ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿದೆ. ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಇದರ ವಿರುದ್ಧ ವಿಧಾನಸೌಧ ಚಲೋ ಜೊತೆಗೆ ದೆಹಲಿ ಚಲೋ ಕೂಡ ನಡೆಸಲಿದೆ ಎಂದು ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಕೆ.ಆರ್.ಪ್ರಸಾದ್ ಗೌಡ ತಿಳಿಸಿದರು
ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿದೆ. ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಇದರ ವಿರುದ್ಧ ವಿಧಾನಸೌಧ ಚಲೋ ಜೊತೆಗೆ ದೆಹಲಿ ಚಲೋ ಕೂಡ ನಡೆಸಲಿದೆ ಎಂದು ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಕೆ.ಆರ್.ಪ್ರಸಾದ್ ಗೌಡ ತಿಳಿಸಿದರು.
ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ರೈತರು ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲಿಯೇ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಬೈರಮಂಗಲ ವೃತ್ತದಿಂದ ವಿಧಾನಸೌಧ ಚಲೋ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿದರು.
ಈ ಯೋಜನೆ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ವಾಸ್ತವವನ್ನು ಮನವರಿಕೆ ಮಾಡಿಕೊಡಲು ದೆಹಲಿ ಚಲೋ ಕೂಡ ಹಮ್ಮಿಕೊಳ್ಳುತ್ತೇವೆ. ಈ ಭಾಗದ ಸುಮಾರು 30 ರೈತರನ್ನು ದೆಹಲಿಗೆ ಕರೆದೊಯ್ದು ಜಂತರ್ ಮಂತರ್ ನಲ್ಲಿ ಪ್ರತಿಭಟಿಸಿ ಕರ್ನಾಟಕದ ಸರ್ಕಾರದ ರೈತ ವಿರೋಧಿ ನೀತಿಯನ್ನು ದೇಶಕ್ಕೆ ತಿಳಿಸುವ ಕೆಲಸ ಮಾಡುತ್ತೇವೆ.
ಅಲ್ಲದೆ, ಡ್ರೋಣ್ ಮೂಲಕ ಇಲ್ಲಿನ ಹಸಿರು ಪ್ರದೇಶವನ್ನು ವಿಡಿಯೋ ಮಾಡಿಸಿ ದಾಖಲೆ ಸಮೇತ ಪ್ರಧಾನಿ ಮೋದಿ ಅವರಿಗೆ ರೈತರ ಮೂಲಕವೇ ಮನವಿ ಸಲ್ಲಿಸುತ್ತೇವೆ. ಇದಕ್ಕಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ರೈತರೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಸಮಯ ಅವಕಾಶ ಕೇಳಿದ್ದಾರೆ ಎಂದು ಹೇಳಿದರು.
ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹಠ ರೈತರನ್ನು ಬೀದಿಯಲ್ಲಿ ಕೂರಿಸಿದೆ. ಕಳೆದ 460 ದಿನಗಳಿಂದ ಅನ್ನದಾತರು ಹೋರಾಟ ನಡೆಸುತ್ತಿದ್ದರೂ ಕನಿಕರ, ಕರುಣೆ ಬಂದಿಲ್ಲ. ಮುಖ್ಯಮಂತ್ರಿಯಾದವರು ನಾಡಿನ ಪ್ರತಿಯೊಬ್ಬ ಪ್ರಜೆಯ ಸುಖ ಬಯಸಬೇಕು. ಆದರೆ, ಡಿಕೆಶಿ ಹಠ ಸಾಧನೆ ಮಾಡಲೇಬೇಕೆಂದು ರೈತರನ್ನು ಒಕ್ಕಲೆಬ್ಬಿಸಲು ಹೊರಟಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದರು.
ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಅಷ್ಟಕ್ಕೂ ಟೌನ್ ಶಿಪ್ ಮೂಲಕ ಎಷ್ಟು ಉದ್ಯೋಗ ಸೃಷ್ಟಿ ಮಾಡುತ್ತಾರೆ ಎಂಬುದರ ಸ್ಪಷ್ಟತೆ ಇಲ್ಲ. ಈ ಹಿಂದೆ ಗೂಗಲ್ ತನ್ನ ಎಐ ಹಬ್ ಅನ್ನು ಕರ್ನಾಟಕದಲ್ಲಿ ಸ್ಥಾಪಿಸಲು 1.30 ಲಕ್ಷ ಕೋಟಿ ಹೂಡಿಕೆಗೆ ಮುಂದಾಗಿತ್ತು. ಅದು ಆಂಧ್ರಪ್ರದೇಶದ ಪಾಲಾಯಿತು. ಅದನ್ನೇ ಉಳಿಸಿಕೊಳ್ಳಲಾಗದವರು ಎಐ ಸಿಟಿ ನಿರ್ಮಿಸುತ್ತಾರೆಯೇ ಎಂದು ವ್ಯಂಗ್ಯವಾಡಿದರು.
