ಸಾಲುಸಾಲು ರಜೆ, ನವ ವರ್ಷದ ಹೊಸತನದ ಸಂಭ್ರಮ : ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಪ್ರವಾಸಿಗರ ದಂಡು

KannadaprabhaNewsNetwork | Updated : Dec 29 2024, 05:16 AM IST

ಸಾರಾಂಶ

ಸಾಲುಸಾಲು ರಜೆ, ನವ ವರ್ಷದ ಹೊಸತನದ ಸಂಭ್ರಮ, ಆದಿಲಶಾಹಿಗಳ ನಾಡು ವಿಜಯಪುರಕ್ಕೆ ಕಳೆ ಬಂದಿದೆ. ಇಲ್ಲಿಯ ಐತಿಹಾಸಿಕ ಕಟ್ಟಡಗಳನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ಶಶಿಕಾಂತ ಮೆಂಡೆಗಾರ

 ವಿಜಯಪುರ : ಸಾಲುಸಾಲು ರಜೆ, ನವ ವರ್ಷದ ಹೊಸತನದ ಸಂಭ್ರಮ, ಆದಿಲಶಾಹಿಗಳ ನಾಡು ವಿಜಯಪುರಕ್ಕೆ ಕಳೆ ಬಂದಿದೆ. ಇಲ್ಲಿಯ ಐತಿಹಾಸಿಕ ಕಟ್ಟಡಗಳನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. 

ಶಾಲಾ ಮಕ್ಕಳ ಪ್ರವಾಸ, ಚಳಿ ಕಡಿಮೆ ಈಗ ಟೂರ್‌ ಮಾಡಲು ವಿಜಯಪುರ ಹೇಳಿ ಮಾಡಿಸಿದ ತಾಣವಾದಂತಿದೆ. 2024 ಅಂತ್ಯ ಹಾಗೂ 2025 ಆರಂಭ ಹೀಗೆ ವಿವಿಧ ಕಾರಣಗಳಿಗೆ ಐತಿಹಾಸಿಕ ನಗರಿ ವಿಜಯಪುರ ಪ್ರವಾಸಿಗರನ್ನು ಕರೆಯುತ್ತಿದೆ. ಸಾಮಾನ್ಯ ದಿನಗಳಿಗಿಂತ ಈ ದಿನಗಳಲ್ಲಿ ನಾಲ್ಕರಿಂದ ಐದುಪಟ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದೂ ಸಹ ಪಾರಂಪರಿಕ ತಾಣಗಳಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಹಲವು ತಾಣಗಳು ಹೆಚ್ಚು ಪ್ರವಾಸಿಗರಿಂದ ಕೂಡಿದ್ದವು.

ವಿಶ್ವದ ಏಳು ಅದ್ಭುತಗಳಲ್ಲೊಂದಾದ ವಿಶ್ವವಿಖ್ಯಾತ ಗೋಳಗುಮ್ಮಟಕ್ಕೆ ಇದೀಗ ಕಳೆ ಬಂದಿದೆ. 400 ವರ್ಷಗಳ ಬಳಿಕ ಸೊಲಾರ್ ಲೈಟಿಂಗ್ ವ್ಯವಸ್ಥೆ ಆರಂಭಿಸಲಾಗಿದ್ದು, ಈ ಬಾರಿ ಸಂಜೆಯ ವೇಳೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಝಗಮಗಿಸುವ ಬೆಳಕಿನ ಚಿತ್ತಾರದಲ್ಲಿ ಗೋಳಗುಮ್ಮಟ ನೋಡುವ ಸದಾವಕಾಶ ಒದಗಿ ಬಂದಿದೆ. ಇದರೊಟ್ಟಿಗೆ ಡಿಸೆಂಬರ್, ಜನೇವರಿಯಲ್ಲಿ ಶಾಲಾ ಮಕ್ಕಳು ಪ್ರವಾಸಕ್ಕೆ ಹೆಚ್ಚಾಗಿ ಬರುವುದರಿಂದ ಆವರಣದಲ್ಲಿ ಜನವೋ ಜನ ಎಂಬಂತಿದ್ದು, ಪ್ರವಾಸಿಗರಿಂದ ಗೋಳಗುಮ್ಮಟ ತುಂಬಿ ತುಳುಕುತ್ತಿದೆ.

