ಕನ್ನಡಪ್ರಭ ವಾರ್ತೆ ಯಳಂದೂರು
ಪಟ್ಟಣ ಪಂಚಾಯಿತಿಯ ೫ನೇ ವಾರ್ಡಿಗೆ ನ.೨೩ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದ ಸೋಮವಾರ ಇಬ್ಬರು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ.ಪಪಂ ಹಿರಿಯ ಕಾಂಗ್ರೆಸ್ ಪಕ್ಷದ ಸದಸ್ಯ ಕೆ.ಮಲ್ಲಯ್ಯ ಫೆ.೨೫ ರಂದು ನಿಧನರಾಗದ್ದರು. ಈ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇಲ್ಲಿಗೆ ನೂತನ ಸದಸ್ಯರ ಆಯ್ಕೆಗೆ ರಾಜ್ಯ ಚುನಾವಣಾ ಆಯೋಗವು ನ.೨೩ರಂದು ಇಲ್ಲಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿತ್ತು.ನ.೦೪ರಿಂದಲೇ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇತ್ತಾದರೂ ಅಂತಿಮ ದಿನವಾದ ನ.೧೧ರ ಸೋಮವಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಕೆ.ಮಲ್ಲಯ್ಯ ಅವರ ಮಗ ಶಶಿಧರ್ ಹಾಗೂ ಭಾರತೀಯ ಜನತಾ ಪಾರ್ಟಿಯಿಂದ ಮಹದೇವ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಪರಿಶೀಲನೆಯು ನ.೧೨ ರಂದು ನಡೆಯಲಿದ್ದು ನ.೧೪ ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನವಾಗಿದೆ. ನ.೨೩ರಂದು ಚುನಾವಣೆ ನಡೆಯಲಿದ್ದು ನ.೨೬ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ನಂಜುಂಡಯ್ಯ ಮಾಹಿತಿ ನೀಡಿದರು.ನೇರ ಹಣಾಹಣಿ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಮಾತ್ರ ಇಬ್ಬರೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯೆತಗಳಿವೆ. ಕೇವಲ ಇನ್ನು ಒಂದು ವರ್ಷದ ಅವಧಿಗೆ ಮಾತ್ರ ಈ ಚುನಾವಣೆ ನಡೆಯುತ್ತಿರುವುದರಿಂದ ಬೇರ್‍ಯಾರು ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ. ಈ ಹಿಂದೆ ಇದ್ದ ೫ನೇ ವಾರ್ಡಿನ ಅಭ್ಯರ್ಥಿ ಕಾಂಗ್ರೆಸ್ ಪಕ್ಷದವರೇ ಆಗಿದ್ದು ಪಕ್ಷ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಲು ಮುಂದಾಗಿದೆ.ನಮ್ಮ ಪಕ್ಷದ ಅಭ್ಯರ್ಥಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬೆಂಬಲ, ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಜನಪ್ರತ್ರಿನಿಧಿಗಳ ಬೆಂಬಲ ನಮಗೆ ಸಿಗುವುದರಿಂದ ನಾವೇ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ವಿಶ್ವಾಸ ವ್ಯಕ್ತಪಡಿಸಿದರು.ಇತ್ತ ಬಿಜೆಪಿಯ ಅಭ್ಯರ್ಥಿ ಮಹದೇವ ಕಳೆದ ಬಾರಿಯೂ ಈ ವಾರ್ಡಿನಲ್ಲಿ ಸ್ಪರ್ಧೆ ನಡೆಸಿ ಸೋತಿದ್ದರು. ಆದರೆ ಈ ಬಾರಿ ಇಲ್ಲಿ ಗೆಲುವು ನನ್ನದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಮಂಜು, ಮಹದೇವನಾಯಕ, ರವಿ, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ, ಮಾಜಿ ಸದಸ್ಯ ಜೆ. ಶ್ರೀನಿವಾಸ್, ವೈ.ವಿ.ಉಮಾಶಂಕರ, ಮುಖಂಡರಾದ ಮೂರ್ತಿ, ನಂಜುಂಡಯ್ಯ ಬಿಜೆಪಿ ಪಕ್ಷದ ಮುಖಂಡರಾದ ಭೀಮಪ್ಪ, ಪರಮೇಶ ಸೇರಿದಂತೆ ಅನೇಕರು ಇದ್ದರು.