ಬೈಂದೂರು ಜೋಡುಕರೆ ಕಂಬಳ ಪೂರ್ವಭಾವಿ ರೈತೋತ್ಸವ
ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ, ಹಿರಿಯರು ಆರಂಭಿಸಿದ ಸಾಂಪ್ರದಾಯಿಕ ಕಂಬಳಂತಹ ಪಾರಂಪರಿಕ ನಿಲ್ಲಿಸಬಾರದು ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.
ಮುಳ್ಳಿಕಟ್ಟೆ ನಗುಸಿಟಿಯಲ್ಲಿ ಗುರುವಾರ ಸಂಜೆ ಬೈಂದೂರು ತಾಲೂಕು ರೈತ ಸಂಘದ ಆಶ್ರಯದಲ್ಲಿ ನಡೆಯುವ ಜೋಡುಕರೆ ಕಂಬಳದ ಪೂರ್ವಭಾವಿ ನಡೆದ ರೈತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪಾರಂಪರಿಕವಾಗಿ ನಡೆಯುವ ಕಂಬಳ ನಿಂತರೆ ಊರಿಗೆ ಒಳಿತಾಗುವುದಿಲ್ಲ ಎನ್ನುವ ನಂಬಿಕೆ ಇದೆ. ರೈತನ ಕೋಣ ಚೆನ್ನಾಗಿದ್ದರೆ ರೈತ ಚೆನ್ನಾಗಿದ್ದಾನೆ ಎಂದರ್ಥ. ಕಂಬಳದ ಮನೆಯವರಿಗೆ ಊರಿನಲ್ಲಿ ವಿಶೇಷ ಗೌರವ ಇದೆ. ನಮ್ಮಲ್ಲಿರುವ ಸಹಕಾರ ಮನೋಭಾವ ಹಾಗೂ ಉದಾರತೆ ಪ್ರಪಂಚದ ಯಾವ ದೇಶದಲ್ಲಿಯೂ ಇಲ್ಲ. ನಾನು ಶಾಸಕನಾಗಿದ್ದಾಗ ಸಂಬಳ 750 ಇತ್ತು, ಈಗ 75,000 ಇದ್ದರೂ ಸಾಲುವುದಿಲ್ಲ ಎನ್ನುತ್ತಾರೆ. ಅದರಲ್ಲೂ ಲಂಚದ ಸಂಗತಿಗಳು ಬೇರೆ. ಜನಪ್ರತಿನಿಧಿಗಳನ್ನು ಹದ್ದುಬಸ್ತಿನಲ್ಲಿಡುವುದು ರೈತನಿಂದ ಮಾತ್ರ ಸಾಧ್ಯ ಎಂದರು.
ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಎಚ್.ಎಸ್.ಶೆಟ್ಟಿ ಹಾಗೂ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ, ಭೋಜರಾಜ್ ಶೆಟ್ಟಿ ಹಳ್ನಾಡ್ ಮಾತನಾಡಿದರು.
ಹೆಮ್ಮಾಡಿ ಜನತಾ ಪಿ.ಯು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ರಸೋಲ್ಲಾಸ ಹಾಗೂ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಮಂಗಳೂರು ಇವರಿಂದ ನಾಟ್ಯ ವೈಭವ ನಡೆಯಿತು.