ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಒಕ್ಕುಂದ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕ್ರಿ.ಶ 8ನೇ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೆ ವಿಸ್ತಾರಗೊಂಡಿದ್ದ ಕರ್ನಾಟಕದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆಗಳು ಸಮೃದ್ಧಿಯಾಗಿದ್ದವು. ಈ ವೇಳೆ ರಚಿತವಾದ ಕವಿರಾಜಮಾರ್ಗ ಕೃತಿಯಲ್ಲಿ, ಪಟ್ಟದಕಲ್ಲು, ಕೋಪನ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ) ಮತ್ತು ಬೈಲಹೊಂಗಲ ತಾಲೂಕಿನ ಒಕ್ಕುಂದ ಈ ನಾಲ್ಕು ಪ್ರದೇಶಗಳ ಮಧ್ಯೆ ವಾಸಿಸುತ್ತಿದ್ದವರು ಅಚ್ಚ ಕನ್ನಡವನ್ನು ಮಾತನಾಡುತ್ತಿದ್ದರು ಎಂದು ಉಲ್ಲೇಖವಿದೆ. ಐತಿಹಾಸಿಕ ಮಹತ್ವವನ್ನು ಹೊಂದಿದ್ದರೂ ಕಳೆದ ಆರು ವರ್ಷಗಳಿಂದ ಗ್ರಾಮಸ್ಥರ ಸಕ್ರಿಯ ಮುಂದಾಳತ್ವದಲ್ಲಿ ಒಕ್ಕುಂದ ಉತ್ಸವ ಆಯೋಜನೆಯಾಗುತ್ತಿದೆ ಎಂದು ತಿಳಿಸಿದರು.
ಫೆ.1 ರಂದು ಬೆಳಗ್ಗೆ 9ಕ್ಕೆ ರಾಚೋಟಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಲ್ಲಗುಡಿ (ತ್ರಿಕೂಟೇಶ್ವರ) ದೇವಸ್ಥಾನದಿಂದ ನೃಪತುಂಗ ಮುಖ್ಯ ವೇದಿಕೆವರೆಗೆ ಅಮೋಘವರ್ಷ ನೃಪತುಂಗ ಜ್ಯೋತಿ ಪ್ರದೀಪನ ಹಾಗೂ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸುವರು. ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಜ್ಯೋತಿ ಬೆಳಗಿಸುವರು. ಗ್ರಾಪಂ ಅಧ್ಯಕ್ಷೆ ನಿರ್ಮಲಾ ಕಲ್ಲಿ ಅಧ್ಯಕ್ಷತೆ ವಹಿಸುವರು. ನಯಾನಗರದ ಅಭಿನವಸಿದ್ದಲಿಂಗ ಸ್ವಾಮೀಜಿ, ಒಕ್ಕುಂದ ರಾಚೋಟಿ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಉಪವಿಭಾಗಾದಿಕಾರಿ ಪ್ರವೀಣ ಜೈನ, ತಹಶೀಲ್ದಾರ ಎಚ್.ಎನ್.ಶಿರಹಟ್ಟಿ, ತಾಪಂ ಇಒ ಸಂಜೀವ ಜುನ್ನೂರ, ಕಸಾಪ ತಾಲೂಕು ಅಧ್ಯಕ್ಷ ಎನ್.ಆರ್.ಠಕ್ಕಾಯಿ ಆಗಮಿಸಲಿದ್ದಾರೆ. ಹಿರಿಯ ಸಾಹಿತಿ ವೈ.ಎಂ.ಯಾಕೋಳ್ಳಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಕಲಾವಿದ ಸಿ.ಕೆ.ಮೆಕ್ಕೆದ ಮಾತನಾಡಿ, ತಿರುಳ್ಗನ್ನಡ ನಾಡು ಎನ್ನುವುದು ಕೇವಲ ಭೌಗೋಳಿಕ ಹೆಸರು ಅಲ್ಲ. ಇದು ಒಂದು ಸಾಂಸ್ಕೃತಿಕ ಮೂಲ. ಮುಂದಿನ ಯುವ ಪೀಳಿಗೆಗೆ ತಿರುಳ್ಗನ್ನಡ ನಾಡು ಎಂದರೇನು? ಇತಿಹಾಸ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಕೊಡುವ ಜವಾಬ್ದಾರಿ ನಮ್ಮದು. ರಾಜ್ಯ ಸರ್ಕಾರವು ಇತಿಹಾಸ ಮತ್ತು ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಲು ಉತ್ಸವಗಳಿಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಎಂದರು.ಹಿನ್ನೆಲೆ ಗಾಯಕ ರವೀಂದ್ರ ಸೊರಗಾಂವಿ ಹಾಗೂ ತಂಡದವರು ರಸಮಂಜರಿ ಕಾರ್ಯಕ್ರಮ ನೀಡಲಿದ್ದು, ಜನಪದ ಮತ್ತು ಕನ್ನಡ ಚಲನಚಿತ್ರ ಗೀತೆಗಳ ಸುವರ್ಣ ಸಂಯೋಜನೆಗೆ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಈ ವೇಳೆ ಮಹಾಂತೇಶ ತುರಮರಿ, ರಾಮನಗೌಡ ಪಾಟೀಲ, ಅಶೋಕ ಭದ್ರಶೆಟ್ಟಿ, ಗಜದಂಡ ಸುತಗಟ್ಟಿ, ಸಂಗಣ್ಣ ಭದ್ರಶೆಟ್ಟಿ, ಸುರೇಶ ಗಣಾಚಾರಿ, ಮಡಿವಾಳಪ್ಪ ತಡಸಲ, ಸಿದ್ದನಗೌಡ ಪಾಟೀಲ, ಈರನಗೌಡ ಶೀಲವಂತರ, ಈರಣ್ಣ ಹೊಸೂರ ಇದ್ದರು.