ರೀ ಮತ್ತು ಸಿದ್ದಾಪುರದ ಶ್ರೀಮನ್ನೆಲೆಮಾವಿನಮಠದ ಶ್ರೀಮಾಧವಾನಂದ ಭಾರತೀ ಶ್ರೀ ಸಾನ್ನಿಧ್ಯ ನೀಡಲಿದ್ದಾರೆ. ವೈದಿಕರು, ವಿದ್ವಾಂಸರು, ವಿದ್ಯಾರ್ಥಿಗಳು, ಮಾತೆಯರು, ವೇದಾಭಿಮಾನಿಗಳು, ಆಸ್ತಿಕ ಮಹನೀಯರು ಸಹಸ್ರಾರು ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಮನವಿ ಮಾಡಲಾಗಿದೆ.
ಮೂರು ದಿನ ಸ್ವರ್ಣವಲ್ಲೀ ಮಠದಲ್ಲಿ ವೇದಪಾರಾಯಣ, ವಿದ್ವಾಂಸರಿಗೆ ಸನ್ಮಾನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.