ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ರೈತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್‍ಯಾಲಿಗೆ ಪೊಲೀಸರು ಅನುಮತಿ ನೀಡದೆ ತಡೆದು ರೈತ ಮುಖಂಡರನ್ನು ವಶಕ್ಕೆ ಪಡೆದರು.ನಗರದ ಪ್ರವಾಸಿ ಮಂದಿರದ ಬಳಿ ಟ್ರ್ಯಾಕ್ಟರ್‌ನೊಂದಿಗೆ ಜಮಾಯಿಸಿದ ರೈತರು ಟ್ರ್ಯಾಕ್ಟರ್ ಹೇರಿ ಹೊರಡಲು ಮುಂದಾದಾಗ ಪೊಲೀಸರು ತಡೆದು, ಅನುಮತಿ ನಿರಾಕರಿಸಿ ರೈತ ಮುಖಂಡರನ್ನು ಬಂಧಿಸಿ ಕರೆದೊಯ್ದರು.
ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ರಾಷ್ಟ್ರಾದ್ಯಂತ ಇಂದು ಸಂಯುಕ್ತ ಕಿಸಾನ್ ಮೋರ್ಚಾ ಆದೇಶದ ಮೇರೆಗೆ ಟ್ರ್ಯಾಕ್ಟರ್ ರ್‍ಯಾಲಿ ನಡೆಯುತ್ತಿದ್ದು, ಇಲ್ಲಿ ಪೊಲೀಸರು ನಿರಾಕರಿಸುತ್ತಿರುವುದು ಖಂಡನೀಯ ಎಂದರು. ರೈತರ ಸಮಸ್ಯೆಗಳಾದ ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಮಾಡಬೇಕು, ಕೃಷಿ ಬಳಕೆಗೆ ಮಾಡುವ ಟ್ರ್ಯಾಕ್ಟರ್ ಉಪಕರಣಗಳ ಮೇಲಿನ ಜೆಎಸ್‌ಟಿ ಹಿಂಪಡೆಯಬೇಕು, ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು, ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು, ಕೃಷಿ ಸಾಲ ನೀತಿ ಬದಲಾಗಬೇಕು, ಕಾಡಂಚಿನ ಭಾಗದಲ್ಲಿ ವನ್ಯಜೀವಿಗಳಿಂದ ಆಗುವ ಬೆಳೆ ಹಾನಿ, ಮಾನವ ಹಾನಿ ಸಂಘರ್ಷ ತಪ್ಪಿಸಲು ವೈಜ್ಞಾನಿಕ ಪರಿಹಾರ ನೀಡಲು ಕ್ರಮ ಜಾರಿಯಾಗಬೇಕು, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ೫ ರು. ಪ್ರೋತ್ಸಾಹ ಧನ ಎಂಟು ತಿಂಗಳಿನಿಂದ ₹೮೦೦ ಕೋಟಿ ಬಿಡುಗಡೆಯಾಗಿಲ್ಲ ಇದನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ಉಡೀಗಾಲ ರೇವಣ್ಣ, ಉಪಾಧ್ಯಕ್ಷ ಮೂಡಲಪುರ ರೇವಣ್ದ, ಕಾರ್ಯದರ್ಶಿ ಮೆಳ್ಳಹಳ್ಳಿ ಚಂದ್ರಶೇಖರ ಮೂರ್ತಿ, ತಾಲೂಕು ಅಧ್ಯಕ್ಷ ನಂಜಾಪುರ ಸತೀಶ್, ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಉಡಿಗಾಲ ಸುಂದ್ರಪ್ಪ, ಗೌಡಹಳ್ಳಿ ಷಡಕ್ಷರಸ್ವಾಮಿ, ಎಂ.ಬಿ.ರಾಜು, ರುದ್ರಸ್ವಾಮಿ, ವೀರನಪುರ ನವೀನ್, ಲೋಕೇಶ್, ಮಾದೇಶ್ ಮತ್ತಿತರರಿದ್ದರು.