ಕುಷ್ಟಗಿಯಲ್ಲಿ ಇಂದು ರೈಲು ಸಂಚಾರಕ್ಕೆ ಚಾಲನೆ

KannadaprabhaNewsNetwork |  
Published : May 15, 2025, 01:46 AM IST
ಕುಷ್ಟಗಿ ತಾಲೂಕು ಕನ್ನಡ ಕ್ರೀಯಾ ಸಮಿತಿ ವತಿಯಿಂದ 1997ನೇ ಸಾಲಿನಲ್ಲಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಮುಂದೆ ಗದಗ ವಾಡಿ ರೈಲು ಕಾಮಗಾರಿ ಆರಂಭಿಸುವಂತೆ ನಡೆಸಿದ ಧರಣಿಯ ಪೋಟೊ. | Kannada Prabha

ಸಾರಾಂಶ

17328 ನಂಬರಿನ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಬೆಳಗ್ಗೆ 10.30ಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಸಿಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಸಾಕ್ಷಿಯಾಗಲಿದ್ದಾರೆ.

ಕುಷ್ಟಗಿ:

ಏಳು ದಶಕಗಳ ಕನಸಾದ ಗದಗ-ತಳಕಲ್-ವಾಡಿ ರೈಲ್ವೆ ಯೋಜನೆಯು ಬಹುತೇಕ ಪೂರ್ಣಗೊಂಡಿದ್ದು ಕುಷ್ಟಗಿ-ಹುಬ್ಬಳ್ಳಿ ನಡುವೆ ರೈಲು ಸಂಚಾರ ಇಂದು (ಮೇ 15) ನನಸಾಗುತ್ತಿದ್ದು ರೈಲು ಸಂಚಾರಕ್ಕೆ ಚಾಲನೆ ಹಾಗೂ ರೈಲು ನಿಲ್ದಾಣದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

ಪಟ್ಟಣದ ಕಂದಕೂರು ರಸ್ತೆಯಲ್ಲಿರುವ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಜರುಗಲಿದ್ದು ರೈಲು ಚಾಲನೆಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಎಂ.ಬಿ. ಪಾಟೀಲ, ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ರಾಜಶೇಖರ ಹಿಟ್ನಾಳ, ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ವಿಪ ಸದಸ್ಯರಾದ ಶರಣಗೌಡ ಬಯ್ಯಾಪುರ, ಹೇಮಲತಾ ನಾಯಕ, ಶಶಿಲ್ ಜಿ ನಮೋಷಿ, ಚಂದ್ರಶೇಖರ ಪಾಟೀಲ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

17328 ನಂಬರಿನ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಬೆಳಗ್ಗೆ 10.30ಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ಸಿಗಲಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಸಾಕ್ಷಿಯಾಗಲಿದ್ದಾರೆ. ಈಗಾಗಲೆ ರೈಲ್ವೆ ಹಳಿ, ಪ್ಲಾಟ್ ಫಾರ್ಮ, ರೈಲ್ವೆ, ಅಧಿಕಾರಿಗಳ ವಸತಿ ಗೃಹ, ಪುಟ್ಬಾತ್, ಟ್ರ್ಯಾಕ್ ಟೇಸ್ಟಿಂಗ್, ರೈಲ್ವೆ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯ ಪೂರೈಸುವ ನಿಟ್ಟಿನಲ್ಲಿ ಕಾಮಗಾರಿಗಳು ಸಂಪೂರ್ಣವಾಗಿದ್ದು ಸಂಚಾರಕ್ಕೆ ಅನುಕೂಲವಾಗಲಿದೆ.

ರೈಲು ಸಂಚಾರ ಸಮಯ:

ಮೇ 15ರಂದು ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಮೇ 16ರಿಂದ ನಿತ್ಯ ಕುಷ್ಟಗಿ ರೈಲು ನಿಲ್ದಾಣದಿಂದ ಬೆಳಗ್ಗೆ 7ಕ್ಕೆ ಹೊರಡುವ ಪ್ರಯಾಣಿಕರ ರೈಲು ಬೆಳಗ್ಗೆ 10.45ಕ್ಕೆ ಹುಬ್ಬಳ್ಳಿ ನಿಲ್ದಾಣ ತಲುಪುತ್ತದೆ. ಸಂಜೆ ಹುಬ್ಬಳ್ಳಿಯಿಂದ 5ಕ್ಕೆ ಹೊರಟು ಸಂಜೆ 8.40ಕ್ಕೆ ಕುಷ್ಟಗಿ ನಿಲ್ದಾಣ ತಲುಪುತ್ತದೆ ಹಾಗೂ ಕುಷ್ಟಗಿಯಿಂದ ಹುಬ್ಬಳ್ಳಿಗೆ ಟಿಕೇಟ್ ದರ ಕೇವಲ ₹ 70ಗಳಿದ್ದು ಪ್ರಯಾಣ ಮಾಡಬಹುದಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಕಲ ಸಿದ್ಧತೆ:

ರೈಲ್ವೆ ಸಂಚಾರಕ್ಕೆ ಹಸಿರು ನಿಶಾನೆ ತೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಪಟ್ಟಣದಲ್ಲಿ ಬ್ಯಾನರ್ ಬಂಟಿಂಗ್ಸ್, ಪ್ಲೆಕ್ಸ್, ಪಟ್ಟಣದಿಂದ ರೈಲು ನಿಲ್ದಾಣದ ವರೆಗೂ ಅಲ್ಲಲ್ಲಿ ಹಾಕಲಾಗಿದೆ. ರೈಲು ನಿಲ್ದಾಣದ ಸ್ವಚ್ಛತೆಯ ಕಾರ್ಯಗಳು ಭರದಿಂದ ಸಾಗಿದ್ದು ವೇದಿಕೆಯ ಕಾರ್ಯಕ್ರಮಕ್ಕೂ 1000 ಜನರು ಸೇರುವ ಬೃಹತ್ ಗಾತ್ರದ ಪೆಂಡಾಲ್‌ ಅಳವಡಿಸಲಾಗಿದೆ.

ವಾಹನ ವ್ಯವಸ್ಥೆ:

ರೈಲು ನಿಲ್ದಾಣ ಪಟ್ಟಣದಿಂದ 2 ಕಿಲೋ ಮೀಟರ್‌ ದೂರವಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬರುವ ಜನರಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಹಾಗೂ ದಾರಿಯುದ್ದಕ್ಕೂ ನೀರು, ಮಜ್ಜಿಗೆ, ನೆರಳು ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲು ಸಂಘಟಕರು, ಜನಪ್ರತಿನಿಧಿಗಳು ಮುಂದಾಗಿದ್ದಾರೆ.

ಈ ರೈಲು ಮಾರ್ಗಕ್ಕಾಗಿ ಅನೇಕ ಹಿರಿಯರು ನಿರಂತರ ಹೋರಾಟ ಮಾಡಿದ್ದರಿಂದ ಪ್ರತಿಫಲ ಸಿಕ್ಕಿದೆ. 1997ರಲ್ಲಿ ರವೀಂದ್ರ ಬಾಕಳೆ ಹಾಗೂ ಶರಣಪ್ಪ ವಡಿಗೇರಿ ಅವರು ತಾಲೂಕು ಕನ್ನಡ ಕ್ರಿಯಾ ಸಮಿತಿಯಿಂದ ತಹಸೀಲ್ದಾರ್‌ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಕಾಮಗಾರಿ ಆರಂಭಿಸಲು ಮನವಿ ಮಾಡಿದ್ದನ್ನು ಸ್ಮರಿಸಬಹುದು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...