ಕನ್ನಡಪ್ರಭ ವಾರ್ತೆ ವಡಗೇರಾ
ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಗಳು ಮಾಯವಾಗುತ್ತಿವೆ. ಗ್ರಾಮೀಣ ಕ್ರೀಡೆಗಳು ಅತ್ಯಂತ ಮಹತ್ವವನ್ನು ಪಡೆದಿವೆ ಎಂದು ಪ್ರಗತಿಪರ ರೈತ ಪರ್ವತರೆಡ್ಡಿ ಗೌಡ ದೊಡ್ಡಮನಿ ಹೇಳಿದರು.ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಹಜರತ್ ಸೈಯದ್ ಶಾಹ ಜಮಾಲುದ್ದೀನ್ ಖಾದ್ರಿ ಉರ್ಸ್ ಅಂಗವಾಗಿ ನಡೆದ ಎತ್ತುಗಳ ಭಾರ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾವು ಚಿಕ್ಕವರಿದ್ದಾಗ ಗ್ರಾಮೀಣ ಪ್ರದೇಶದಲ್ಲಿ ರೈತರೆಲ್ಲರು ಸೇರಿ ಜಾತ್ರೆ ಹಬ್ಬ ಹರಿದಿನಗಳು ಇದ್ದಾಗ ಕಲ್ಲು ಎತ್ತುವುದು, ಎತ್ತಿನ ಬಂಡಿ ಸ್ಪರ್ಧೆ ಹಾಗೂ ಇನ್ನಿತರ ಗ್ರಾಮೀಣ ಸ್ಪರ್ಧೆಗಳನ್ನು ಏರ್ಪಡಿಸಿ ಸಂಭ್ರಮಿಸುತ್ತಿದ್ದರು. ಅವುಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಕ್ರೀಡೆಗಳು ಮನುಷ್ಯನ ಆರೋಗ್ಯದ ಸಂಕೇತವಾಗಿವೆ ಎಂದರು.ಯುವ ಮುಖಂಡ ಸಂಜೀವ್ ಐರೆಡ್ಡಿ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸುವ ಸಲುವಾಗಿ ನಮ್ಮ ಗ್ರಾಮದಲ್ಲಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆಯನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಆಯೊಜಿಸಲಾಗಿದೆ. ಈ ಸ್ಪರ್ಧೆಗಳು ಪ್ರಮುಖವಾಗಿ ರೈತರ ಸಂತಸದಾಯಕ ಮತ್ತು ಮಹತ್ವದ ಕ್ರೀಡೆಗಳಾಗಿವೆ ಎಂದು ತಿಳಿಸಿದರು.ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಬೆಂಡೆಬೆಂಬಳಿ ಗ್ರಾಮದ ನಿಂಗಪ್ಪ ದಂಡಿನ್ ಅವರ ಎತ್ತುಗಳು ಪಡೆದವು. ದ್ವಿತೀಯ ಸ್ಥಾನ ರವಿಗೌಡ ಮಾತ್ಪಳ್ಳಿ, ತೃತೀಯ ಸ್ಥಾನ ಅಮರೇಶ್ ಈರಬಗೇರಾ, ನಾಲ್ಕನೇ ಸ್ಥಾನ ಹಯ್ಯಾಳ ಲಿಂಗೇಶ್ವರ ದೇವತ್ಕಲ್, ಐದನೇ ಸ್ಥಾನ ಆನಂದ್ ರೆಡ್ಡಿ ಬಳ್ಳಾರಿ ಎತ್ತುಗಳು ಪಡೆದುಕೊಂಡವು. ಸೂಕ್ತ ಬಹುಮಾನ ವಿತರಿಸಲಾಯಿತು. ಆಂಧ್ರ, ತೆಲಂಗಾಣ ಹಾಗೂ ನೆರೆಯ ಜಿಲ್ಲೆಯ ಸ್ಥಳೀಯ ರೈತರ ಎತ್ತುಗಳು ಭಾಗವಹಿಸಿದ್ದವು. ಪಂದ್ಯಾವಳಿಯ ನಿರ್ಣಾಯಕರಾಗಿ ಪರ್ವತರೆಡ್ಡಿ ಬೆಳ್ಳಿಕಟ್ಟಿ ಕಾರ್ಯನಿರ್ವಹಿಸಿದರು.ದರ್ಗಾದ ಅಮಿರಲಿ ಪೂಜಾರಿ ಕೊನಳ್ಳಿ, ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ್, ಶಿವರಾಜಪ್ಪಗೌಡ ಮಲಾರ, ಸಿದ್ದಣ್ಣಗೌಡ ಐರೆಡ್ಡಿ, ಬೂದೆಣ್ಣಗೌಡ ಬೆಳ್ಳಿಕಟ್ಟಿ, ಸಂಗಪ್ಪಗೌಡ ಹಳಿಮನಿ, ಶಿವನಗೌಡ ಪೊಲೀಸ್ ಪಾಟೀಲ್, ರಘುನಾಥ್ ರೆಡ್ಡಿ ಸೂಗರೆಡ್ಡಿ, ಬಸಯ್ಯ ತಾತಾ, ಅಬ್ಬಾಸಲಿ ಗಡ್ಡಿಮನಿ, ರಾಜಪ್ಪಗೌಡ ಐರೆಡ್ಡಿ, ವೀರಭದ್ರಪ್ಪಗೌಡ ಬೆಳ್ಳಿಕಟ್ಟಿ, ವಿರುಪಾಕ್ಷಿರೆಡ್ಡಿ ಸೂಗರೆಡ್ಡಿ, ಶರಣುಸ್ವಾಮಿ ರುದ್ರಮನಿ, ಬಂದೇಶ್ ಗೌಡ ಐರೆಡ್ಡಿ, ಬಂಧುಗೌಡ ಪೊಲೀಸ್ ಪಾಟೀಲ್, ಮಹ್ಮದ್ ಮುಜಾವರ, ಬಸನಗೌಡ ಓಜಿನ, ಪ್ರಕಾಶ್ ಸ್ವಾಮಿ, ಪಾಂಡು ಕುಲಕರ್ಣಿ, ಬಸವರಾಜಪ್ಪ ವಾಣಿ, ನದೀಮ್ ಸಾಬ್ ಗೋಡೆಕರ, ಮೌಲಾಲಿ ಪಟ್ಟೆ, ಗಡ್ಡೆಲಿಂಗ ಸಂಗಣ್ಣೂರ, ಜುಬಲಪ್ಪ ಕಟ್ಟಿಮನಿ, ಜಮಾಲ್ ಸಾಬ್ ಇತರರಿದ್ದರು.