ನಾಗಮಂಗಲ: ಜಿಲ್ಲೆ ಮತ್ತು ತಾಲೂಕುಗಳ ಪ್ರವಾಸೋದ್ಯಮ ಸ್ಥಳಗಳ ಸಮಗ್ರ ಮಾಹಿತಿ ಸುಲಭವಾಗಿ ದೊರಕಿಸುವ ನಿಟ್ಟಿನಲ್ಲಿ ಸಿದ್ಧ ಪಡಿಸಿರುವ ಆಪ್‌ನ್ನು ಸಾರ್ವಜನಿಕ ಸೇವೆಗೆ ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಕಂಬದಹಳ್ಳಿಯ ಪಂಚಕೂಟ ಬಸದಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತೀಯ ಪುರಾತತ್ವ ಇಲಾಖೆ, ಕೆಆರ್‌ಐಡಿಎಲ್ ಹಾಗೂ ತಾಲೂಕು ಜಾನಪದ ಪರಿಷತ್ ವತಿಯಿಂದ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಇತಿಹಾಸ ತಿಳಿದುಕೊಳ್ಳಬಹುದಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳನ್ನು ಜನರಿಗೆ ಪರಿಚಯಿಸಲು ಪ್ರವಾಸೋದ್ಯಮ ವೆಬ್‌ಸೈಟ್ ಹಾಗೂ ಆಪ್ ಉಪಯುಕ್ತವಾಗಲಿದೆ ಎಂದರು. ಪುರಾತನ ಸ್ಮಾರಕ ಮತ್ತು ದೇವಸ್ಥಾನಗಳು ನಮ್ಮ ದೇಶದ ರಾಜ ಮಹಾರಾಜರ ಇತಿಹಾಸ, ಅವರು ಬೆಳೆದುಬಂದ ಹಾದಿಯನ್ನು ತಿಳಿಸುತ್ತವೆ. ಸಾರ್ವಜನಿಕರು ಅವುಗಳನ್ನು ಸಂರಕ್ಷಿಸಿ ಜೀರ್ಣೋದ್ಧಾರಕ್ಕೆ ಪೂರ್ಣಪ್ರಮಾಣದ ಸಹಕಾರ ನೀಡಬೇಕು ಎಂದು ಹೇಳಿದರು. ಸಾಹಿತಿ ಹಾಗೂ ಇತಿಹಾಸ ತಜ್ಞ ಮಹಮ್ಮದ್ ಕಲೀಂ ಉಲ್ಲಾ ಮಾತನಾಡಿ, ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳನ್ನು ಸಂರಕ್ಷಣೆ ಮಾಡದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಲು ಯಾವುದೇ ಸ್ಮಾರಕಗಳು, ಶಿಲಾ ಶಾಸನಗಳು ದೊರೆಯುವುದಿಲ್ಲ ಎಂದರು. ತಾಲೂಕಿನ ಕಂಬದಹಳ್ಳಿಯಲ್ಲಿರುವ ಕಂಬ ಶೌರ್ಯದ ಪ್ರತೀಕ, ಕಂಬದಹಳ್ಳಿ ಬಸದಿ ಮತ್ತು ದೇವಸ್ಥಾನದ ಇತಿಹಾಸ ಕುರಿತು ಸಮಗ್ರ ಮಾಹಿತಿ ನೀಡಿದರು. ಸಮಾರಂಭದಲ್ಲಿ ಅತಿಶಯ ಶ್ರೀಕ್ಷೇತ್ರ ಕಂಬದಹಳ್ಳಿ ಜೈನವ್ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಕೆ.ರಂಗಸ್ವಾಮಿ, ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರಕುಮಾರ್, ಸಾಹಿತಿ ಪ್ರೊ.ಜಯಪ್ರಕಾಶ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅಣೆಚನ್ನಾಪುರ ಮಂಜೇಶ್ ಸೇರಿದಂತೆ ಹಲವರಿದ್ದರು.