ಕನ್ನಡಪ್ರಭ ವಾರ್ತೆ ಆಲೂರು
ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಹಳೆ ಸಂತೆ ಬೀದಿಯಲ್ಲಿ ಗುಂಡಿ ಬಿದ್ದ ರಸ್ತೆಗೆ ಗುಡ್ಡದಂತೆ ಕಲ್ಲು, ಮಣ್ಣು, ಇಟ್ಟಿಗೆಯನ್ನು ಬೇಕಾಬಿಟ್ಟಿಯಾಗಿ ಸುರಿದಿರುವುದೇ ಸಾಕ್ಷಿಯಾಗಿದೆ.ಪಟ್ಟಣದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಹಳೆ ಸಂತೆ ಬಿದ್ದಿ ರಸ್ತೆ ಕೂಡ ಒಂದಾಗಿದೆ,ಕಳೆದ ಹಲವು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ವಾಹನಗಳ ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂಬಂಧವಾಗಿ ಹಲವು ಬಾರಿ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನ ಆಗಿಲ್ಲ. ಈ ರಸ್ತೆಯ ಬದಿಯಲ್ಲಿ ನೀರಿನ ಟ್ಯಾಂಕ್ ಇದ್ದು ರಸ್ತೆಗೆ ಹೊಂದಿಕೊಂಡಂತ್ತೆಯೆ ನೀರನ್ನು ವಿವಿಧಡೆಗಳಿಗೆ ಸರಬರಾಜು ಮಾಡುವ ವಾಲ್ವನ್ನು ಅನ್ನು ಇಲ್ಲಿ ಅಳವಡಿಸಲಾಗಿದೆ. ಈ ವಾಲ್ವಿನ ಗುಂಡಿಯಲ್ಲಿ ಕಲುಷಿತ ನೀರು ಹಾಗೂ ತ್ಯಾಜ್ಯಗಳು ಸಂಗ್ರಹವಾಗುತ್ತಿದ್ದು, ಇದನ್ನು ಸ್ವಚ್ಛಗೊಳಿಸದ ಕಾರಣ ಕುಡಿಯುವ ನೀರಿನೊಟ್ಟಿಗೆ ಮಲಿನವಾದ ನೀರು ಸಹ ನಾಗರಿಕರ ಮನೆಗಳಿಗೆ ಸರಬರಾಜಾಗುತ್ತಿದೆ.
ರಸ್ತೆಯ ಗುಂಡಿ ಮುಚ್ಚಲು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬದಲು ಪಟ್ಟಣ ಪಂಚಾಯಿತಿಯವರು ರಸ್ತೆಯ ಮಧ್ಯದಲ್ಲಿರುವ ಗುಂಡಿಯಲ್ಲಿ ಗುಡ್ಡದಂತೆ ಕಲ್ಲು ಮಣ್ಣುಗಳನ್ನು ತಂದು ಸುರಿದಿದ್ದಾರೆ. ರಸ್ತೆಯಲ್ಲಿ ಗುಂಡಿಗಳು ಬಿದ್ದರೆ ಯಾವ ರೀತಿಯ ಸುಲಭ ಮಾರ್ಗದಲ್ಲಿ ಮುಚ್ಚಬಹುದು ಎಂಬುದನ್ನು ರಾಜ್ಯಕ್ಕೆ ಆಲೂರು ಪಟ್ಟಣ ಪಂಚಾಯಿತಿಯವರು ತೋರಿಸಿಕೊಟ್ಟಿದ್ದಾರೆ. ಈ ರೀತಿ ರಸ್ತೆಗೆ ಅಡ್ಡಲಾಗಿ ಕಲ್ಲು ಮಣ್ಣುಗಳನ್ನು ಸುರಿದರೆ ರಸ್ತೆಯ ಗುಂಡಿ ಮುಚ್ಚಿದಂತಾಗುತ್ತದೆ ಎಂಬುದನ್ನು ಯಾವ ಎಂಜಿನಿಯರ್ ಹೇಳಿಕೊಟ್ಟಿದ್ದಾರೆ ಎಂಬುದು ತಿಳಿಯದಾಗಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದೆ ಹೋದರೆ ಇವರು ಇನ್ಯಾವ ಮಟ್ಟಕ್ಕೆ ಹೋಗುತ್ತಾರೆ ಎಂಬುದು ತಿಳಿಯದಾಗಿದೆ.ಶಾಸಕರು ಶೀಘ್ರ ಇತ್ತ ಗಮನಹರಿಸಿ ಇಂತಹ ಅಧಿಕಾರಿಗಳು ರಸ್ತೆಯ ಗುಂಡಿಗಳನ್ನು ಮುಚ್ಚಲು ದೊಡ್ಡ ದೊಡ್ಡ ಬಂಡೆಗಳನ್ನು ತಂದು ಹಾಕುವ ಮೊದಲು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಪಟ್ಟಣದ ಹಲವಾರು ವಾರ್ಡ್ಗಳಲ್ಲಿ ಜೆಜೆಎಂ ವತಿಯಿಂದ ಕುಡಿಯುವ ನೀರಿನ ಸರಬರಾಜಿನ ಪೈಪ್‌ಗಳನ್ನು ಅಳವಡಿಸಲು ರಸ್ತೆಗಳನ್ನು ಸಂಪೂರ್ಣ ಹಾಳು ಮಾಡಿದ್ದು, ಇಲ್ಲಿ ಕಲ್ಲು ಮಣ್ಣುಗಳು ಹಾಗೂ ಧೂಳಿನಿಂದಾಗಿ ರಸ್ತೆ ಅಕ್ಕಪಕ್ಕದ ಮನೆಯವರು ತೀವ್ರ ತೊಂದರೆ ಅನುಭವಿಸುತ್ತಿದೆ. ಇದರಿಂದಾಗಿ ಈಗಾಗಲೇ ಹಲವಾರು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.ರಸ್ತೆಗಳನ್ನು ಮನಸೋ ಇಚ್ಛೆ ಅಗೆದಿರುವ ಜಲಜೀವನ್ ಮಿಷನ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಳುಗೆಡವಿರುವ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಕ್ರಮಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಸವಿತಾ ಸಮಾಜದ ಮುಖಂಡ ನಾರಾಯಣ ಯಡೂರು ಮಾತನಾಡಿ, ಪಟ್ಟಣದಲ್ಲಿ ರಸ್ತೆಗಳು ಗುಂಡಿಮಯವಾಗಿದ್ದು ರಸ್ತೆಗಳನ್ನು ಶೀಘ್ರ ಡಾಂಬರೀಕರಣ ಮಾಡಬೇಕು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಹಂಪ್ಸ್‌ಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಅಳವಡಿಸಿದ ಕಾರಣ ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ. ಕಿರಿದಾದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಾಲಾ ಕಾಲೇಜುಗಳು ಬಿಟ್ಟ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಈ ಸಂದರ್ಭದಲ್ಲಿ ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆಯಾಗುತ್ತಾರೆ, ಸಂಬಂಧಪಟ್ಟವರು ಶೀಘ್ರಾಯಿತ್ತ ಗಮನಹರಿಸಿ ರಸ್ತೆಗಳನ್ನು ದುರಸ್ತಿಗೊಳಿಸಿ ಪ್ರಮುಖ ರಸ್ತೆಯಲ್ಲಿ ಹಂಪ್ಸ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
==* ಹೇಳಿಕೆ1ನಮ್ಮ ಮನೆಯ ಮುಂದೆ ಈ ರಸ್ತೆ ಇದ್ದು ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗ ನೋಡಿದರೆ ಬೇಕಾಬಿಟ್ಟಿಯಾಗಿ ಕಲ್ಲು ಮಣ್ಣುಗಳನ್ನು ಗುಡ್ಡದಂತೆ ತಂದು ಸುರಿದು ಹೋಗಿದ್ದಾರೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಶೀಘ್ರ ಸಂಬಂಧಪಟ್ಟವರು ಇದ್ದ ಗಮನ ಹರಿಸದೆ ಹೋದರೆ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. - ಎಚ್ ಪಿ ಧರ್ಮರಾಜ್, ನಾಗರಿಕರು