ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ಸೋಮವಾರ ಆ.4 ರಿಂದ ಆ.9 ರವರೆಗೆ ಮಳೆಯಾಗಿದ್ದು, ಬಹುತೇಕ ತಾಲೂಕಿನೆಲ್ಲೆಡೆ ಮಳೆ ನೀರಿನಿಂದ ಹಳ್ಳ, ಕೊಳ್ಳ ತುಂಬಿ ಹರಿದು, ರಸ್ತೆ ಹಾಗೂ ಮನೆಗಳಿಗೆ ಹಾನಿಯಾಗಿದೆಯಲ್ಲದೆ, ಲಕ್ಷಾಂತರ ರು. ಬೆಳೆಯೂ ಸಹ ನೀರಿನಲ್ಲಿ ಕೊಚ್ಚಿಹೋಗಿದೆ. ಮಳೆಯಾಗಿ ಪ್ರತಿನಿತ್ಯ ಪರಿತಪಿಸುತ್ತಿದ್ದ ರೈತ ನಿತ್ಯದ ಮಳೆಯಿಂದ ಪಷ್ಯತಾಪ ಪಡುವಂತಾಗಿದೆ.
ಶನಿವಾರ ರಾತ್ರಿ ತಾಲೂಕಿನಾದ್ಯಂತ ನಾಯಕನಹಟ್ಟಿ-32.02, ತಳಕು-31.02, ಚಳ್ಳಕೆರೆ-24.00, ಪರಶುರಾಮಪುರ-06.04, ದೇವರಮರಿಕುಂಟೆ-4.04 ಒಟ್ಟು 97.012 ಮಳೆಯಾಗಿದ್ದು, ಈ ಹಿಂದೆ 779.16 ಎಂ.ಎಂ ಮಳೆಯಾಗಿದ್ದು ಇದು ಸೇರಿ ಒಟ್ಟು 877.08 ಎಂ.ಎಂ ಮಳೆಯಾಗಿದೆ.ತಳಕು ಹೋಬಳಿಯ ಗೌರಸಮುದ್ರ ತುಮಲು ಪ್ರದೇಶದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ತುಮಲು ರಸ್ತೆಯ ತುಂಬ ನೀರು ಹರಿದು ಅಸ್ವಸ್ಥವಾಗಿದೆ. ಬೂದಿಹಳ್ಳಿಯಿಂದ ಗೌರಸಮುದ್ರ ತುಮಲು ಪ್ರದೇಶಕ್ಕೆ ಹೋಗುವ ರಸ್ತೆಯಲ್ಲೂ ಸಹ ಮಿತಿಮೀರಿ ಆಳಾವಾದ ಗುಂಡಿಗಳಾಗಿದ್ದು, ಗುಂಡಿಯ ತುಂಬ ನೀರು ತುಂಬಿ, ವಾಹನ, ಸಾರ್ವಜನಿಕರು ಪ್ರಾಣವನ್ನು ಕೈಯಲ್ಲಿಡಿದು ಸಾಗಬೇಕಿದೆ. ಕಳೆದ ವರ್ಷವೂ ಸಹ ಮಳೆಗಾಲದ ಸಂದರ್ಭದಲ್ಲಿ ಇದೇ ರಸ್ತೆ ಮಳೆಯಿಂದ ಹಾನಿಯಾಗಿತ್ತು. ಇಡೀ ರಸ್ತೆಯೇ ಗುಂಡಿಯಿಂದ ಆವೃತ್ತವಾಗಿದೆ.
ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ರೈತ ಎಸ್.ಕೆ.ಸಣ್ಣ ಬೋರಯ್ಯ ಎಂಬುವವರ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸುಮಾರು 30 ಸಾವಿರ ನಷ್ಟವಾಗಿದೆ. ಇದೇ ಗ್ರಾಮದ ಕ್ಯಾತಪ್ಪ ಎಂಬುವವರ ರಿ, ಸರ್ವೇ ನಂ. 273 ರಲ್ಲಿದ್ದ ಮೆಕ್ಕೆಜೋಳ ನೀರಿನಿಂದ ಆವೃತ್ತವಾಗಿ ಸುಮಾರು 40 ಸಾವಿರ ನಷ್ಟವಾಗಿದೆ. ತಾಲೂಕಿನ ಗೋಪನಹಳ್ಳಿ ಗ್ರಾಮದ ತಿಪ್ಪೇರುದ್ರಪ್ಪನವರ ಶೇಂಗಾ ಬೆಳೆಯೂ ಸಹ ನೀರಿನಲ್ಲಿ ಕೊಚ್ಚಿಹೋಗಿ 30 ಸಾವಿರ ರು. ನಷ್ಟ ಉಂಟಾಗಿದೆ. ತಾಲೂಕಿನ ಗೋಸಿಕೆರೆ ಕಾವಲಿನ ಜಯಮ್ಮ ಎಂಬುವವರ ಜಮೀನಿನಲ್ಲಿದ್ದ ಶೇಂಗಾ ಬೆಳೆ ಹಳ್ಳಹರಿದ ಪರಿಣಾಮ ಸಂಪೂರ್ಣಬೆಳೆ ಕೊಚ್ಚಿಹೋಗಿ 50 ಸಾವಿರ ರು. ನಷ್ಟವಾಗಿದೆ.
ಮಳೆಯ ನೀರಿನಿಂದ ರಹೀಂ ನಗರ, ಅಭಿಷೇಕ್ ನಗರ, ಅಂಬೇಡ್ಕರ್, ಮದಕರಿ ನಗರದ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಖಾಸಗಿ ಬಸ್ ನಿಲ್ದಾಣ, ಎಸ್.ಆರ್.ಕಾಂಪ್ಲೆಕ್ಸ್ ಮುಂಭಾಗದಲ್ಲಿ ಭಾರಿ ಪ್ರಮಾಣದ ನೀರು ಶೇಖರಣೆಯಾಗಿದ್ದು ವಾಹನ ಸಂಚಾರಕ್ಕೆ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗಿತ್ತು, ರಾತ್ರೋರಾತ್ರಿ ಪೌರಾಯುಕ್ತ ಜಗರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕ ಗಣೇಶ್, ಮಹಾಲಿಂಗಪ್ಪ, ರುದ್ರಮುನಿ ಹಾಗೂ ಸಿಬ್ಬಂದಿ ವರ್ಗ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದರು.