ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೆರೆಗಳಿಗೆ ನೀರು ತುಂಬಿಸಬೇಕು, ಸಾಗುವಳಿ ಚೀಟಿ ನೀಡಬೇಕು ಹಾಗೂ ಇನ್ನಿತರ ಐದು ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘ ಪಟ್ಟಣದಲ್ಲಿ ಮಂಗಳವಾರ ನಡೆಸಿದ ಪ್ರತಿಭಟನಾ ರೈತ ಸಮಾವೇಶದಲ್ಲಿ ಟ್ರ್ಯಾಕ್ಟರ್ ಹಾಗೂ ಕಾರ್ಯಕರ್ತರ ಜಾಥಾದ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಸುವ ಕೆಲಸ ಮಾಡಿದೆ.ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಿಂದ ತಾಲೂಕು ಕಚೇರಿ ತನಕ ಟ್ರ್ಯಾಕ್ಟರ್ ಹಾಗೂ ನೂರಾರು ಹಸಿರು ರುಮಾಲು ಹಾಕಿದ ಕಾರ್ಯಕರ್ತರೊಂದಿಗೆ ರೈತಸಂಘದ ರಾಜ್ಯ, ಜಿಲ್ಲಾ ಹಾಗೂ ನೆರೆ ಜಿಲ್ಲೆಗಳ ಮುಖಂಡರು ಜಾಥಾ ಆರಂಭಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋ಼ಷಣೆ ಮೊಳಗಿಸಿದ ರೈತಸಂಘದ ಕಾರ್ಯರ್ತರು ತಮ್ಮ ಆಕ್ರೋಶ ಹೊರ ಹಾಕಿದರು.ತಾಲೂಕು ಕಚೇರಿ ಆವರಣದಲ್ಲಿ ನಡೆದ ಸಮಾವೇಶದಲ್ಲಿ ರೈತಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಮಂಡ್ಯ ಜಿಲ್ಲಾಧ್ಯಕ್ಷ ರವಿಕುಮಾರ್, ರಾಮನಗರ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಮೈಸೂರು ಜಿಲ್ಲಾಧ್ಯಕ್ಷ ಮರಂಕಯ್ಯ, ಚಾಮರಾಜನಗರ ರೈತ ನಾಯಕ ಮಹೇಶ್ ಕುಮಾರ್, ಮೂಡ್ನಾಕೂಡು ಮಹೇಶ್ ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಧರಣಿ 34 ದಿನಕ್ಕೆ ಕಾಲಿಟ್ಟಿದೆ ಎಂದರೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಾನ, ಮಾರ್ಯಾದೆ ಇಲ್ಲ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಹಂಗಳ ದಿಲೀಪ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಉಪಾಧ್ಯಕ್ಷ ನಾಗರಾಜಪ್ಪ, ಮುಖಂಡರಾದ ಹಂಗಳ ಮಾಧು, ಮಹದೇವಪ್ಪ, ಪ್ರಕಾಶ್, ಅಶೋಳಕ, ಸ್ವಾಮಿ, ಮಹೇಂದ್ರ, ಸೋಮಶೇಖರ್, ಪ್ರಸಾದ್, ರಘು, ಸಿದ್ದರಾಜು, ಶಿವಕುಮಾರ್ ಸೇರಿದಂತೆ ನೂರಾರು ಮಂದಿ ಇದ್ದರು.ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ರೈತಸಂಘ ನಡೆಸುತ್ತಿರುವ 34 ದಿನದ ಅಹೋ ರಾತ್ರಿ ಧರಣಿ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದಾರೆ.
