ನಾಳೆ ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ನೀನಾ-60 ಸಂಭ್ರಮ

KannadaprabhaNewsNetwork | Published : Dec 24, 2024 12:48 AM

ಸಾರಾಂಶ

ನೀನಾ ಪ್ರಕಟಗೊಂಡಿದ್ದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ 24ನೇ ವಯಸ್ಸಿನಲ್ಲಿ. ಆ ತಲೆಮಾರಿಗೆ ಹೊಸ ಮಾರ್ಗ ಹಾಕಿಕೊಟ್ಟ ನೀನಾ ಕೃತಿ ಹೊಸ ನುಡಿಗಟ್ಟು ಹಾಗೂ ವಿಭಿನ್ನ ಸೃಜನಶೀಲ ವಿನ್ಯಾಸವನ್ನು ನೀಡಿದ ಶ್ರೇಯಸ್ಸು ಸಹ ಪಡೆಯುತ್ತದೆ.

ಧಾರವಾಡ:

ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮೊದಲ ಕವನ ಸಂಕಲನ ನೀನಾ ಪ್ರಕಟವಾಗಿ ಇದೀಗ 60 ವರ್ಷಗಳಾದ ಹಿನ್ನೆಲೆಯಲ್ಲಿ ಅನನ್ಯ ಪ್ರಕಾಶನವು ಡಿ. 25ರಂದು ಬೆಳಗ್ಗೆ 10.30ಕ್ಕೆ ರಂಗಾಯಣ ಸಾಂಸ್ಕೃತಿಕ ಭವನದಲ್ಲಿ ನೀನಾ 60ರ ಸಂಭ್ರಮ ಆಯೋಜಿಸಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನನ್ಯ ಪ್ರಕಾಶನದ ಹೇಮಾ ಪಟ್ಟಣಶೆಟ್ಟಿ, ನೀನಾ ಪ್ರಕಟಗೊಂಡಿದ್ದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ 24ನೇ ವಯಸ್ಸಿನಲ್ಲಿ. ಆ ತಲೆಮಾರಿಗೆ ಹೊಸ ಮಾರ್ಗ ಹಾಕಿಕೊಟ್ಟ ನೀನಾ ಕೃತಿ ಹೊಸ ನುಡಿಗಟ್ಟು ಹಾಗೂ ವಿಭಿನ್ನ ಸೃಜನಶೀಲ ವಿನ್ಯಾಸವನ್ನು ನೀಡಿದ ಶ್ರೇಯಸ್ಸು ಸಹ ಪಡೆಯುತ್ತದೆ. 60 ವರ್ಷಗಳ ನಂತರ ಇಂದಿಗೂ ಈ ಸಂಕಲನ ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ ಪ್ರಸ್ತುತವಾಗಿದೆ ಎಂದರು.

ಹೊಸ ರೂಪದಲ್ಲಿ ನೀನಾ ಮತ್ತೆ ಪ್ರಕಟಗೊಂಡಿದ್ದು, 1964ರಲ್ಲಿ ಪ್ರಕಟಗೊಂಡಾಗ ಓದಿದ ತಲೆಮಾರಿನವರು, ನಂತರ 1988ರಲ್ಲಿ ಅದರ ಓದಿಗೆ ತೆರೆದುಕೊಂಡವರು ಮತ್ತು ಈಗ ನೀನಾ-60ಕ್ಕೆ ಸ್ಪಂದನೆ ಬರೆಯುವ ಸಂದರ್ಭದಲ್ಲಿ ಓದಿದವರು....ಹೀಗೆ ಮೂರು ವಿಭಿನ್ನ ಕಾಲಘಟ್ಟದ ಓದು ಕೂತೂಹಲಕಾರವಾಗಿವೆ. ಈ ಕೃತಿಯ ಮೂರನೇ ಭಾಗದಲ್ಲಿ ಸಂಕಲಿಸಿದ ವಿಮರ್ಶೆ ಹಾಗೂ ಪತ್ರಗಳು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಖ್ಯಾತನಾಮರ ಪತ್ರಗಳು ಹಾಗೂ ಮೊದಲ ಅವೃತ್ತಿಗೆ ಚಂದ್ರಶೇಖರ ಪಾಟೀಲರು ಬರೆದ ಬ್ಲರ್ಬಗಳನ್ನು ಇಲ್ಲಿ ಸೇರಿಸಿದ್ದೇನೆ ಎಂದರು.

ಈ ಕೃತಿಯೊಂದಿಗೆ ಅಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಹೊಸ ಕವನ ಸಂಕಲನ ಹೊಳೆಗೆ ಹೊಳೆದರ್ಥ, ಲೇಖನಗಳಾದ ಸಖ್ಯದ ಆಖ್ಯಾನ, ನುಡಿ ಸೊಗಡು ಹಾಗೂ ಮುಗಿಯದ ಮಾತು ಕೃತಿಗಳು ಸಹ ಬಿಡುಗಡೆಯಾಗಿಲಿವೆ. ಈ ಪುಸ್ತಕಗಳನ್ನು ಸಾಹಿತಿ ರಘುನಾಥ ಚ.ಹ. ಲೋಕಾರ್ಪಣೆ ಮಾಡಲಿದ್ದು, ದೇವು ಪತ್ತಾರ ಹಾಗೂ ಕಥೆಗಾರ್ತಿ ರೂಪಾ ಜೋಶಿ ಪುಸ್ತಕಗಳ ಕುರಿತು ಮಾತನಾಡುತ್ತಾರೆ ಎಂದು ಹೇಮಾ ಪಟ್ಟಣಶೆಟ್ಟಿ ಮಾಹಿತಿ ನೀಡಿದರು.

Share this article