ಟೌನ್ ಶಿಪ್ ವಿರೋಧ ಮಾಡುತ್ತಿರುವವರು ರೈತರೇ ಅಲ್ಲವೆಂದು ಹೇಳುತ್ತೀರಾ. ಇಲ್ಲಿನ ರೈತರು ವ್ಯವಸಾಯ ಮಾಡುತ್ತಿರುವುದನ್ನು ಎಂದಾದರು ನೋಡಿದ್ದೀರಾ. ಸಹಸ್ರಾರು ರೈತ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿದ್ದು, ತಿಂಗಳಿಗೆ 6 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಲಕ್ಷಾಂತರ ಗಿಡ ಮರಗಳಿವೆ. ಅವೆಲ್ಲವನ್ನು ಬಲಿ ಕೊಡಲು ಮುಂದಾಗಿರುವ ನಿಮಗೆ ಭಗವಂತ ಒಳ್ಳೆಯದು ಮಾಡಲ್ಲ ಎಂದು ಕಿಡಿಕಾರಿದರು.
ಟೌನ್ ಶಿಪ್ ಹೆಸರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ರಿಯಲ್ ಎಸ್ಟೇಟ್ ಮಾಡಲು ಮುಂದಾಗಿದ್ದಾರೆ. ಇಲ್ಲಿ ಅವರ ಬೆಂಬಲಿಗರು ಭೂ ಕಬಳಿಕೆ ಮಾಡಿರುವ ಮಾಹಿತಿ ಇದ್ದು, ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ. ಪ್ರಾರಂಭದಲ್ಲಿ 2600 ಎಕರೆ ಇದ್ದ ಸರ್ಕಾರಿ ಗೋಮಾಳ 750 ಎಕರೆಗೆ ಬಂದಿದೆ. ಅಷ್ಟು ಭೂಮಿ ಏನಾಯಿತು ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಮಾಡುವುದಾಗಿ ಹೇಳಿ, ಫೋನ್ ನಂಬರ್ ಕೂಡ ಕೊಟ್ಟಿದ್ದಾರೆ. ಆದರೆ ಇಲ್ಲಿ ಮುಖ್ಯಮಂತ್ರಿಗಳೇ ಸಾವಿರಾರು ಕೋಟಿ ರು.ಗಳ ಭ್ರಷ್ಟಾಚಾರ ಮಾಡುತ್ತಿದ್ದಾರೆ ಹೀಗಿರುವಾಗ ನಾವು ಯಾರಿಗೆ ಫೋನ್ ಮಾಡಿ ತನಿಖೆ ಮಾಡಬೇಕೆಂದು ಹೇಳಬೇಕು ಎಂದು ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಸಾಕಷ್ಟು ಹಣ ಸಂಪಾದನೆ ಮಾಡಿದ್ದು, ಅಧಿಕಾರವನ್ನೂ ಅನುಭವಿಸಿದ್ದಾರೆ. ರೈತರ ಮೇಲೇಕೆ ಕರುಣೆ ಬರುತ್ತಿಲ್ಲ. ರೈತನ ಮಗ ಎಂದು ಹೇಳಿಕೊಳ್ಳುವ ಅವರಿಗೆ ರೈತರ ಮೇಲೇಕೆ ಕರುಣೆ ಬರುತ್ತಿಲ್ಲ. ಭೂ ಸ್ವಾಧೀನ ನಿಲ್ಲಿಸದಿದ್ದರೆ ರಕ್ತ ಕೊಟ್ಟಾದರೂ ಭೂಮಿ ಉಳಿಸಿಕೊಳ್ಳುತ್ತೇವೆ ಎಂದು ಪ್ರಸಾದ್ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿಗಳ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಯ್ಯ, ರೈತ ಮುಖಂಡರಾದ ಶ್ರೀನಿವಾಸ ರೆಡ್ಡಿ, ನಾಗರಾಜು ಮಂಡಲಹಳ್ಳಿ, ಪಾರ್ಥಸಾರತಿ, ಶಿವನಂಜಯ್ಯ, ಪ್ರಸನ್ನ ಕುಮಾರ್ , ಹಾರೋಹಳ್ಳಿ ಕೃಷ್ಣ ಮತ್ತಿತರರು ಹಾಜರಿದ್ದರು.
ಕೋಟ್ ...................
ಬೆಂಗಳೂರು ಸುತ್ತಮುತ್ತ ಈಗಾಗಲೇ ಅನೇಕ ಅಪಾರ್ಟ್ ಮೆಂಟ್ ಗಳು, ಲೇಔಟ್ ಗಳು ಹಾಗೂ ವಸತಿ ಯೋಜನೆಗಳು ಖಾಲಿ ಉಳಿದಿವೆ. ಹೀಗಿರುವಾಗ ನಗರೀಕರಣ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕ್ರಮ ಸರಿಯಲ್ಲ. ರೈತರ ಹಿತಾಸಕ್ತಿ, ಕೃಷಿಯ ಮಹತ್ವ ಹಾಗೂ ಭವಿಷ್ಯದ ಆಹಾರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಭೂ ಸ್ವಾಧೀನ ಆದೇಶ ಹಿಂಪಡೆಯಬೇಕು.
-ಪ್ರಸಾದ್ ಗೌಡ, ಅಧ್ಯಕ್ಷರು, ಬಿಜೆಪಿ ಮಾಗಡಿ ಮಂಡಲ
15ಕೆಆರ್ ಎಂಎನ್ 1.ಜೆಪಿಜಿ
ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಜೆಪಿ ಮಾಗಡಿ ಮಂಡಲ ಅಧ್ಯಕ್ಷ ಕೆ.ಆರ್.ಪ್ರಸಾದ್‌ಗೌಡ ರೈತರು ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.