ಹತ್ತು ದಿನದಿಂದ ಕರ್ತವ್ಯಕ್ಕೆ ಹಾಜರಾಗದೆ ಗೈರು । ಅಧಿಕಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ । ಅಧಿಕಾರಿ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಹನೂರುಪಟ್ಟಣದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್ ಕಳೆದ ಹತ್ತು ದಿನಗಳಿಂದ ಕಚೇರಿಗೆ ಆಗಮಿಸದೆ ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಕಳೆದ ಸೋಮವಾರದಿಂದ ಮುಖ್ಯಾಧಿಕಾರಿ ಅಶೋಕ್ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸದೆ ಕಾಲ ಹರಣ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿ ಸಾರ್ವಜನಿಕರು ಪಾವತಿ ಮಾಡುವ ತೆರಿಗೆ ಹಣದಿಂದ ಸಂಬಳ ಮಾಡಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಸಹ ಸುಮಾರು ಹತ್ತು ದಿನ ಗೈರು ಹಾಜರಾಗಿದ್ದರು. ಇದೀಗ ಡಿ.1ರಿಂದ ಕಚೇರಿಗೆ ಆಗಮಿಸದೆ ಇರುವುದಕ್ಕೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಇನ್ನು ಅನಾರೋಗ್ಯ ಸಂಬಂಧ ಕೇವಲ ಒಂದು ದಿನ ರಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.ಕಾಟಾಚಾರಕ್ಕೆ ಅಧ್ಯಕ್ಷರ ಜತೆ ಭೇಟಿ:
ಕಾವೇರಿ ಕುಡಿಯುವ ನೀರಿನ ಸಮಸ್ಯೆ ಹಲವಾರು ತಿಂಗಳಿಂದಲೂ ಇದೆ. ಆದರೆ ಇದೀಗ ಹರಳೆ ಪಂಪ್‌ಹೌಸ್‌ನಲ್ಲಿ ಮೋಟಾರ್ ದುರಸ್ತಿಯಾಗಿರುವುದರಿಂದ ಅಧ್ಯಕ್ಷರು ಹಾಗೂ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಫೋಟೋ ಹಾಕಿಕೊಂಡಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ, ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಗಮನಕೊಡದ ಮುಖ್ಯಾಧಿಕಾರಿ ಏಕಾಏಕಿ ಹರಳೆ ಪಂಪ್‌ಹೌಸ್‌ಗೆ ಭೇಟಿ ನೀಡುತ್ತಿರುವ ಉದ್ದೇಶ ಏನು?. ಜನಪರ ಕಾಳಜಿ ಇದ್ದರೆ ಕಳೆದ ಎರಡು ತಿಂಗಳ ಹಿಂದೆಯೇ ಕಾವೇರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದಾಗಿತ್ತು. ಲಕ್ಷ ಲಕ್ಷ ಹಣ ಪಡೆದುಕೊಂಡು ಖಾತೆ ಮಾಡುತ್ತಿರುವುದೇ ಇವರ ಮಹಾನ್ ಸಾಧನೆಯಾಗಿದೆ ಎಂದು ಪಟ್ಟಣದ ನಾಗರಿಕರು ದೂರಿದ್ದಾರೆ.ಪಟ್ಟಣ ಪಂಚಾಯಿತಿಯಲ್ಲಿ ದುಡ್ಡಿದ್ದರಷ್ಟೇ ಖಾತೆ:
ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಡವರ ಸಮಸ್ಯೆಗಳು ಒಂದು ಸಹ ಪರಿಹಾರವಾಗುತ್ತಿಲ್ಲ, ಈ ಸ್ವತ್ತು ಖಾತಾ ಬದಲಾವಣೆಗೆ ಬರುವ ಸಾರ್ವಜನಿಕರಿಗೆ ಅನ್ಯ ಖಾತೆ ಮಂಜೂರು ಪ್ರತಿ ಹಾಗೂ ನಕ್ಷೆ ಹಾಜರುಪಡಿಸುವಂತೆ ಬರೆಯುವುದು, ಆನಂತರ ಮಹಿಳಾ ಸದಸ್ಯೆಯ ಪತಿಯ ಮೂಲಕ ಒಪ್ಪಂದ ಮಾಡಿಕೊಂಡು ಒಂದು ಖಾತೆಗೆ ಇಂತಿಷ್ಟು ಹಣ ಪಡೆದುಕೊಂಡು ಇಬ್ಬರು ಹಣ ಮಾಡಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಈ ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ವ್ಯಕ್ತವಾಗಿದೆ.ಈ ಸ್ವತ್ತಿನಲ್ಲಾಗುವ ಸಮಸ್ಯೆಯ ತಿದ್ದುಪಡಿ, ಕಟ್ಟಡ ಪರವಾನಿಗೆ ಬೇಕೆಂದರೆ ಇವರಿಗೆ ಲಕ್ಷ ಲಕ್ಷ ಹಣ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಹನೂರು ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿದರೆ ಮುಖ್ಯಾಧಿಕಾರಿಯ ಭ್ರಷ್ಟಾಚಾರದ ಇನ್ನೊಂದು ಕರಾಳ ಮುಖ ಅನಾವರಣವಾಗಲಿದೆ ಎಂದು ಹೇಳಲಾಗಿದೆ.
