ನಾಳೆ ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಶಿವ ಲಕ್ಷದೀಪೋತ್ಸವ

KannadaprabhaNewsNetwork |  
Published : Dec 12, 2024, 12:33 AM IST
೧೧ಕೆಎಲ್‌ಆರ್-೮ಕೋಲಾರ ದಕ್ಷಿಣ ಕಾಶಿ ಖ್ಯಾತಿಯ ಅಂತರಗಂಗೆ ಕಾಶೀ ವಿಶ್ವೇಶ್ವರ ಸನ್ನಿಯಲ್ಲಿ ನಡೆಯುವ ಶಿವ ಲಕ್ಷ ದೀಪೋತ್ಸವ ನಡೆಸಿಕೊಂಡು ಬಂದಿರುವ ಕೆಎಸ್‌ಆರ್‌ಪಿ ನಿವೃತ್ತ ಎಎಸ್‌ಐ ಬಿ.ಗೋಪಾಲ್ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಚಳಿಯ ನಡುವೆಯೂ ಅಂತರಂಗೆಯ ಕ್ಷೇತ್ರವನ್ನು ಒಂದು ಸಾವಿರ ಕೆಜಿ ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ದೀಪ ಬೆಳಗಿಸುತ್ತಿದ್ದು, ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಂಗೆ ದೇವಾಲಯದ ಕಲ್ಯಾಣಿಯಲ್ಲಿ ಶಿವನ ಉತ್ಸವ ಮೂರ್ತಿಯ ತೆಪ್ಪೋತ್ಸವ ಭಕ್ತರನ್ನು ಆಕರ್ಷಿಸಲಿದೆ, ಜತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೋಲಾರ

ದಕ್ಷಿಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಅಂತರಗಂಗೆಯಲ್ಲಿ ಡಿ.೧೩ರಂದು ಶುಕ್ರವಾರ ರಾತ್ರಿ ೧೮ನೇ ವರ್ಷದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ನಡೆಸುತ್ತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದು ಕೆಎಸ್‌ಆರ್‌ಪಿ ನಿವೃತ್ತ ಎಎಸ್‌ಐ ಬಿ.ಗೋಪಾಲ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿ, ಕಳೆದ ೧೮ ವರ್ಷದಿಂದ ನಾವು ಈ ಶಿವ ಲಕ್ಷ ದೀಪೋತ್ಸವ ಆಚರಿಸಿಕೊಂಡು ಬರುತ್ತಿದ್ದು, ದೀಪಗಳನ್ನು ಬೆಳಗಲು ಸಾವಿರ ಕೆಜಿ ಎಣ್ಣೆ ಬಳಸುತ್ತಿರುವುದಾಗಿ ತಿಳಿಸಿದರು.

ತನ್ನ ಇಷ್ಟಾರ್ಥ ಸಿದ್ಧಿಯಾದ ಕಾರಣ ೧೯೯೯ರಿಂದ ಶಿವ ಲಕ್ಷ ದೀಪೋತ್ಸವ ತಾವು ಉದ್ಯೋಗ ಮಾಡುತ್ತಿದ್ದ ಪಾವಗಡದಲ್ಲಿ ನಡೆಸುತ್ತಿದ್ದು, ಇದಾದ ನಂತರ ಕೋಲಾರದ ನನ್ನ ಸ್ನೇಹಿತರು ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ಮಾಡಲು ಸಲಹೆ ನೀಡಿದ ಕಾರಣ ೨೦೦೭ರಿಂದ ನಿರಂತರವಾಗಿ ಈ ಶಿವದೀಪೋತ್ಸವ ನಡೆಸಿಕೊಂಡು ಬರಲಾಗಿದೆ ಎಂದು ತಿಳಿಸಿದರು.

ಅರ್ಚಕರಾದ ಮಂಜುನಾಥ ದೀಕ್ಷಿತ್, ಚಂದ್ರಶೇಖರ್ ದೀಕ್ಷಿತ್, ಕಾಶಿವಿಶ್ವೇಶ್ವರ ದೀಕ್ಷಿತ್‌ರ ಸಲಹೆಯಂತೆ ೧೮ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಲಕ್ಷಾಂತರ ದೀಪಗಳನ್ನು ಕಾಶಿ ವಿಶ್ವೇಶ್ವರನ ಸನ್ನಿಧಿಯಲ್ಲಿ ಸಾವಿರಾರು ಭಕ್ತರಿಂದ ಬೆಳಗಿಸಲು ಸಿದ್ಧತೆ ನಡೆಸಲಾಗಿದೆ ಎಂದರು.

