ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಭೂಸ್ವಾಧೀನ ಪ್ರಯತ್ನಗಳನ್ನು ವಿರೋಧಿಸಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಮಾ.31ರಂದು ತಾಲೂಕು ಕಚೇರಿಗೆ ಟ್ರ್ಯಾಕ್ಟರ್ ಚಲೋವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಧರ್ ಹೇಳಿದರು.
ಸಾಮಾಜಿಕ ಚಳವಳಿಗಾರರಾದ ಪ್ರಭಾ ಬೆಳವಂಗಲ ಮಾತನಾಡಿ, ತಾಲೂಕಿನ ಚಿಕ್ಕಬೆಳವಂಗಲದಿಂದ ತಾಲೂಕು ಕಚೇರಿವರೆಗೆ ಸುಮಾರು 17 ಕಿ.ಮೀ ದೂರ ಟ್ರ್ಯಾಕ್ಟರ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 100 ಟ್ರ್ಯಾಕ್ಟರ್ ಗಳಲ್ಲಿ ರೈತರು ಭಾಗಿಯಾಗಲಿದ್ದಾರೆ ಎಂದರು.
ಸರ್ಕಾರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ರೈತರು ತಮ್ಮ ಜಮೀನುಗಳನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಈ ಭೂಮಿಯಲ್ಲಿ ಅಡಿಕೆ, ತೆಂಗು, ಸೀಬೆ, ದ್ರಾಕ್ಷಿ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ರೈತ ದೇಶದ ಬೆನ್ನೆಲುಬು, ಎಲ್ಲಾ ಸರ್ಕಾರಗಳು ರೈತರಿಂದ ಭೂಮಿಯನ್ನು ಬಲವಂತವಾಗಿ ಕಬಳಿಸಿ ರೈತರ ಬೆನ್ನು ಮುರಿಯುವ ಕೆಲಸ ಮಾಡುತ್ತಿವೆ. ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಪರಿಸರ ಸಮತೋಲನವಾಗಿರಬೇಕು ಎಂದರು.ರೈತ ಮುಖಂಡ ಕೇಶವ ಕುಮಾರ್ ಮಾತನಾಡಿ, ತಾವು ವ್ಯವಸಾಯದಲ್ಲೇ ಬದುಕು ಕಟ್ಟಿಕೊಂಡಿದ್ದು, ಸರ್ಕಾರ ಬಲವಂತವಾಗಿ ಭೂಮಿ ಕಬಳಿಕೆ ಮಾಡಲು ಮುಂದಾಗಿದೆ. ಬೇರೆ ದೇಶಗಳ ಕಂಪನಿಗಳಿಗೆ ನೀಡಲು ಫಲವತ್ತಾದ ಜಮೀನು ಕಬಳಿಕೆ ಮಾಡಲಾಗುತ್ತಿದೆ. ಎಲ್ಲೂ ಸಹ ಬಲವಂತವಾಗಿ ಭೂಮಿ ಕಸಿದುಕೊಳ್ಳಬಾರದು ಎಂದರು.
ಈ ವೇಳೆ ಮುಖಂಡರಾದ ಸುನೀಲ್ ಕುಮಾರ್, ತಿಮ್ಮೇಗೌಡ, ರಾಮಕೃಷ್ಣಯ್ಯ, ಮನು, ಕೆಂಪೇಗೌಡ ಹಾಗೂ ಸಮಿತಿ ಮುಖಂಡರು, ರೈತರು ಉಪಸ್ಥಿತರಿದ್ದರು.
ದೊಡ್ಡಬಳ್ಳಾಪುರದಲ್ಲಿ ದೊಡ್ಡಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.