ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರಿಗಾಗಿ ರೈಲು ತಡೆ ಚಳವಳಿ ಮಾಡಿದ 10 ವರ್ಷದ ನಂತರ ಮುಖಂಡನಿಗೆ ರೈಲ್ವೆ ಪೊಲೀಸರು ಕೋರ್ಟ್‌ಗೆ ಹಾಜರಾಗಲು ನೋಟಿಸ್ ನೀಡಿದ್ದು ಆಶ್ಚರ್ಯ ತಂದಿದೆ.
2015ರಲ್ಲಿ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ, ಬಾಗಲಕೋಟೆಯ ಕುತ್ಬುದ್ದೀನ ಖಾಜಿಯವರು ವಿವಿಧ ರೈತ ಸಂಘಟನೆಗಳ ಜತೆಗೂಡಿ ಮಹದಾಯಿ ನೀರಿಗಾಗಿ ರೈಲು ತಡೆ ಚಳವಳಿ ಮಾಡಿದ್ದರು. 10 ವರ್ಷದ ನಂತರ ಧಾರವಾಡ ಜಿಲ್ಲೆಯ ನವಲಗುಂದ ಸಿವಿಲ್ ಜಡ್ಜ್ ಆ್ಯಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಏ. 21ರಂದು ಹಾಜರಾಗಲು ನೋಟಿಸ್ ನೀಡಿದ್ದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.ಬಂಧನ ಬಿಡುಗಡೆ: 2015ರಲ್ಲಿ ರೈಲು ತಡೆ ಚಳವಡಿ ಮಾಡಿದ ಖಾಜಿಯವರನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಬಂಧಿಸಿ 2 ದಿನ ಜೈಲಿನಲ್ಲಿ ಇಟ್ಟಿದ್ದರು. ಆದರೆ ಅವರನ್ನು ಬಂಧಿಸಿರುವುದನ್ನು ಖಂಡಿಸಿ ರಾಜ್ಯದಲ್ಲಿ ರೈತರು ಹೋರಾಟ ತೀವ್ರಗೊಳಿಸಿದ್ದರಿಂದ ಸರ್ಕಾರ ಇವರನ್ನು ಬಿಡುಗಡೆ ಮಾಡಿ ಮಹದಾಯಿ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿ ಈಗ ಮತ್ತೆ ಈ ಮಹದಾಯಿ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಮತ್ತೆ ಹೋರಾಟಗಾರರ ಮೇಲೆ ಇದೀಗ ಸರ್ಕಾರ ಪೊಲೀಸರ ಮುಖಾಂತರ ನೋಟಿಸ್ ನೀಡಿ ನವಲಗುಂದ ಸಿವಿಲ್ ಜಡ್ಜ್ ಅ್ಯಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರಾಗಲು ತಿಳಿಸಿದ್ದು, ರೈತರು ಮತ್ತೆ ಹೋರಾಟ ತೀವ್ರಗೊಳಿಸಲು ವೇದಿಕೆ ಸಿದ್ಧವಾಗಿದೆ.
10 ವರ್ಷದ ನಂತರ ನೋಟಿಸ್ ಏಕೆ?: ರೈಲು ಚಳವಳಿ ಮಾಡಿ 10 ವರ್ಷದವರೆಗೆ ರೈಲ್ವೆ ಪೊಲೀಸರು ಹೋರಾಟಗಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ಮಹದಾಯಿ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ರೈಲ್ವೆ ಪೊಲೀಸರ ಮುಖಾಂತರ ಈ ರೀತಿ ಹೋರಾಟಗಾರರನ್ನು ಬೆದರಿಸುವ ಕುತಂತ್ರ ಮಾಡುತ್ತಿದ್ದಾರೆಂದು ಮಹದಾಯಿ ಹೋರಾಟಗಾರರ ಆರೋಪವಾಗಿದೆ.ನಾನು ಮಹದಾಯಿ ನೀರಿಗಾಗಿ ಜೈಲು ಅಷ್ಟೇ ಅಲ್ಲ, ಪ್ರಾಣ ಕೊಡಲು ಸಿದ್ಧನಿದ್ದೇನೆ. ಇಂಥಾ ನೂರು ನೋಟಿಸ್ ನನಗೆ ನೀಡಿದರೂ ನಾನು ಹೆದರುವುದಿಲ್ಲ. ಕೆಲವು ರಾಜಕೀಯ ವ್ಯಕ್ತಿಗಳು ಈ ರೀತಿ ನೋಟಿಸ್ ಕೊಡಿಸಿ ಮಹದಾಯಿ ಹೋರಾಟ ಹತ್ತಿಕ್ಕುವ ಕುತಂತ್ರ ಮಾಡುತ್ತಿದ್ದಾರೆಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ ಖಾಜಿ ಹೇಳಿದರು.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನರ ಕುಡಿಯುವ ನೀರಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ಕೆಲವು ರಾಜಕಾರಣಿಗಳು ಈ ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಪೊಲೀಸರ ಮೂಲಕ ಹೋರಾಟಗಾರರನ್ನು ಬೆದರಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.