ಕಾರಾಗೃಹದಲ್ಲಿ ನಿಷೇಧಿತ ವಸ್ತು ಸಾಗಾಟ: ಮೂವರ ಬಂಧನ

KannadaprabhaNewsNetwork |  
Published : Mar 28, 2026, 01:45 AM IST
ಆರೋಪಿಗಳು | Kannada Prabha

ಸಾರಾಂಶ

ಮಾ. 8ರಂದು ಕಾರಾಗೃಹದ ಸಹಾಯಕ ಅಧೀಕ್ಷಕರಾದ ನಿರ್ಮಾಲಾ ಅವರು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಸಾಗಾಟ ನಡೆದಿರುವ ಕುರಿತು ಉಪನಗರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ನಿಷೇಧಿತ ವಸ್ತುಗಳ ಸಾಗಾಟವಾಗಿರುವುದು ಗೊತ್ತಾಗಿದೆ.

ಧಾರವಾಡ:

ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕಾರಾಗೃಹದ ಇಬ್ಬರು ವಾರ್ಡರ್‌ ಸೇರಿದಂತೆ ಮೂವರು ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಮಾ. 8ರಂದು ಕಾರಾಗೃಹದ ಸಹಾಯಕ ಅಧೀಕ್ಷಕರಾದ ನಿರ್ಮಾಲಾ ಅವರು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಸಾಗಾಟ ನಡೆದಿರುವ ಕುರಿತು ಉಪನಗರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ನಿಷೇಧಿತ ವಸ್ತುಗಳ ಸಾಗಾಟವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು, ಸಾಗಾಟ ಮಾಡುತ್ತಿದ್ದ ಅಲ್ಲಿಯ ವಾರ್ಡರ್‌ ಅಲ್ತಾಫ್‌ ದಾವಲಸಾಬ್‌ ಶೇಖಸನದಿ, ರಾಜು ಬಸನಗೌಡ ಸೊಲಬಣ್ಣವರ ಹಾಗೂ ಆಟೋ ಡ್ರೈವರ್‌ ಮುನೀರ್‌ ಬೆಟಗೇರಿ ಅವರನ್ನು ಬಂಧಿಸಲಾಗಿದೆ. ಜೊತೆಗೆ ₹ 75 ಸಾವಿರ ಮೌಲ್ಯದ ಬೀಡಿ, ಸಿಗರೇಟ್‌, ಆರ್‌ಎಂಡಿ, ಲೈಟರ್‌ ಅಂತಹ ವಸ್ತು ಹಾಗೂ ಆಟೋ ಸಹ ವಶಪಡಿಸಿಕೊಳ್ಳಲಾಗಿದೆ ಎಂದರು.

ಇಬ್ಬರೂ ವಾರ್ಡರ್‌ ಕಾರಾಗೃಹದಲ್ಲಿರುವ ಕ್ಯಾಂಟೀನ್‌ ಮೂಲಕ ಕೈದಿಗಳಿಗೆ ಈ ವಸ್ತುಗಳನ್ನು ತಲುಪಿಸುತ್ತಿದ್ದರು ಎಂಬ ಮಾಹಿತಿ ಇದೆ. ಎಲ್ಲ ರೀತಿಯ ತಪಾಸಣೆ ಮಧ್ಯೆಯೂ ಈ ವಸ್ತುಗಳನ್ನು ಆರೋಪಿಗಳು ಹೇಗೆ ಒಳಗೆ ಒಯ್ದರು? ಒಯ್ದು ಹೆಚ್ಚಿನ ಹಣಕ್ಕೆ ಅವುಗಳನ್ನು ಮಾರಾಟ ಮಾಡುತ್ತಿದ್ದರೋ ಎಂಬ ಮಾಹಿತಿಯು ತನಿಖೆ ನಂತರ ಗೊತ್ತಾಗಲಿದೆ ಎಂದ ಅವರು, ಇದು ಹಳೆಯ ಕಾರಾಗೃಹವಾದ ಕಾರಣ ಕಣ್ತಪ್ಪಿಸಿ ನಿಷೇಧಿತ ವಸ್ತುಗಳನ್ನು ಒಳಗೆ ಒಯ್ಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ತಪಾಸಣೆ ಸಹ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಐಪಿಎಲ್‌ ಶುರುವಾಗುತ್ತಿದ್ದು ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ತಡೆಯಲು ಎಲ್ಲ ಪೊಲೀಸ್‌ ಠಾಣೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಈ ಹಿಂದೆ ಬೆಟ್ಟಿಂಗ್‌ ನಡೆಸಿದವರ ಮೇಲೆ ಕಣ್ಣಿಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೂ ಸೂಚನೆ ನೀಡಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್.ಜಿ.ಹಾವನೂರ್ ಆದರ್ಶ ಪಾಲಿಸಲು ನ್ಯಾ.ಊರ್ಮಿಳಾ ವಿ.ಕರೆ
ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಿರ್ಮಿಸಿದ ಮನೆ ನಿರ್ಗತಿಕ ದಂಪತಿಗೆ ವಿತರಣೆ