ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು, ಟ್ರಾಫಿಕ್‌ ಜಾಮ್‌

KannadaprabhaNewsNetwork |  
Published : Jun 09, 2025, 01:12 AM IST
ಸಿಕೆಬಿ-2  ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮದ ಮದ್ಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ವಾಹನಗಳುಸಿಕೆಬಿ-3 ನಂದಿಗಿರಿಧಾಮದಲ್ಲಿ ಸೂರ್ಯೋದಯ ವೀಕ್ಷಿಸುತ್ತಿರುವ ಪ್ರವಾಸಿಗರು | Kannada Prabha

ಸಾರಾಂಶ

ನಂದಿಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ವ್ಯೆವಸ್ಥೆ ಇದ್ದು, ಪಾರ್ಕಿಂಗ್ ಲಾಟ್ ಸಹ ತುಂಬಿ ತುಳುಕುತ್ತಿದ್ದು, ವಾಹನ ಸವಾರರ ಮತ್ತು ಪ್ರವಾಸಿಗರ ನಿಯಂತ್ರಿಸಲು ನಂದಿ ಗಿರಿಧಾಮದ ಸಿಬ್ಬಂಧಿ ಹರಸಾಹಸ ಪಟ್ಟರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೆಂಗಳೂರಿಗೆ ಕೂಗಳತೆ ದೂರಲ್ಲಿರುವ ಪ್ರೇಮಿಗಳು ಸ್ವರ್ಗ ಚಿಕ್ಕಬಳ್ಳಾಪುರದ ಪ್ರಸಿದ್ಧ ನಂದಿಗಿರಿಧಾಮಕ್ಕೆ ಭಾನುವಾರ ವೀಕೆಂಡ್ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಪ್ರವಾಸಿಗರ ದಂಡೇ ಹರಿದುಬಂದಿತ್ತು. ಇದರಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸುಮಾರು ಐದಾರು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬೆಳಗ್ಗೆ ನಾಲ್ಕು ಗಂಟೆಯಿಂದ ಬೆಟ್ಟದ ಪ್ರವೇಶ ಸ್ಥಳದ ಬಳಿಯ ಚೆಕ್ ಪೋಸ್ಟ್ ಬಳಿಯಿಂದ ವಾಹನಗಳು ಬೆಟ್ಟದ ಕ್ರಾಸ್‌ ವರೆಗೂ ನಂದಿ ಗಿರಿಧಾಮದ ಸೂರ್ಯೋದಯ ನೋಡಲು ಬಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಐದು ಗಂಟೆಗೆ ಬೆಟ್ಟದ ಮೇಲಕ್ಕೆ ವಾಹನಗಳನ್ನು ಬಿಟ್ಟರೂ ಸಹಾ ನೂರಾರು ವಾಹನಗಳು ಹಾಗೇಯೇ ಸಾಲುಗಟ್ಟಿ ನಿಂತಿದ್ದವು. ಸಂಚಾರ ದಟ್ಟಣೆ ನಂದಿಗಿರಿಧಾಮ ಪೊಲೀಸರರು ಹೈರಾಣರಾಗಿದ್ದರು.

ವಾಹನ ಪಾರ್ಕ್‌ಗೆ ಮಿತಿ

ನಂದಿಗಿರಿಧಾಮದ ಮೇಲೆ 300 ಕಾರ್‌ಗಳಿಗೆ ಮತ್ತು ಸುಮಾರು ಆರು ನೂರು ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ವ್ಯೆವಸ್ಥೆ ಇದ್ದು, ಪಾರ್ಕಿಂಗ್ ಲಾಟ್ ಸಹ ತುಂಬಿ ತುಳುಕುತ್ತಿದ್ದು, ವಾಹನ ಸವಾರರ ಮತ್ತು ಪ್ರವಾಸಿಗರ ನಿಯಂತ್ರಿಸಲು ನಂದಿ ಗಿರಿಧಾಮದ ಸಿಬ್ಬಂಧಿ ಹರಸಾಹಸ ಪಟ್ಟರು.