ತೆಪ್ಪೋತ್ಸವ ಭಜನೆ, ವಾದ್ಯಗೋಷ್ಠಿ:

ಡಿ.೧೩ ರ ಬೆಳಗ್ಗೆ ೫ ಗಂಟೆಗೆ ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಸ್ವಾಮಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಗುವುದು.

ಬೆಳಗ್ಗೆ ೭ ಗಂಟೆಗೆ ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರ ಸ್ವಾಮಿಗೆ ಅಭಿಷೇಕ, ಪೂಜೆ, ವಿಶೇಷ ಹೂವಿನ ಅಲಂಕಾರವಿದ್ದು, ಸಂಜೆ ೬ ಗಂಟೆಯಿಂದ ಲಕ್ಷ ದೀಪೋತ್ಸವ ಆರಂಭವಾಗಲಿದೆ. ವಾದ್ಯಗೋಷ್ಠಿ, ಭಜನೆ ನಿರಂತರವಾಗಿ ನಡೆಯಲಿದ್ದು, ಸಹಸ್ರಾರು ಭಕ್ತರಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ, ಇದು ನಮ್ಮ ಕುಟುಂಬದ ಕಾರ್ಯಕ್ರಮವಾಗಿರದೇ ಸಾರ್ವಜನಿಕ ಉತ್ಸವವಾಗಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.

ಚಳಿಯ ನಡುವೆಯೂ ಅಂತರಂಗೆಯ ಕ್ಷೇತ್ರವನ್ನು ಒಂದು ಸಾವಿರ ಕೆಜಿ ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ದೀಪ ಬೆಳಗಿಸುತ್ತಿದ್ದು, ಕಲ್ಲು ಬಸವನ ಬಾಯಿಂದ ಸದಾ ನೀರು ಜಿನುಗುವ ಅಂತರಂಗೆ ದೇವಾಲಯದ ಕಲ್ಯಾಣಿಯಲ್ಲಿ ಶಿವನ ಉತ್ಸವ ಮೂರ್ತಿಯ ತೆಪ್ಪೋತ್ಸವ ಭಕ್ತರನ್ನು ಆಕರ್ಷಿಸಲಿದೆ, ಜತೆಗೆ ವಿಶಾಲಾಕ್ಷಿ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿಯ ಕಲ್ಯಾಣೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಮಧ್ಯರಾತ್ರಿ ೧ ಗಂಟೆಯವರೆಗೂ ನಾದಸ್ವರ, ಭಜನೆ ಮತ್ತಿತರ ಕಾರ್ಯಕ್ರಮಗಳು ಭಕ್ತರನ್ನು ರಂಜಿಸಲಿದ್ದು, ಇಡೀ ಅಂತರಗಂಗೆ ಹಣತೆಗಳಿಂದ ಕಂಗೊಳಿಸಲು ಸಿದ್ಧತೆ ನಡೆದಿದೆ. ಸಂಜೆ ಆರು ಗಂಟೆಯಿಂದಲೂ ಅಂತರಂಗೆ ಬೆಟ್ಟದತ್ತ ಆಗಮಿಸಿ ಪೂಜೆಯಲ್ಲಿ ಹಾಗೂ ಹಣತೆಗಳನ್ನು ಬೆಳಗಲು ಸಹಕರಿಸಲಿದ್ದಾರೆ, ಒಟ್ಟಾರೆ ಇಡೀ ರಾತ್ರಿ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ ಜಾತ್ರೆಯ ಕಳೆ ಕಂಡು ಬರಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ವೆಂಕಟೇಶ ಯಾದವ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿ.ಜೆ.ರಾಯ್‌ ಕೇಸ್‌ : ಸಚಿವೆ ನಿರ್ಮಲಾಗೆ ಕೇರಳ ಸಿಎಂ ಪತ್ರ
ಕರ್ನಾಟಕಕ್ಕೆ ಇನ್ನೊಂದು ‘ಜಲಸಮರ’ದ ಕಂಟಕ!