ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ಅಬ್ಬರದ ಮಳೆ

KannadaprabhaNewsNetwork |  
Published : Sep 24, 2026, 02:00 AM IST
23ಜಿಡಿಜಿ10ಎಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿನ ಹಳ್ಳ. | Kannada Prabha

ಸಾರಾಂಶ

Torrential rain wreaks havoc in the district

ತಡರಾತ್ರಿಯ ಧಾರಾಕಾರ ಮಳೆಗೆ ಉಕ್ಕಿದ ಹಳ್ಳಗಳು, ನಾಗರಾಳ ಬಳಿ ನೀರಿನಲ್ಲಿ ಸಿಲುಕಿದ ಕಾರು, ಜಮೀನುಗಳಿಗೆ ನುಗ್ಗಿದ ನೀರು, ಫಲವತ್ತಾದ ಮಣ್ಣು ಕೊಚ್ಚಿಹೋಗಿ ಬೆಳೆ ಹಾನಿಕನ್ನಡಪ್ರಭ ವಾರ್ತೆ ಗದಗ

ಮಳೆಗಾಗಿ ಹಾತೊರೆದು ಕಾದಿದ್ದ ಗದಗ ಜಿಲ್ಲೆಯ ರೈತರಿಗೆ ಮಂಗಳವಾರ ತಡರಾತ್ರಿ ಹಾಗೂ ಬುಧವಾರ ನಸುಕಿನಲ್ಲಿ ಸುರಿದ ಧಾರಾಕಾರ ಮಳೆ ಒಂದೆಡೆ ನೆಮ್ಮದಿ ತಂದರೂ, ಮತ್ತೊಂದೆಡೆ ಭಾರೀ ಪ್ರಮಾಣದ ನೀರು ಹರಿದು ಹೊಸ ಸಂಕಷ್ಟವನ್ನೇ ತಂದೊಡ್ಡಿದೆ. ಗದಗ, ರೋಣ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹಳ್ಳಗಳು ಉಕ್ಕಿ ಹರಿದಿದ್ದು, ಹಲವು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.

ಗದಗ ತಾಲೂಕಿನ ನಾಗರಾಳ ಗ್ರಾಮದ ಬಳಿ ನೀರಲಗಿ ನಾಗರಾಳ ಮಧ್ಯೆ ಹರಿಯುವ ಹಳ್ಳ ಭಾರೀ ಮಳೆಯಿಂದ ಉಕ್ಕಿ ಹರಿದ ಪರಿಣಾಮ ಕಾರೊಂದು ನೀರಿನ ರಭಸಕ್ಕೆ ಸಿಲುಕಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಗದಗದಿಂದ ನಾಗರಾಳಕ್ಕೆ ತೆರಳುತ್ತಿದ್ದ ಕಾರಿನಲ್ಲಿ ಗ್ರಾಮದ ನಾಲ್ವರು ಯುವಕರಿದ್ದರು. ಹಳ್ಳ ದಾಟುವ ಸಂದರ್ಭದಲ್ಲಿ ನೀರಿನ ರಭಸ ಹೆಚ್ಚಾಗಿ ಕಾರು ನೀರಿನಲ್ಲೇ ಸಿಲುಕಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ನಾಲ್ವರು ಯುವಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ರೋಣ ತಾಲೂಕಿನ ಸವಡಿ, ಗದಗ ತಾಲೂಕಿನ ಕೋಟುಮಚಗಿ, ಕಣಗಿನಹಾಳ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಹಳ್ಳಗಳು ತುಂಬಿ ಹರಿದಿದ್ದು, ಹಳ್ಳದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಹೊಲಗಳಲ್ಲಿದ್ದ ಫಲವತ್ತಾದ ಮೇಲ್ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಬೆಳೆಗಳಿಗೂ ಹಾನಿಯಾಗಿರುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬರದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ತಂದ ಕಹಿ ಅನುಭವ:

