ನಾಳೆ ರಾಜವೀರ ಮದಕರಿನಾಯಕರ 242ನೇ ಪುಣ್ಯಸ್ಮರಣೆ

KannadaprabhaNewsNetwork | Published : May 14, 2024 1:03 AM

ಸಾರಾಂಶ

ನಾಡದೊರೆ ಮದಕರಿ ನಾಯಕನ ಪುಣ್ಯ ಸ್ಮರಣೆ ಆಚರಣೆ ಕುರಿತಂತೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗವನ್ನಾಳಿದ ನಾಡದೊರೆ ರಾಜವೀರ ಮದಕರಿನಾಯಕರ 242 ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮೇ 15 ರ ಬುಧವಾರ ಸರಳವಾಗಿ ಆಚರಿಸಲಾಗುತ್ತಿದೆ ಎಂದು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸರಳತೆ ಸ್ಪರ್ಶ ನೀಡಲಾಗುತ್ತಿದೆ. ಅಂದು ಬೆಳಿಗ್ಗೆ 11ಗಂಟೆಗೆ ಮದಕರಿನಾಯಕನ ಪ್ರತಿಮೆಯನ್ನು ವಿಶೇಷವಾಗಿ ಅಲಂಕರಿಸಿ ಸಮಸ್ತ ಜನತೆಗೂ ಪುಷ್ಪಾರಚನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು. ಸಂಜೆ ಮದಕರಿ ನಾಯಕ ಪ್ರತಿಮೆ ಮುಂಭಾಗ ಮೇಣದ ಬತ್ತಿಗಳ ಹಚ್ಚಿ ಗೌರವ ಸಮರ್ಪಿಸಲಾಗುವುದು. ಕಾರ್ಯಕ್ರಮ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೆ ಚಿತ್ರದುರ್ಗ ಜಿಲ್ಲೆಯ ಸರ್ವ ಸಮುದಾಯದ ಪ್ರಾತಿಧ್ಯವಾಗಿ ರೂಪಿಸಲಾಗಿದೆ. ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.

ಚಿತ್ರದುರ್ಗವನ್ನಾಳಿದ ಮದಕರಿನಾಯಕನನ್ನು ಸ್ಮರಿಸುವುದರಲ್ಲಿ ಹಿಂದೆ ಬಿದ್ದಿದ್ದೇವೇನೋ ಅನ್ನಿಸುತ್ತೆ. ಮುಂದಿನ ದಿನಗಳಲ್ಲಿ ಸ್ಮರಣೋತ್ಸವ, ಪಟ್ಟಾಭಿಷೇಕ, ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈ ಹಿಂದೆ ಚಿತ್ರದುರ್ಗಕ್ಕೆ ಆಗಮಿಸಿದ್ದ ಬಿಜೆಪಿ ಮುಖಂಡ ಅಮಿತ್ ಶಾ, ಮದಕರಿ ನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಈ ನಿಟ್ಟಿನಲ್ಲಿ ಆಲೋಚಿಸಿ ಭರವಸೆ ನೀಡಿದ್ದರು. ಆದರೆ ಎರಡು ವರ್ಷಗಳಾದರೂ ಭರವಸೆ ಈಡೇರಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ನೀಡಿದ ಭರವಸೆ ಈಡೇರಿಸುವಂತೆ ವಿನಂತಿ ಮಾಡಲಾಗುವುದೆಂದರು.

ಚಿತ್ರದುರ್ಗದಲ್ಲಿ ನಿರ್ಮಿಸಲಾದ ವಾಲ್ಮೀಕಿ ಭವನ ಅವೈಜ್ಞಾನಿಕಾಗಿದೆ. ಕಾಮಗಾರಿ ಆರಂಭವಾಗಿ ಐದು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಆತುರವಾಗಿ ಉದ್ಘಾಟನೆ ನೆರವೇರಿಸಲಾಗಿದೆ. ಸಚಿವ ನಾಗೇಂದ್ರ ಅವರನ್ನು ಕರೆಯಿಸಿ ಭವನದ ಅವ್ಯವಸ್ಥೆ ಗಮನಕ್ಕೆ ತರಲಾಗಿತ್ತು. ಸೂಕ್ತ ಬದಲಾವಣೆಗೂ ಅವರು ತಿಳಿಸಿದ್ದರು. ಈ ವಿಚಾರದಲ್ಲಿ ಅಧಿಕಾರಿಗಳು ತಪ್ಪೆಸಗಿದ್ದಾರೆ. ಅಂದಿನ ಜನಪ್ರತಿನಿಧಿಗಳು ಉದಾಸೀನ ತೋರಿದ ಕಾರಣ ವಾಲ್ಮೀಕಿ ಭವನಕ್ಕೆ ಇಂತಹ ಸ್ಥಿತಿ ಬಂದೊದಗಿದೆ ಎಂದು ಬಿ.ಕಾಂತರಾಜ್ ಹೇಳಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ಚುನಾವಣೆ ನೀತಿ ಸಂಹಿತೆಯಿರುವುದರಿಂದ ಮದಕರಿ ನಾಯಕನ ಪುಣ್ಯಸ್ಮರಣೆಯನ್ನು ಯಾವುದೇ ಆಡಂಬರವಿಲ್ಲದೆ ಸರಳವಾಗಿ ಆಚರಿಸುತ್ತೇವೆ. ಮುಂದಿವ ವರ್ಷ ಜಯಂತಿ ಹಾಗೂ ಪುಣ್ಯಸ್ಮರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಸಾಹಿತಿಗಳಿಂದ ಉಪನ್ಯಾಸ ಏರ್ಪಡಿಸಿ ಯುವ ಸಮುದಾಯದ ಮನದಲ್ಲಿ ಮದಕರಿ ನಾಯಕ ಸಾಹಸ ತುಂಬಲಾಗುವುದು. ಇದು ಕೇವಲ ನಾಯಕ ಜನಾಂಗದವರಿಗಷ್ಟೆ ಸೀಮಿತವಲ್ಲ. ಎಲ್ಲಾ ಜಾತಿಯವರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ನೀತಿ ಸಂಹಿತೆ ಹಿನ್ನೆಲೆ ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ, ಪ್ರಮುಖ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿಲ್ಲವೆಂದು ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.ನಾಯಕ ಸಮಾಜದ ಮುಖಂಡರಾದ ಜೆ.ಎನ್.ಕೋಟೆ ಗುರುಸಿದ್ದಪ್ಪ, ಕಾಟಿಹಳ್ಳಿ ಕರಿಯಪ್ಪ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಡಿ.ಗೋಪಾಲಸ್ವಾಮಿ ನಾಯಕ, ಹೆಚ್.ಅಂಜಿನಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

Share this article