ನಾಲ್ಕು ಪಟ್ಟು ಹೆಚ್ಚಳ:

ವರ್ಷದ ಎಲ್ಲಾ ತಿಂಗಳುಗಳನ್ನು ಕೌಂಟ್ ಮಾಡಿದರೆ ಸರಾಸರಿ 1500ರಿಂದ 2 ಸಾವಿರ ವರೆಗೆ ಮಾತ್ರ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಬ್ರಾಹಿಂ ರೋಜಾಗೆ 300ರಿಂದ 500 ಜನರು ಬರುತ್ತಾರೆ. ಆದರೆ, ಡಿಸೆಂಬರ್ ಹಾಗೂ ಜನೇವರಿ ತಿಂಗಗಳಲ್ಲಿ ಈ ಪ್ರವಾಸಿಗರ ಸಂಖ್ಯೆ 5 ರಿಂದ 6 ಸಾವಿರಕ್ಕೆ ಏರುತ್ತದೆ. ವರ್ಷಾಂತ್ಯ ಹಾಗೂ ರಜೆಗಳಿಂದ ಶನಿವಾರ ವಿಶ್ವವಿಖ್ಯಾತ ಗೊಳಗುಮ್ಮಟಕ್ಕೆ 5 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ. ಕಪ್ಪು ತಾಜಮಹಲ್ ಎನಿಸಿಕೊಂಡಿರುವ ಇಬ್ರಾಹಿಂ ರೋಜಾವನ್ನು ಒಂದೂವರೆ ಸಾವಿರ ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ.

14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತ

ಪ್ರವಾಸಿಗರ ಮಧ್ಯ 14 ವರ್ಷದೊಳಗಿನ ವಿದ್ಯಾರ್ಥಿಗಳು ಇದೀಗ ಗೋಳಗುಮ್ಮಟವನ್ನು ಫ್ರೀಯಾಗಿ ನೋಡಬಹುದು. ಪ್ರವಾಸೋದ್ಯಮ ಇಲಾಖೆ ವಿದ್ಯಾರ್ಥಿಗಳಿಗೆ ಇಂತಹದ್ದೊಂದು ಅವಕಾಶ ನೀಡಿದೆ. ವಿಶೇಷವೆಂದರೆ ಈ ಸಮಯದಲ್ಲಿ ಸರ್ಕಾರಿ ಶಾಲೆಗಳು ಸೇರಿದಂತೆ ಎಲ್ಲ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಆಗಮಿಸುತ್ತಾರೆ. ಹಾಗಾಗಿ ಈ ಎರಡು ತಿಂಗಳು 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಐತಿಹಾಸಿಕ ಕಟ್ಟಡವನ್ನು ಕಣ್ತುಂಬಿಕೊಳ್ಳವು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಶನಿವಾರಿ ಟಿಕೆಟ್ ಪಡೆದು ವೀಕ್ಷಿಸಿದವರ ಸಂಖ್ಯೆ 5 ಸಾವಿರ ಇದ್ದರೆ, 5 ಸಾವಿರಕ್ಕೂ ಅಧಿಕ 14 ವರ್ಷದೊಳಗಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ.ಸೋಲಾರ್ ದೀಪದ ವ್ಯವಸ್ಥೆ