ಪಟ್ಟಣ ಪಂಚಾಯಿತಿಯ ಮಹಿಳಾ ಸದಸ್ಯೆಯ ಪತಿಯನ್ನೇ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ ಮಧ್ಯವರ್ತಿಯನ್ನಾಗಿ ನೇಮಿಸಿಕೊಂಡು ಸಾರ್ವಜನಿಕರಿಂದ ಹಣ ಪಡೆಯುತ್ತಿರುವ ದೃಶ್ಯ ಪಟ್ಟಣ ಪಂಚಾಯಿತಿಯಲ್ಲಿನ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ. ತಾಲೂಕು ಕೇಂದ್ರದಲ್ಲಿ ಪಟ್ಟಣ ಪಂಚಾಯಿತಿ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯ ಹಲವಾರು ತಿಂಗಳಿನಿಂದ ಮುಚ್ಚಿದ್ದರೂ ಇದರ ಬಗ್ಗೆ ಕ್ರಮವಹಿಸದೆ ಬೇಜವಾಬ್ದಾರಿ ವಹಿಸಿರುವ ಅಧಿಕಾರಿ ಪಟ್ಟಣ ಪಂಚಾಯಿತಿಯ ಹದಿಮೂರು ವಾರ್ಡುಗಳಲ್ಲಿ ಇನ್ನೇನು ಅಭಿವೃದ್ಧಿ ಮಾಡಲು ಸಾಧ್ಯ ಎಂದು ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ.ಕಳೆದ ಒಂದು ವಾರದಿಂದ ಮುಖ್ಯಾಧಿಕಾರಿ ಹಣ ಪಡೆದುಕೊಂಡಿರುವವರಿಗೆ ಎಲ್ಲೆಂದರಲ್ಲಿ ಕುಳಿತು ಓಟಿಪಿ ನೀಡುವುದರ ಮೂಲಕ ಇ-ಸ್ವತ್ತು ನೀಡುತ್ತಿದ್ದಾರೆ. ಆದರೆ ಪ್ರತಿನಿತ್ಯ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಆಗಮಿಸುವ ಬಡವರು ತಮ್ಮ ಕೂಲಿ ಕೆಲಸವನ್ನು ಬಿಟ್ಟು ಪಟ್ಟಣ ಪಂಚಾಯಿತಿ ಕಚೇರಿಯನ್ನು ಕಾಯುವುದು ಮಾಮೂಲಿಯಾಗಿದೆ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಇಂತಹ ಭ್ರಷ್ಟ ಅಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ಪಟ್ಟಣ ಪಂಚಾಯಿತಿಗೆ ಸೂಕ್ತ ಅಧಿಕಾರಿಯನ್ನು ನೇಮಕ ಮಾಡುವಂತೆ ಹನೂರು ಪಟ್ಟಣದ ಸಮಗ್ರ ನಾಗರಿಕರು ಸಹ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಮನವಿ ಮಾಡಿದ್ದಾರೆ.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕಳೆದ ಹತ್ತು ದಿನಗಳಿಂದ ಕಚೇರಿಗೆ ಬರದೆ ಸಾರ್ವಜನಿಕ ಕೆಲಸ ಕಾರ್ಯಗಳ ಜತೆ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಹಿನ್ನಡೆಯಾಗಿದೆ. ನಾಗರಿಕರು ನಿತ್ಯ ಕೆಲಸ ಕಾರ್ಯಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಬಸವರಾಜ್, ನಾಮನಿರ್ದೇಶಿತ ಸದಸ್ಯ, ಹನೂರು ಪಟ್ಟಣ ಪಂಚಾಯಿತಿ.