ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು

KannadaprabhaNewsNetwork |  
Published : Feb 25, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ತೋಪಿನಲ್ಲಿರುವ ದೇವರುಗಳ ಕಾಳು ಹಬ್ಬ ಮಹೋತ್ಸವದಲ್ಲಿ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಪಾಲ್ಗೊಂಡು ಆಶೀರ್ವಾದ ಪಡೆದರು.

ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಅಭಿಮತ । ಮಸ್ಕಲ್ ಟಿಬಿ ಗೊಲ್ಲರಹಟ್ಟಿಯಲ್ಲಿ ವಿಜೃಂಭಣೆಯ ಕಾಳು ಹಬ್ಬಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ತೋಪಿನಲ್ಲಿರುವ ಶ್ರೀ ಈರಪ್ಪ ಸ್ವಾಮಿ, ಶ್ರೀ ಗೊಲ್ಲಾಹಳಮ್ಮದೇವಿ, ಶ್ರೀ ರಂಗನಾಥಸ್ವಾಮಿ, ಶ್ರೀ ವೀರಾಂಜನೇಯ ಸ್ವಾಮಿ ಹಾಗೂ ಶ್ರೀ ಅಮಾವಾಸ್ಯೆ ಚಿತ್ರಲಿಂಗೇಶ್ವರ ಸ್ವಾಮಿಯ ಕಾಳು ಹಬ್ಬ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಫೆ.21ರಿಂದ ಆರಂಭವಾದ ಜಾತ್ರಾ ಮಹೋತ್ಸವ ಗಂಗಾಪೂಜೆ, ಧ್ವಜಾರೋಹಣ, ಹಾಲು ಮೀಸಲು, ವಾರದ ಪೂಜೆ, ದೊಡ್ಡ ಪೂಜೆ ಸೇರಿದಂತೆ ಮಂಗಳವಾರ ವಿಶೇಷ ಅಲಂಕಾರದೊಂದಿಗೆ ಕಾಳು ತಿದ್ದುವ ಕಾರ್ಯಕ್ರಮದ ಜೊತೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನೇರವೇರಿದವು.

ಈ ಸಂದರ್ಭದಲ್ಲಿ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ, ಕಾಡುಗೊಲ್ಲರ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು. ಸೋಬಾನೆ ಪದಗಳು, ಭಜನೆ, ಕೋಲಾಟ, ಜಾನಪದ ಹಾಡುಗಳು, ಗಣೆ ಊದುವುದು ಒಳಗೊಂಡಂತೆ ಗ್ರಾಮೀಣ ಬದುಕನ್ನು ಅನಾವರಣಗೊಳಿಸುವ ಈ ಸಮಾಜ ಅಕ್ಷರ ಜ್ಞಾನವಿಲ್ಲದಿದ್ದರೂ ಸಹ ಕೃಷಿಯ ಜೊತೆಗೆ ಕುರಿ, ಮೇಕೆ ಸಾಕಾಣಿಕೆ ನಡುವೆ ಜಾನಪದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಬೇಕು. ಸಂಘಟಿತರಾಗಿ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆಯಬೇಕು. ನಾನು ಕೂಡ ಸದಾ ನಿಮ್ಮ ಜೊತೆಯಾಗಿರುತ್ತೇನೆ ಎಂದರು.