ಆದಿಲ್‌ಶಾಹಿಗಳ ಕಾಲದಲ್ಲಿ 16 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಬೃಹತ್‌ ಕಟ್ಟಡಗಳಿಗೆ 400 ವರ್ಷಗಳ ಬಳಿಕ ಇದೀಗ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೇದ ವಾರ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಲೋಕಾರ್ಪಣೆಗೊಳಿಸಿದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಿನ್ಯೂ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಸಹಯೋಗದಲ್ಲಿ ಗೋಳಗುಮ್ಮಟ ಸ್ಮಾರಕಕ್ಕೆ ಸೌರಶಕ್ತಿ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಲೈಟಿಂಗ್ ವ್ಯವಸ್ಥೆಯಿರುವುದರಿಂದ ಸಂಜೆಯ ವೇಳೆಗೆ ಬರುವ ಪ್ರವಾಸಿಗರಿಗೆ ಝಗಮಗಿಸುವ ಬೆಳಕಿನಲ್ಲಿ ಗೋಳಗುಮ್ಮಟ ವೀಕ್ಷಣೆಯ ಇನ್ನಷ್ಟು ಸುಂದರವಾಗಿರಲಿದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಗೋಳಗುಮ್ಮಟ ವೀಕ್ಷಣೆಗೆ ಅವಕಾಶವಿದೆ. ಆದರೆ ರಾತ್ರಿ ವೇಳೆಯಲ್ಲಿ ಮುಖ್ಯ ರಸ್ತೆಯಿಂದಲೇ ಬೆಳಕಿನ ಚಿತ್ತಾರವನ್ನು ಕಾಣಬಹುದಾಗಿದೆ.

ಕೋಟ್ಡಿಸೆಂಬರ್ ಹಾಗೂ ಜನೇವರಿಯಲ್ಲಿ ಪ್ರವಾಸಿಗರು ಹೆಚ್ಚಿರುತ್ತಾರೆ. ಈ ಬಾರಿ ಚಳಿಯೂ ಕಡಿಮೆ ಇರುವುದರಿಂದ ಶಿಕ್ಷಣ ಸಂಸ್ಥೆಗಳು ತಮ್ಮ ತಮ್ಮ ಶಾಲಾ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರುತ್ತಿದ್ದಾರೆ. ಹೀಗಾಗಿ ಇಂದು 5 ಸಾವಿರ ಜನರು ಟಿಕೆಟ್ ಪಡೆದು ಹಾಗೂ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತವಾಗಿ ಗೋಳಗುಮ್ಮಟ ವೀಕ್ಷಣೆ ಮಾಡಿದ್ದಾರೆ. ವಿದೇಶಿಗರ ಭೇಟಿ ಕಡಿಮೆಯಾಗಿದ್ದು, ಇಂದು ಮೂವರು ವಿದೇಶಿಗರು ಮಾತ್ರ ಗೋಳಗುಮ್ಮಟಕ್ಕೆ ಭೇಟಿ ನೀಡಿದ್ದಾರೆ.

ವಿಜಯಕುಮಾರ.ಎಂ.ವಿ, ಪುರಾತತ್ವ ಸ್ಮಾರಕಗಳ ಸಂರಕ್ಷಣಾಧಿಕಾರಿ.ಕೋಟ್‌

ನಾವು ಇಂದು ಬೆಂಗಳೂರಿನಿಂದ ವಿಜಯಪುರಕ್ಕೆ ಪ್ರವಾಸಕ್ಕೆ ಬಂದು ಸ್ಮಾರಕಗಳಿಗೆ ಭೇಟಿ ನೀಡಿದ್ದೇವೆ. ಇಲ್ಲಿನ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್‌, ಶಿವಗಿರಿ ಸೇರಿದಂತೆ ಹಲವಾರು ಐತಿಹಾಸಿಕ ತಾಣಗಳನ್ನು ನೋಡಿದೆವು. ಇಂತಹ ಅದ್ಭುತ ಪ್ರವಾಸಿ ತಾಣಗಳನ್ನು ನೋಡಿ ನಮಗೆಲ್ಲ ಹೆಚ್ಚಿನ ಖುಷಿಯಾಗಿದೆ.

ರೇಷ್ಮಾ.ಎಂ.ಎನ್, ಪ್ರವಾಸಿಗರುಶಶಿಕಾಂತ ಮೆಂಡೆಗಾರ

Share this article