ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿ ಸುಮ್ಮನೆ ಬರುವುದಿಲ್ಲ, ಮಾರುಕಟ್ಟೆ ನಂಬಿ ಸಾವಿರಾರು ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ, ಅವರ ಶ್ರಮದಿಂದಲೇ ನಮ್ಮೆಲ್ಲರ ಬದುಕು ಸಾಗುತ್ತಿದೆ, ಹೀಗಾಗಿ ರೈತರಿಗೆ ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಅನ್ಯಾಯ ಅಥವಾ ಮೋಸವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ವರ್ತಕನ ಜವಾಬ್ದಾರಿ ಎಂದು ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಮಾರುಕಟ್ಟೆ ವಿಸ್ತರಣೆಗೆ ಜಾಗದ ಬೇಡಿಕೆ: ಮೆಣಸಿನಕಾಯಿ ಮಾರುಕಟ್ಟೆಯ ವಹಿವಾಟು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಪ್ರಸ್ತುತ ಸುಮಾರು 1 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲ ವ್ಯಾಪಾರಸ್ಥರಿಗೂ ಸ್ವಂತ ನಿವೇಶನದ ಸೌಲಭ್ಯವಿಲ್ಲದ ಕಾರಣ, ದುಬಾರಿ ಬಾಡಿಗೆ ನೀಡಿ ವ್ಯಾಪಾರ ವಹಿವಾಟು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ, ಮಾರುಕಟ್ಟೆಯ ಪಕ್ಕದಲ್ಲಿರುವ ರೈತರ ಜಮೀನುಗಳನ್ನು ಸರ್ಕಾರದ ಮೂಲಕ ಸ್ವಾಧೀನಪಡಿಸಿಕೊಂಡು, ಅವುಗಳನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿದರೆ ಮಾರುಕಟ್ಟೆ ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಸಭೆಯಲ್ಲಿ ದಲಾಲರು, ವರ್ತಕರು ಆಗ್ರಹಿಸಿದರು.
ಸಮಿತಿ ರಚನೆ ಅಗತ್ಯವಿದೆ: ಇದಕ್ಕೆ ಪ್ರತಿಕ್ರಿಯಿಸಿದ ಸುರೇಶಗೌಡ ಪಾಟೀಲ, ಮಾರುಕಟ್ಟೆ ಪಕ್ಕದಲ್ಲಿರುವ ರೈತರು ತಮ್ಮ ಜಮೀನುಗಳನ್ನು ನೀಡಲು ಸಿದ್ಧರಿದ್ದರೆ ನಮ್ಮ ಅಭ್ಯಂತರವಿಲ್ಲ, ಆದರೆ ಈ ವಿಚಾರದಲ್ಲಿ ಹಲವು ಆಡಳಿತಾತ್ಮಕ ಹಾಗೂ ಕಾನೂನು ಪ್ರಕ್ರಿಯೆಗಳಿದ್ದು, ಸರ್ಕಾರದ ಹಂತದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ, ಈ ಕುರಿತು ಸಮಿತಿ ರಚಿಸಿ, ಸ್ಥಳೀಯ ಶಾಸಕರು ಹಾಗೂ ಸಚಿವರನ್ನು ಭೇಟಿ ಮಾಡಿ ಮಾರುಕಟ್ಟೆ ವಿಸ್ತರಣೆಗೆ ಅಗತ್ಯವಿರುವ ಜಾಗವನ್ನು ಮಂಜೂರು ಮಾಡಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯೋಣ ಎಂದರು.ಸೆಸ್ ತಿಂಗಳಿಗೊಮ್ಮೆ ಕಟ್ಟಿದರೆ ಒಳ್ಳೆದು: ಪ್ರಸ್ತುತ ಪ್ರತಿ ವಾರ ಎಪಿಎಂಸಿಗೆ ಸೆಸ್ (ಮಾರುಕಟ್ಟೆ ಶುಲ್ಕ) ಪಾವತಿಸುತ್ತಿದ್ದು, ಮೆಣಸಿನಕಾಯಿ ಸೀಜನ್ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುವುದರಿಂದ ವಾರಕ್ಕೊಮ್ಮೆ ಸೆಸ್ ಭರಣ ಮಾಡುವುದು ದಲಾಲರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ತಿಂಗಳಿಗೊಮ್ಮೆ ಸೆಸ್ ಪಾವತಿಸಲು ಅವಕಾಶ ಕಲ್ಪಿಸಬೇಕು ಎಂದು ದಲಾಲರು ಸಭೆಯಲ್ಲಿ ಆಗ್ರಹಿಸಿದರು. ದಲಾಲರ ಮನವಿಗೆ ಪ್ರತಿಕ್ರಿಯಿಸಿದ ನಿರ್ದೇಶಕ ಸತೀಶಗೌಡ ಪಾಟೀಲ, ಈ ಕುರಿತು ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತಂದು, ಸಾಧ್ಯವಿರುವ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ವರ್ತಕರ ಸಂಘದ ಪದಾಧಿಕಾರಿಗಳು, ದಲಾಲರು, ವ್ಯಾಪಾರಸ್ಥರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಬ್ಯಾಡಗಿ ಮೆಣಸಿನಕಾಯಿಯ ಮೂಲ ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ನಿರೀಕ್ಷಿತ ಮಟ್ಟದಲ್ಲಿ ಒತ್ತು ನೀಡುತ್ತಿಲ್ಲ, ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬ್ಯಾಡಗಿ ಮೂಲ ತಳಿ ನಶಿಸುವ ಆತಂಕವಿದೆ, ತಳಿಯ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರುವ ಮೂಲಕ ಮೂಲ ತಳಿ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.