ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಲೋಕಸಭಾ ಕ್ಷೇತ್ರದ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಟಿ.ಆರ್. ಸುನಿಲ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.ನಗರದ ರಾಮಸ್ವಾಮಿ ವೃತ್ತದಲ್ಲಿರುವ ಹುತಾತ್ಮ ರಾಮಸ್ವಾಮಿ ಅವರಿಗೆ ಮಾಲಾರ್ಪಣೆ ಮಾಡಿದ ಸುನಿಲ್ ಅವರು, ಅಲ್ಲಿಂದ ಗನ್ ಹೌಸ್ ನವರೆಗೆ ಮೆರವಣಿಗೆ ನಡೆಸಿ ನಂತರ ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ರವಿ ಮಾತನಾಡಿ, ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ, ನಿರುದ್ಯೋಗ, ಬಡತನ ಹೆಚ್ಚಾಗುತ್ತಲೇ ಇದ್ದು, ದುಡಿಯುವ ಜನಗಳು ಸಂಕಷ್ಟದಲ್ಲಿದ್ದಾರೆ. ಪರ್ಯಾಯವಾಗಿ ದುಡಿಯುವ ಜನಗಳ ರಾಜಕೀಯವನ್ನು ಬಲಪಡಿಸಲು ನಾವು ಸ್ಪರ್ಧಿಸುತ್ತಿದ್ದೇವೆ ಎಂದರು.ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ್ ಮೇಟಿ ಮಾತನಾಡಿ, ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾತಿ ಧರ್ಮದ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುತ್ತಿದೆ. ದಿನೇ ದಿನೇ ಆರೋಗ್ಯ ಖಾಸಗೀಕರಣ, ಶಿಕ್ಷಣದ ವ್ಯಾಪಾರೀಕರಣ, ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ಇದೆ. ಬಿಜೆಪಿ ಅಥವಾ ಕಾಂಗ್ರೆಸ್ ಆಗಲಿ ಯಾವ ಪಕ್ಷವೂ ಜನ ಸಾಮಾನ್ಯರ ಪರವಾಗಿಲ್ಲ ಎಂದು ದೂರಿದರು.
ಜನರ ನೈಜ ಪರ್ಯಾಯ ಎಂದರೆ ಅದು ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷ. ನಮ್ಮ ಪಕ್ಷದ ಅಭ್ಯರ್ಥಿ ಸುನಿಲ್ ಅವರು ಕಾಲೇಜು ವಿದ್ಯಾರ್ಥಿ ಆಗಿದ್ದಾಗಿಂದಲೂ ಯುವಜನರ ಹಾಗೂ ಜನ ಸಾಮಾನ್ಯರ ಪರವಾಗಿ ಹೋರಾಟಗಳನ್ನು ಕಟ್ಟಿ ಬೆಳೆಸಿದ್ದಾರೆ. ಹಾಗಾಗಿ ಭ್ರಷ್ಟ ಪಕ್ಷಗಳನ್ನು ಸೋಲಿಸಲು ನಮ್ಮ ಪಕ್ಷವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.ಪಕ್ಷದ ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯೆ ಎಂ. ಉಮಾದೇವಿ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್. ಸಂಧ್ಯಾ, ಜಿ.ಎಸ್. ಸೀಮಾ, ವಿ. ಯಶೋಧರ್, ಹರೀಶ್, ಸದಸ್ಯರಾದ ಸುಭಾಷ್, ಚಂದ್ರಕಲಾ, ನೀತುಶ್ರೀ ಮೊದಲಾದವರು ಇದ್ದರು.