ಜೆಡಿಎಸ್ ಹಿರಿಯ ಮುಖಂಡ ಎಂ.ರವೀಂದ್ರಪ್ಪ ಮಾತನಾಡಿ, ಕಾಡುಗೊಲ್ಲರ ದೇವರುಗಳು ನಮಗೆ ಇಷ್ಟವಾದ ದೈವಗಳು. ಇವರ ಆಚರಣೆಗಳು ಅತ್ಯಂತ ವಿಶಿಷ್ಟತೆಯಿಂದ ಕೂಡಿವೆ. ಬೇರೆ ಸಮುದಾಯಗಳಿಗಿಂತ ಕಾಡುಗೊಲ್ಲರು ವಿಭಿನ್ನವಾಗಿ ಹಬ್ಬಗಳನ್ನು, ಜಾತ್ರೆಗಳನ್ನು ಆಚರಿಸುತ್ತಾರೆ. ಕಾಡುಗೊಲ್ಲರ ಸಂಸ್ಕೃತಿಯನ್ನು ನಾನು ಮೈಗೂಡಿಸಿಕೊಂಡಿದ್ದೇನೆ. ಅಜ್ಜೇರು ಗೊಲ್ರು ಹಾಗೂ ಒಕ್ಕಲಿಗರ ಜಲ್ದೇನರು ಅಣ್ಣತಮ್ಮಂದಿರು. ನಮಗೆ ಕರಡಿಗೊಲ್ಲರು ನೆಂಟರು ಆಗ್ತಾರೆ. ಕಾಡುಗೊಲ್ಲರು ಹಾಗೂ ಒಕ್ಕಲಿಗರಲ್ಲಿ ಸಾಮ್ಯತೆಗಳಿವೆ. ಒಟ್ಟಿನಲ್ಲಿ ಕಾಡುಗೊಲ್ಲರು ರಾಜಕೀಯವಾಗಿ ಮುನ್ನೆಲೆಗೆ ಬರಬೇಕು. ನಮ್ಮ ಪಕ್ಷ ಕಾಡುಗೊಲ್ಲರನ್ನು ಗುರುತಿಸಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ಹಿಂದುಳಿದ ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲರು ಒಬ್ಬರಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ನಾವು ಕೂಡ ವರಿಷ್ಠರನ್ನು ಭೇಟಿಯಾಗಿ ಕಾಡುಗೊಲ್ಲರಿಗೆ ಎಸ್‌ಟಿ ಸದಸ್ಯತ್ವ ನೀಡುವಂತೆ ಒತ್ತಾಯಿಸುತ್ತೇವೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಮಾತನಾಡಿ, ವರ್ಷಕ್ಕೊಮ್ಮೆ ನಡೆಯುವ ಕಾಳು ಹಬ್ಬ ನೆಂಟರು, ಅಣ್ಣತಮ್ಮಂದಿರನ್ನು ಒಂದುಗೂಡಿಸುವ ಸಂಕೇತವಾಗಿದೆ. ಅಣ್ಣತಮ್ಮಂದಿರಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಅವುಗಳನ್ನು ಮರೆತು ಒಂದಾಗಿ ಹೋಗಲು ಇಂತಹ ಹಬ್ಬಗಳ ಅವಶ್ಯಕತೆ ಇದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಈ ವೇಳೆ ಸಮಾಜ ಸೇವಕ ಜಯರಾಮಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್, ಚಿತ್ರಲಿಂಗೇಶ್ವರ ದೇವರ ಹಿರಿಯ ಪೂಜಾರಿ ಚಿತ್ತಪ್ಪ, ಪೂಜಾರಿಗಳಾದ ಗುಂಡಪ್ಪ, ದಿನೇಶ್, ಸಣ್ಣೀರಪ್ಪ, ಮುಖಂಡರಾದ ಎನ್. ಬಂಗಾರಪ್ಪ, ಡಿ.ರಾಮಣ್ಣ, ನಿಜಲಿಂಗಪ್ಪ, ಎಂ.ಬಸವರಾಜ್, ಹೇಮಣ್ಣ, ರಾಜು, ಕುಂಟಜ್ಜರ ತಿಪ್ಪೇಸ್ವಾಮಿ, ಕರಡಜ್ಜರ ಚಂದ್ರಪ್ಪ, ಗುಂಡಪ್ಪ, ಚಂದ್ರಪ್ಪ, ಲಕ್ಷ್ಮೀಕಾಂತ್ , ಶಿವಕುಮಾರ್, ಸುರೇಶ್, ಈರಣ್ಣ, ರಾಜಪ್ಪ, ಮಂಜುನಾಥ್, ನಿಜಲಿಂಗಪ್ಪ, ಡಿ. ಪಾಂಡುರಂಗಪ್ಪ, ಗಿರೀಶ್ ಸೇರಿದಂತೆ ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೌರ್ಜನ್ಯ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯಗಳಲ್ಲಿ ನಡೆಯಲಿ: ಪಿ.ಯಶೋಧ
ಜಯಂತಿಯಂತೆ ರಾಘವೇಂದ್ರ ಸ್ವಾಮಿ ಉತ್ಸವ ಆಚರಿಸಿ: ಸುವಿದ್ಯೇಂದ್ರ ತೀರ್ಥರು