ಕನ್ನಡಪ್ರಭ ವಾರ್ತೆ ಕಲಬುರಗಿ
ಮುಖ್ಯ ಸಮಾರಂಭ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವ ವಿವಿ, ಅಖಿಲ ಭಾರತ ಶಿವಾನುಭವ ಮಂಟಪ, ಜಿಲ್ಲಾ ವೀರಶೈವ ಸಮಾಜ ಹಾಗೂ ಶರಣಬಸವೇಶ್ವರ ಸಂಸ್ಥಾನದ ಸಮಸ್ತ ಭಕ್ತಾದಿಗಳ ಸಂಯುಕ್ತಾಶ್ರಯದಲ್ಲಿ ಸಂಜೆ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅನುಭವ ಮಂಟಪದಲ್ಲಿ ನಡೆಯಲಿದೆ.ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ. ಸಾರಂಗದರ ದೇಶಿಕೇಂದ್ರ ಮಹಾಸ್ವಾಮಿಗಳು ಜಂಟಿಯಾಗಿ ಜನ್ಮದಿನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಚೌಡಾಪುರಿ ಹಿರೇಮಠದ ರಾಜಶೇಖರ ಮಹಾಸ್ವಾಮಿಗಳು, ಮುಗಳನಾಗವಿಯ ಕಟ್ಟಿಮನಿ ಹಿರೇಮಠದ ಸಂಸ್ಥಾನದ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಉಪಸ್ಥಿತರಿರುವರು.ಶರಣಬಸವ ವಿವಿ ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಬರೆದಿರುವ “ಪೂಜ್ಯ ಡಾ ಅವ್ವಾಜಿಯವರ ಚಿತ್ರಾತ್ಮಕ ಜೀವನ ಚರಿತ್ರೆ” ಪುಸ್ತಕ ಬಿಡುಗಡೆ ನಡೆಯಲಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿವಿ ಎಲ್ಲಾ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದ ಮತ್ತು ಪವಿತ್ರ ದೇಗುಲದ ಭಕ್ತರು, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರನ್ನು ಸನ್ಮಾನಿಸಿ ಗೌರವಿಸುವರು.ನ. 1ರಂದು ನಡೆಯಲಿರುವ ಸಮಾರಂಭದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಇಬ್ಬರಿಗೂ ಭಕ್ತರು ತುಲಾಭಾರ ಸಮರ್ಪಿಸುತ್ತಿರೋದು ವಿಶೇಷ. ಶರಣಬಸವ ವಿವಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆಯವರು ನಾಣ್ಯದಲ್ಲಿ, ಮಾಣಿಕಮ್ಮ ಹಾಗೂ ಮಡಿವಾಳಯ್ಯನವರು ಪವಿತ್ರ ರುದ್ರಾಕ್ಷಿಗಳೊಂದಿಗೆ ತುಲಾಭಾರ ಸಮರ್ಪಿಸಲಿರುವರು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.