ಪಾಠ ಮಾಡುವುದರ ಬಗ್ಗೆ ಶಿಕ್ಷಕರಿಗೆ ತರಬೇತಿ ಕೊಡಿಸಿ

KannadaprabhaNewsNetwork |  
Published : Nov 16, 2024, 12:32 AM IST
ಗಜೇಂದ್ರಗಡ ಪುರಸಭೆಯಲ್ಲಿ ಲೋಕಾಯುಕ್ತದಿಂದ ಸಾರ್ವಜನಿಕರ ಕುಂದುಕೊರತೆ, ಅಹವಾಲು ಸ್ವೀಕಾರ ನಡೆಯಿತು. | Kannada Prabha

ಸಾರಾಂಶ

ತಾಲೂಕಿನಲ್ಲಿ ಕಲಿಕಾ ಗುಣಮಟ್ಟ ಉತ್ತಮವಾಗಿಲ್ಲ. ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬೇಕು ಎನ್ನುವುದನ್ನು ಮೊದಲು ಶಿಕ್ಷಕರಿಗೆ ತರಬೇತಿ ನೀಡಬೇಕಿದೆ

ಗಜೇಂದ್ರಗಡ: ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬೇಕು ಎಂಬುದರ ಬಗ್ಗೆ ಮೊದಲು ಶಿಕ್ಷಕರಿಗೆ ತರಬೇತಿ ಜತೆಗೆ ಮೊಬೈಲ್ ಬಿಟ್ಟು ಪಾಠ ಮೊದಲು ಹೇಳಿ ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ ಪಿ ವಿಜಯ ಬಿರಾದಾರ ಹೇಳಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಲೋಕಾಯುಕ್ತದಿಂದ ಶುಕ್ರವಾರ ನಡೆದ ತಾಲೂಕು ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಕಲಿಕಾ ಗುಣಮಟ್ಟ ಉತ್ತಮವಾಗಿಲ್ಲ. ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಬೇಕು ಎನ್ನುವುದನ್ನು ಮೊದಲು ಶಿಕ್ಷಕರಿಗೆ ತರಬೇತಿ ನೀಡಬೇಕಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಶಿಕ್ಷಕರು ಮೊಬೈಲ್ ಬಳಕೆ ಮಾಡುವಂತಿಲ್ಲ ಎನ್ನುವ ಸುತ್ತೋಲೆ ಇದ್ದರೂ ಸಹ ಮೊಬೈಲ್ ಬಳಕೆಯನ್ನು ಶಿಕ್ಷಕರು ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸುತ್ತೋಲೆ ಹೊರಡಿಸಿ ಎಂದ ಅವರು, ತಾಲೂಕಿನ ಎಷ್ಟು ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿನಿಯರ ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗಾಗಿ ಎಷ್ಟು ಪ್ರಸ್ತಾವನೆ ಕಳುಹಿಸಿದ್ದೀರಿ, ಕಲಿಕಾ ಗುಣಮಟ್ಟ ಸುಧಾರಣೆ ಹಿನ್ನೆಲೆ ಎಷ್ಟು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಿ, ಶಿಕ್ಷಣ ಇಲಾಖೆಗೆ ನಿವೃತ್ತ ಶಿಕ್ಷಕರು ಸೇರಿ ಅರ್ಜಿದಾರರು ತಿಂಗಳಾನುಗಟ್ಟಲೆ ಅಲೆಯುತ್ತಿದ್ದಾರೆ. ಮೊನ್ನೆ ಅರ್ಧ ದಿನ ನಿಮ್ಮ ಇಲಾಖೆಯ ಅರ್ಜಿ ಪರಿಶೀಲಿಸಿದ್ದೇನೆ. ಹೀಗಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸುವುದರು.

