ಮಳೆಗಾಲದಲ್ಲಿ ಸುತ್ತುಬಳಸು ಸಂಚಾರ: ಸೇತುವೆ ಕುಸಿತು ಸಂಚಾರ ನಿಷೇಧ

KannadaprabhaNewsNetwork |  
Published : Jun 11, 2025, 11:15 AM ISTUpdated : Jun 11, 2025, 11:16 AM IST
ಸಂಪರ್ಕ | Kannada Prabha

ಸಾರಾಂಶ

ಅಳಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು ವಾಹನ ಸಂಚಾರ ನಿಷೇಧ ಹೇರಲಾಗಿದೆ. ಕಳೆದ 2 ವರ್ಷಗಳಿಂದ ಮಳೆಗಾಲ ಬಂದರೆ ಸಂಪರ್ಕ ಕಡಿತಗೊಂಡು ಸುಮಾರು 6 ಕಿ.ಮೀ. ಸುತ್ತು ಬಳಸಿನ ರಸ್ತೆ ಅವಲಂಬಿಸಬೇಕಾದ ಸ್ಥಿತಿ ಇವರಿಗಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕಳೆದ 2 ವರ್ಷಗಳಿಂದ ಮಳೆಗಾಲ ಬಂದರೆ ಸಂಪರ್ಕ ಕಡಿತಗೊಂಡು ಸುಮಾರು 6 ಕಿ.ಮೀ. ಸುತ್ತು ಬಳಸಿನ ರಸ್ತೆ ಅವಲಂಬಿಸಬೇಕಾದ ಸ್ಥಿತಿ ತಾಲೂಕಿನ ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಳಂಬ ಪರಿಸರದ ಮಂದಿಗೆ ಬಂದೊದಗಿದೆ.

ಅಳಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಕುಸಿದು ಬಿದ್ದಿದ್ದು ವಾಹನ ಸಂಚಾರ ನಿಷೇಧ ಹೇರಲಾಗಿದೆ. ಕುತ್ಲೂರಿನಿಂದ ಸಂಪರ್ಕ ಕಲ್ಪಿಸುವ ಈ ಸೇತುವೆ ಸುಮಾರು 30 ಕುಟುಂಬಗಳಿಗೆ ಪ್ರಮುಖ ಆಸರೆ. ಇದು ಅಳಂಬ ಪರಿಸರಕ್ಕೆ ಇರುವ ಏಕೈಕ ಸಂಪರ್ಕ. ಬೇಸಿಗೆ ಸಮಯ ಸೇತುವೆಯ ಸಮೀಪ ಹಳ್ಳದಲ್ಲೇ ಸ್ಥಳೀಯರು ರಸ್ತೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ ಮಳೆ ಬಂದ ತಕ್ಷಣ ಈ ರಸ್ತೆ ಕೊಚ್ಚಿ ಹೋಗಿ ಹಳ್ಳದಲ್ಲಿ ನೀರು ತುಂಬಿ ವಾಹನ ಸಂಚಾರ ಸಾಧ್ಯವಾಗುವುದಿಲ್ಲ.ಎರಡು ವರ್ಷದ ಹಿಂದೆ ಮಳೆಗಾಲದಲ್ಲಿ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಬಂದ ಸಮಯ ಸೇತುವೆ ಮುರಿದು ಬಿದ್ದಿದೆ. ಆದರೆ ಇದುವರೆಗೂ ಇದನ್ನು ಮರು ನಿರ್ಮಿಸುವ ಬಗ್ಗೆ ಸರ್ಕಾರ, ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಅಳಂಬ ಪರಿಸರದ ಮಂದಿ ಮಳೆಗಾಲದಲ್ಲಿ ತ್ರಿಶಂಕು ಸ್ಥಿತಿ ಎದುರಿಸುವಂತಾಗಿದೆ. ತಲೆ ಹೊರೆಯೇ ಆಸರೆ:ಇಲ್ಲಿನ ನಿವಾಸಿಗಳು ದಿನಬಳಕೆ ಸಹಿತ ಇತರ ವಸ್ತುಗಳನ್ನು ತಲೆಹೊರೆ ಮೂಲಕವೇ ಕೊಂಡೊಯ್ಯಬೇಕು. ಯಾರಿಗಾದರೂ ಅನಾರೋಗ್ಯ ಕಂಡು ಬಂದರೆ ಅವರನ್ನು ಹೊತ್ತುಕೊಂಡು ಬರಬೇಕಾಗಿದೆ. ಸೇತುವೆ ಕುಸಿದ ಕಾರಣ ಅಳಂಬಕ್ಕೆ ಬರುತ್ತಿದ್ದ ಸಂಚಾರಿ ರೇಶನ್ ಗೂ ಕತ್ತರಿ ಬಿದ್ದಿದೆ.ಜನರು ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಬಂದು ರೇಷನ್ ಸಾಮಗ್ರಿಗಳನ್ನು ಹೊತ್ತೊಯ್ಯುವಂತಾಗಿದೆ. ಬಹುಕಾಲದ ಹೋರಾಟದ ಬಳಿಕ ಇಲ್ಲಿ ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಆಹಾರ ವಸ್ತುಗಳನ್ನು ಕೊಂಡುಯ್ಯಲು ಸಾಧ್ಯವಾಗದೆ ತಲೆಹೊರೆ ಆಸರೆಯಾಗಿದೆ.