ಟ್ರಾಫಿಕ್‌ ಜಾಮ್‌: ಪ್ರಯಾಣಿಕರ ಸಂಕಷ್ಟ

ಭಾನುವಾರವಾದ್ದರಿಂದ ರಜೆ ಕಳೆಯಲು ಬೆಳಗ್ಗೆ ನಾಲ್ಕುವರೆಗೆ ನಂದಿ ಗಿರಿಧಾಮಕ್ಕೆ ಕಾರಿನಲ್ಲಿ ಬಂದೆವು. ಆದರೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಕೊಂಡಿದ್ದೇವೆ. ನಡೆದು ಕೊಂಡೆ ಹೋಗೋಣಾ ಎಂದು ಎರಡು ಕಿಲೋ ಮೀಟರ್ ನಡೆದು ಬಂದವು ಸುಸ್ತಾಗುತ್ತಿದೆ. ಪೋಲಿಸರು ಆಟೋಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಆಟೋದಲ್ಲಿ ಹೋಗೋಣವೆಂದರೆ ಎರಡು ಕಿ.ಮೀಗೆ 300 ರುಪಾಯಿ ಕೇಳುತ್ತಿದ್ದಾರೆ. ನಮ್ಮ ಕಾರುಗಳಿಗೆ ಏಕೆ ಬಿಡುತ್ತಿಲ್ಲಾ ಎಂದು ಬೆಂಗಳೂರಿನ ಟೆಕ್ಕಿ ಹರಿದಾಸ್ ತಮ್ಮ ಅಸಮಾಧಾನ ಹೊರಹಾಕಿದರು.

ಬೆಳಗ್ಗೆ ಐದು ಗಂಟೆಗೆ ನಂದಿ ಗಿರಿದಾಮಕ್ಕೆ ಬಂದೆವು. ಆದರೆ ಇಲ್ಲಿ ಟ್ರಾಫಿಕ್ ಜಾಮ್‌. ವಾಪಸ್‌ ಹೋಗೋಣವೆಂದರೆ ಹಿಂದೆಯೂ ಹನುಮಂತನ ಬಾಲದಂತೆ ವಾಹನಗಳು ಸಾಲುಗಟ್ಟಿ ನಿಂತಿವೆ. ಮೊದಲೆಲ್ಲಾ ನಂದಿ ಬೆಟ್ಟದ ಪ್ರವೇಶದಲ್ಲೇ ಪೋಲಿಸರು ಸೀಮಿತ ವಾಹನಗಳನ್ನು ಮಾತ್ರ ಕಳುಹಿಸಿ ಅವು ವಾಪಸ್‌ ಬಂದಂತೆ ಬೇರೆ ವಾಹನ ಕಳುಹಿಸುತ್ತಿದ್ದರು. ಇಂದು ಇಲ್ಲಿ ಪೋಲಿಸರು ಇರಲಿಲ್ಲ ಎಂದು ಪ್ರವಾಸಿಗ ವೈಷ್ಣವ್ ಕಾರಂತ್ ತಿಳಿಸಿದರು.

ಹಳದಿ ಬೋರ್ಡ್‌ ವಾಹನಕ್ಕೆ ಅಡ್ಡಿ ಇಲ್ಲ

ಹಳದಿ ಬೋರ್ಡ್‌ ವಾಹನಗಳು ಬೆಟ್ಟಕ್ಕೆ ತೆರಳಲು ಬಿಡಲಾಗುತ್ತಿದೆ. ಆದರೆ ವೈಟ್ ಬೋರ್ಡ್‌ನವರಿಗೆ ಏಕೆ ಬಿಡುತ್ತಿಲ್ಲಾ, ನಾವೇನು ಎಂಟ್ರೀ ಫೀ ಹಣ ನೀಡುವುದಿಲ್ಲವೇ. ಪೋಲಿಸರು ಏಕೆ ಈ ತಾರತಮ್ಯ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಪ್ರವಾಸಿ ಪ್ರಶ್ನಿಸಿದರು.

ಹೆಚ್ಚಿನ ವಾಹನಗಳು ವೀಕೆಂಡ್‌ನಲ್ಲಿ ಬರುತ್ತವೆ ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂದು ತಿಳಿದಿದ್ದರೂ ನಿಯಂತ್ರಿಸದ ಪೊಲೀಸರಿಂದ ಸುಮಾರು ನಾಲ್ಕೈದು ಗಂಟೆಗಳು ವಾಹನಗಳು ನಿಂತಲ್ಲೇ ನಿಂತವು. ಇದಕ್ಕೆಲ್ಲ ಪೊಲೀಸರೇ ಕಾರಣವೆಂದು ಪ್ರವಾಸಿಗರು ದೂಷಿಸಿದರು.

ಬೇರೆ ರಾಜ್ಯದಿಂದ ಬಂದವರ ಗೋಳು

ವೀಕೆಂಡ್ ಹಿನ್ನೆಲೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಇದರಿಂದ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ವಾಪಸ್‌ ತೆರಳಲೂ ಮನಸ್ಸು ಬರುತ್ತಿಲ್ಲ. ಒಂದು ಕಪ್‌ ಕಾಫೀ, ಟೀ ಕುಡಿಯೋಣ ಅಥವಾ ಏನಾದರು ಸ್ನಾಕ್ಸ್ ತಿನ್ನೋಣ ಎಂದರೆ ಏನೂ ಸಿಗುತ್ತಿಲ್ಲಿ ಎಂದು ಬೇರೆ ರಾಜ್ಯಗಳಿಂದ ಆಗಮಿಸಿದ್ದ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