ತಾಲೂಕಿನಲ್ಲಿನ ಹಾಸ್ಟೇಲ್‌ಗಳಿಗೆ ವಾರ್ಡನಗಳು ಎಷ್ಟು ಬಾರಿ ಭೇಟಿ ನೀಡುತ್ತಾರೆ ಎಂಬ ಪ್ರಶ್ನೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರತಿದಿನ ಊಟದ ಸಮಯದಲ್ಲಿ ಹಾಸ್ಟೇಲ್‌ಗಳಿಗೆ ಭೇಟಿ ನೀಡಿ ಪೋಟೊಗಳನ್ನು ಕಳುಹಿಸುತ್ತಾರೆ ಎಂದಾಗ ಇಂದು ನಿಮ್ಮ ಮೊಬೈಲ್‌ಗೆ ಎಷ್ಟು ವಾರ್ಡನಗಳು ಪೋಟೊ ಕಳುಹಿಸುತ್ತಾರೆಂದು ಇವತ್ತು ಪರಿಶಿಲಿಸೋಣ ಎಂದಾಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಡಬಡಿಸಿದರು. ಪಾಲಕರು ಮಕ್ಕಳ ಉಜ್ವಲ ಭವಿಷ್ಯ ನಿಮ್ಮ ಕೈಗೆ ನೀಡಿರುತ್ತಾರೆ. ಗ್ರಾಮೀಣ ಭಾಗದ ಹಾಸ್ಟೇಲ್‌ಗಳಿಗೆ ವಾರ್ಡನಗಳು ಭೇಟಿ ನೀಡುವದಿಲ್ಲ ಪರಿಣಾಮ ಬಿಸಿಯೂಟದ ಸಿಬ್ಬಂದಿ ಹಾಗೂ ರಾತ್ರಿ ವಾಚಮನ್‌ಗಳು ಹಾಸ್ಟೇಲ್‌ಗಳನ್ನು ಕಾಯುತ್ತಾರೆ. ಹೀಗಾಗಿ ವಾರ್ಡನಗಳಿಗೆ ಕಡ್ಡಾಯವಾಗಿ ಹಾಸ್ಟೇಲ್‌ಗಳಿಗೆ ಭೇಟಿ ನೀಡಲು ತಾಕೀತು ಮಾಡುವುದರ ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕುಡಿಯುವ ನೀರು ಲ್ಯಾಬ್‌ಗೆ ಕಳುಹಿಸಿ ಎಂದರು.

ಪಟ್ಟಣದ ಕೆಲ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ಯಾನವಕ್ಕೆ ಬಿಟ್ಟ ಜಾಗಗಳು ಮಾಯವಾಗಿವೆ ಎಂಬ ದೂರಿಗೆ ಈ ಹಿಂದೆ ಅಭಿವೃದ್ಧಿ ಪಡಿಸಿದ ಬಡಾವಣೆಗಳ ಮಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದೀರಿ. ಯಾರ ಮೇಲೆ ಕ್ರಮ ಕೈಗೊಂಡಿದ್ದೀರಿ, ಯಾವುದನ್ನು ಹರಾಜಿಗೆ ಹಾಕಿದ್ದೀರಿ ಎಂಬ ಲೋಕಾಯುಕ್ತ ಡಿವೈಎಸ್‌ಪಿ ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪುರಸಭೆ ಅಧಿಕಾರಿಗಳು ನೀಡಲಿಲ್ಲ. ಸೂಡಿ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಅಂಗನವಾಡಿ ನಿರ್ಮಿಸಿದ್ದಾರೆ, ನಮ್ಮ ಜಾಗೆ ಮರಳಿಕೊಡಿಸಿ ಎಂಬ ಅರ್ಜಿ ಸೇರಿ ೭ಅರ್ಜಿಗಳನ್ನು ವಿವಿಧ ಇಲಾಖೆಗೆ ಅಧಿಕಾರಿಗಳಿಗೆ ನೀಡಿದ ಕಾಲಾವಕಾಶದಲ್ಲಿ ಬಗೆಹರಿಸಿ ವರದಿ ನೀಡಿ ಎಂದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ತಾಪಂ ಇಒ ಬಸವರಾಜ ಬಡಿಗೇರ, ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!