ಬಹುಕಾಲದ ಬೇಡಿಕೆ:

ಇಲ್ಲಿಗೆ ನೂತನ ಸೇತುವೆ ನಿರ್ಮಿಸಿ ಕೊಡಬೇಕೆಂಬುದು ಇಲ್ಲಿನ ಜನರ ಬಹುಕಾಲದ ಬೇಡಿಕೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ನೀಡಿ, ಹಲವಾರು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಈಗ ನದಿ ದಾಟಿ ನಡೆದುಕೊಂಡು ಹೋಗಬಹುದು ಆದರೆ ಮಳೆಗಾಲದಲ್ಲಿ ಅಳಂಬದ ಜನರಿಗೆ ಪೇಟೆಗೆ ಬರುವುದು ಬಹುದೊಡ್ಡ ಸಮಸ್ಯೆಯಾಗಿದೆ...................ಸೇತುವೆ ಕುಸಿದು ಬಿದ್ದು ಇಷ್ಟು ಸಮಯವಾದರೂ ಯಾರೂ ಇನ್ನು ಇದಕ್ಕೆ ಪರಿಹಾರ ಕಂಡುಕೊಳ್ಳುವ ಕಾರ್ಯಮಾಡಿಲ್ಲ, ಸೇತುವೆಯಿಲ್ಲದೆ ನಾವು ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ, ಸಂಚಾರ ಅಸಾಧ್ಯವಾಗಿದ್ದು ತಲೆಹೊರೆಯಲ್ಲಿಯೇ ಪ್ರತಿಯೊಂದು ವಸ್ತುವನ್ನೂ ಕೊಂಡೊಯ್ಯಬೇಕಾದ ಸ್ಥಿತಿಯಿದೆ‌.

-ಸುಧಾಕರ ಎಂ.ಕೆ., ಸ್ಥಳೀಯ ನಿವಾಸಿ, ಅಳಂಬ...................ಅಳಂಬ ಸಂಪರ್ಕ ಸೇತುವೆ ಹಾನಿಯಾಗಿದ್ದ ಸಂದರ್ಭ ಮಳೆ ಹಾನಿ ಪ್ಯಾಕೇಜ್‌ನಡಿ ಅನುದಾನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 2 ಕೋಟಿ ರು. ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಮಂಜೂರಾತಿ ದೊರಕಿದೆ.

-ನಿತಿನ್, ಎಂಜಿನಿಯರ್, ಜಿಪಂ ಪಂಚಾಯಿತಿ ರಾಜ್ ಎಂಜಿನಿಯರಿಂಗ್ ವಿಭಾಗ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