ತ್ರಿವಿಧ ದಾಸೋಹದಲ್ಲಿ ಧರ್ಮಸ್ಥಳಕ್ಕೆ ಅಗ್ರಸ್ಥಾನ: ನಾರಾಯಣಗೌಡ

KannadaprabhaNewsNetwork |  
Published : Oct 27, 2024, 02:25 AM IST
26ಕೆಎಂಎನ್‌ಡಿ-11ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಲಕ್ಷ್ಮೀಪೂಜೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಮಹಿಳಾ ಸಬಲೀಕರಣ, ಧಾರ್ಮಿಕ ಪುನರುತ್ಥಾನದ ಮೂಲಕ ಧರ್ಮಮಾರ್ಗದಲ್ಲಿ ಬದುಕಿನ ದಾರಿಯನ್ನು ರೂಪಿಸುವುದು ನಮ್ಮ ಸಂಸ್ಥೆಯ ಮುಖ್ಯ ಗುರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಶಿಕ್ಷಣ, ಆರೋಗ್ಯ, ಅನ್ನ ದಾಸೋಹ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಗ್ರಸ್ಥಾನದಲ್ಲಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಶ್ರೀಲಕ್ಷ್ಮೀಪೂಜೆ, ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಧಾರ್ಮಿಕ ಕೇಂದ್ರಗಳಲ್ಲಿ ಅನ್ನ ದಾಸೋಹದ ಪರಿಕಲ್ಪನೆಯನ್ನು ಮೂಡಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿಗಳು. ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ಧರ್ಮಸ್ಥಳವನ್ನು ಸಾಮಾಜಿಕ ಪರಿವರ್ತನೆಯ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಾಡಿನ ಪ್ರತಿಯೊಂದು ಗ್ರಾಮವನ್ನೂ ತಲುಪುವ ಮತ್ತು ಗ್ರಾಮೀಣ ಜನರ ಕಷ್ಟ- ಸುಖಗಳನ್ನು ಆಲಿಸಿ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

ಮದ್ಯವರ್ಜನ ಶಿಬಿರಗಳ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ. ಗ್ರಾಮೀಣ ಭಾಗಗಳಲ್ಲಿಯೂ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಧರ್ಮಮಾರ್ಗದಲ್ಲಿ ಜನರನ್ನು ಮುನ್ನಡೆಸುವ ಮೂಲಕ ಶಾಂತಿ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆ ತನ್ನ ಕಾರ್ಯಯೋಜನೆಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವಂತೆ ಮನವಿ ಮಾಡಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಮಹಿಳಾ ಸಬಲೀಕರಣ, ಧಾರ್ಮಿಕ ಪುನರುತ್ಥಾನದ ಮೂಲಕ ಧರ್ಮಮಾರ್ಗದಲ್ಲಿ ಬದುಕಿನ ದಾರಿಯನ್ನು ರೂಪಿಸುವುದು ನಮ್ಮ ಸಂಸ್ಥೆಯ ಮುಖ್ಯ ಗುರಿ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್, ನಿಕಟ ಪೂರ್ವ ಉಪಾಧ್ಯಕ್ಷ ಕೆ.ಎಸ್.ರಾಜೇಶ್, ಸದಸ್ಯರಾದ ಪದ್ಮಾವತಿ, ಜ್ಯೋತಿ, ಹೋಟೆಲ್ ಉದ್ಯಮಿ ಅರವಿಂದ ಕಾರಂತ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್ ಸೇರಿದಂತೆ ಇತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