ರೈತ ಸಂಘದ ಹೋರಾಟ ಫಲವಾಗಿ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಅರಣ್ಯ ಸಚಿವ,ವಿಪಕ್ಷ ನಾಯಕರು,ಸಂಸದ,ಶಾಸಕರು ಹಾಗು ಹಿರಿಯ ಅಧಿಕಾರಿಗಳು ಬಂದು ಕೂತಿದ್ದಾರೆಂದರೆ ಇದು ಚಳವಳಿಯ ತಾಕತ್ತು. ರೈತಸಂಘ ಚಳವಳಿ ಮಾಡುತ್ತಿದೆ. ಧರಣಿಯಲ್ಲಿ ಸುಮ್ಮನೆ ಕುಳಿತಿದ್ದಾರೆ ಎಂದು ವ್ಯಂಗವಾಡುವ ಮಂದಿಗೆ ಅಹೋ ರಾತ್ರಿ ಧರಣಿಗೆ ಬಂದು ಕುಳಿತವರ ನೋಡಿದರೆ ಅರ್ಥವಾಗುತ್ತಲ್ವ? ಇದು ಹೋರಾಟದ ಶಕ್ತಿ ಹಾಗಾಗಿಯೇ ರೈತರು ಸಂಘಟಿತರಾಗಬೇಕು ಎಂದರು.ಕೆರೆಗೆ ನೀರು ತುಂಬಿಸಬೇಕು ಹಾಗೂ ಸಾಗುವಳಿ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿ ರೈತರು ಕಳೆದ 35 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಲಿಲ್ಲ ಅಂದ್ಮೇಲೆ ರಾಜ್ಯದಲ್ಲಿ ಸರ್ಕಾರ ಬದುಕಿವೆಯಾ ಎಂದು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತಸಂಘದ ಮೈಸೂರು ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಪ್ರಶ್ನಿಸಿದರು.
ರೈತರೇನು ರಾಜಕಾರಣಿಗಳ ಹಾಗೂ ಜನಪ್ರತಿನಿಧಿಗಳ ಕಾಂಟ್ರಾಕ್ಟ್ ಕೇಳುತ್ತಿಲ್ಲ. ಅಧಿಕಾರಿಗಳ ಟ್ರಾನ್ಸ್‌ಫರ್ ಮಾಡಿಸಿ ಕೊಡಿ ಎಂದು ಕೇಳುತ್ತಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಇಟ್ಟುಕೊಂಡು ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಲಿಲ್ಲ, ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು.ದೇಶ ಹಾಗೂ ರಾಜ್ಯದಲ್ಲಿ ಅನೇಕ ಸರ್ಕಾರಗಳು ಬಂದಿವೆ,ಹೋಗಿವೆ. ಆದರೆ ಶ್ರಮಿಕರ ಜೀವನ ಮಟ್ಟ ಸುಧಾರಿಸಲು ಎಲ್ಲಾ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ವಿಫಲವಾಗಿದೆ ಎಂದು ಗುಡುಗಿದರು.
ರೈತರ ಹೋರಾಟದ ಫಲವೇ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿಲ್ಲ ಈ ಬಗ್ಗೆ ಜನಪ್ರತಿನಿಧಿಗಳು ಚರ್ಚೆಗೆ ಬರಲಿ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಸವಾಲು ಹಾಕಿದ್ದಾರೆ.ರೈತರು ಚಾಮರಾಜನಗರದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ ಬಳಿಕವಷ್ಠೆ ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಅನುದಾನ ಬಿಡುಗಡೆ ಮಾಡಿದ್ದು. ರೈತರು ಹೋರಾಟದ ಬಗ್ಗೆ ಕೆಲ ರಾಜಕಾರಣಿಗಳು ಮಾತನಾಡುತ್ತಿದ್ದಾರೆ ಇದು ಖಂಡನೀಯ.ರೈತರು ಪಾದಯಾತ್ರೆ ಮಾಡಿದ ಹಿನ್ನಲೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ಬಂತು ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
----------------18ಜಿಪಿಟಿ4ಗುಂಡ್ಲುಪೇಟೆಯಲ್ಲಿ ರೈತಸಂಘದ ಕಾರ್ಯಕರ್ತರು ಟ್ರ್ಯಾಕ್ಟರ್ ಹಾಗೂ ಕಾರ್ಯಕರ್ತರು ಜಾಥಾ ನಡೆಸಿದರು.18ಜಿಪಿಟಿ5ಗುಂಡ್ಲುಪೇಟೆಯಲ್ಲಿ ರೈತ ಸಮಾವೇಶದಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.