ಇದುವರೆಗೂ ಸಮರ್ಪಕ ಮಳೆಯಿಲ್ಲದೆ ಬಿತ್ತನೆ ಮಾಡಿದ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚು ಕೂಡ ಮರಳದೆ ಸಂಕಷ್ಟದಲ್ಲಿದ್ದ ರೈತರು, ಇದೀಗ ಒಂದೇ ಬಾರಿಗೆ ಸುರಿದ ಧಾರಾಕಾರ ಮಳೆಯಿಂದ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ. ಮಳೆ ಇಲ್ಲದೆ ಬೆಳೆ ಒಣಗುವ ಆತಂಕ ಒಂದೆಡೆಯಾದರೆ, ಈಗ ಸುರಿದ ಅತಿಯಾದ ಮಳೆಯಿಂದ ಹೊಲಕ್ಕೆ ನೀರು ನುಗ್ಗಿ ಮಣ್ಣು ಮತ್ತು ಬೆಳೆ ಕೊಚ್ಚಿಹೋಗಿದೆ. ಇದರೊಟ್ಟಿಗೆ ಅಪಾರ ಪ್ರಮಾಣದ ಒಡ್ಡುಗಳು, ಬದುವುಗಳು ಒಡೆದು ಹೋಗಿದ್ದು ರೈತರಿಗೆ ಮೊತ್ತೊಂದು ಆತಂಕ ಎದುರಾಗಿದೆ.

ಬಾಕ್ಸ್

ಸೂಕ್ತ ಪರಿಹಾರಕ್ಕೆ ಒತ್ತಾಯ

ಬುಧವಾರ ಬೆಳಗ್ಗೆಯೂ ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಮುಂದುವರಿದಿದ್ದು, ಹಳ್ಳಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯ ರೋಣ, ಅಬ್ಬಿಗೇರಿ, ಕೊತಬಾಳ, ಹೊಳೆಆಲೂರು ಸೇರಿದಂತೆ ರೋಣ ಮತ್ತು ನರೇಗಲ್ಲ ಹೊಬಳಿಯಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಬುಧವಾರ ಮಧ್ಯಾಹ್ನವೇ ವ್ಯಾಪಕ ಮಳೆ ಸುರಿದಿದೆ. ಇದೇ ರೀತಿ ಒಮ್ಮೆಲೇ ಧಾರಾಕಾರ ಮಳೆ ಮುಂದುವರಿದರೆ ಇನ್ನಷ್ಟು ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು, ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಮಳೆ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

------

ಕೋಟ್ಸವಡಿ ಗ್ರಾಮದ ಸಮೀಪದಲ್ಲಿ ಹರಿಯುವ ದೇವತೆ ಹಳ್ಳಕ್ಕೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ಎಷ್ಟು ಕೆಳ ಮಟ್ಟದಲ್ಲಿ ಇದೆ ಅಂದರೆ ಅಲ್ಲಿ ನೀರು ಹರಿದು ಹೋಗಲು ಸಾಧ್ಯವಿಲ್ಲ, ಅಲ್ಲಿ ಮುಳ್ಳುಕಂಟಿಗಳು ತುಂಬಿ ಹಳ್ಳದಲ್ಲಿ ಒಮ್ಮೆಲೆ ವ್ಯಾಪಕ ನೀರು ಹರಿದು ಬಂದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಅಪಾರ ಹಾನಿ ಮಾಡಿದೆ ಕೂಡಲೇ ಈ ಕುರಿತು ಸಮೀಕ್ಷೆ ನಡೆಸಬೇಕು.ರಾಮನಗೌಡ ಅರಹುಣಸಿ, ರೋಣ ತಾಲೂಕಿನ ಸವಡಿ ಗ್ರಾಮದ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸುರಕ್ಷತೆ ಶಿಕ್ಷಕರ ಮೂಲ ಕರ್ತವ್ಯ: ಸಿದ್ರಾಮೇಶ್ವರ
ಕೊಪ್ಪಳದಲ್ಲಿ ಆಧಾರ್ ತಿದ್ದುಪಡಿಗೆ ಬೆಳಗಿನ ಜಾವವೇ ಕ್ಯೂ