ವಿದ್ಯೆಗೆ ತಕ್ಕ ಉದ್ಯೋಗ ಪಡೆಯಲು ತರಬೇತಿ ಸಹಕಾರಿ: ನಾಯಕ್‌

KannadaprabhaNewsNetwork | Published : Dec 30, 2023 1:30 AM

ಸಾರಾಂಶ

ಬಿವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಜಾಗೃತಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಪಿ.ಎನ್‌. ನಾಯಕರಿಂದ ಮಾಹಿತಿ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೆಲಸವನ್ನು ದೇಶಪಾಂಡೆ ಕೌಶಾಲ್ಯಾಭಿವೃದ್ಧಿ ತರಬೇತಿ ಕೇಂದ್ರ ಮಾಡುತ್ತಿದೆ ಎಂದು ಹುಬ್ಬಳ್ಳಿಯ ದೇಶಪಾಂಡೆ ಕೌಶಾಲ್ಯಾಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿವಹಣಾಧಿಕಾರಿ ಪಿ.ಎನ್. ನಾಯಕ್ ಹೇಳಿದರು.

ಬಿವಿವಿ ಸಂಘದ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಹಾಗೂ ಹುಬ್ಬಳ್ಳಿಯ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಪಾಲಿಟೆಕ್ನಿಕ್ ಕಾಲೇಜಿನ ಸಭಾಭವನದಲ್ಲಿ ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯ ಜಾಗೃತಿ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿಯ ದೇಶಪಾಂಡೆ ಕೌಶಾಲ್ಯಾಭಿವೃದ್ಧಿ ತರಬೇತಿ ಸಂಸ್ಥೆ ಭಾರತದ ಪ್ರಮುಖ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು, ಸಾಮಾಜಿಕ ಸಂಸ್ಥೆಗಳ ಬೆಳವಣಿಗೆಗೆ ಶಕ್ತಿ ತುಂಬಲು ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳ ತುರ್ತು ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿವರೆಗಿನ ಶಿಕ್ಷಣದೊಂದಿಗೆ ಗ್ರಾಮೀಣ ಯುವಕರಲ್ಲಿ ಅಗತ್ಯ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ಅವರು ತಮ್ಮ ಕಲಿಕೆಗೆ ತಕ್ಕ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತಯಾರಿಗೊಳಿಸಲಾಗುತ್ತಿದೆ. ನಮ್ಮಲ್ಲಿ ತರಬೇತಿ ಪಡೆದ ಹಳೆಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಉದ್ಯಮಿಗಳಾಗಿ ಸಮಾಜಕ್ಕೆ ಕೀರ್ತಿ ತಂದಿದ್ದಾರೆ ಎಂದರು.

ಅತಿಥಿಗಳಾಗಿ ಮಾತನಾಡಿದ ದೇಶಪಾಂಡೆ ಕೈಶಲ್ಯಾಭಿವೃದ್ಧಿ ಸಂಸ್ಥೆಯ ಉಪ ನಿರ್ದೇಶಕ ರವಿ ಚವ್ಹಾಣ ಮಾತನಾಡಿ, ದೇಶಪಾಂಡೆ ಕೌಶಲ್ಯಾಭಿವೃದ್ಧಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ತರಬೇತಿದಾರರು ಇದ್ದು, ವಿದ್ಯಾರ್ಥಿಗಳಲ್ಲಿರುವ ತಮ್ಮ ಕೌಶಲ್ಯ ಕಂಡುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.

ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯವನ್ನು ಉನ್ನತೀಕರಣಗೊಳಿಸಿಕೊಳ್ಳಬೇಕು. ಆಧುನಿಕ ಯುಗದಲ್ಲಿ ಜ್ಞಾನದ ಜೊತೆಗೆ ಕೌಶಲ್ಯ ಸಹ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮಹಾವಿದ್ಯಾಲಯಗಳು, ವಿದ್ಯಾರ್ಥಿಗಳ ಸುಭದ್ರ ಜೀವನಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬಿವಿವಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಬಗ್ಗೆ ತಿಳಿಸಿದ ಅವರು, ನಮ್ಮ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರವನ್ನು ತೆರೆದಿದ್ದು, ವಿದ್ಯಾರ್ಥಿಗಳು ಇದರ ಸದುಪಯೊಗ ಪಡಿಸಿಕೊಳ್ಳಬೇಕು ಎಂದರು.

ಅಪೇಕ್ಷಾ ಹಿರೇಮಠ ಪ್ರಾರ್ಥಿಸಿದರು. ವಿಷಯ ಪರಿವೀಕ್ಷಕ ಬಸವರಾಜ ಕುರಿ ವಂದಿಸಿದರು. ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯ ಎಸ್.ಎಮ್.ಗಾಂವ್ಕರ, ಪ್ರೊ.ಎಸ್.ಆರ್ ಮೂಗನೂರಮಠ, ಪ್ರೊ. ಎಸ್.ಜೆ. ಒಡೆಯರ, ಡಾ.ಜಗನ್ನಾಥ ಚವ್ಹಾಣ, ಡಾ.ಎಂ.ಪಿ.ಚಂದ್ರಿಕಾ, ಪ್ರೊ. ಟಿ.ಬಿ.ಕೋರಿಶೇಟ್ಟಿ ಸೇರಿದಂತೆ ಮಹಾವಿದ್ಯಾಲಯಗಳ ಕೇಂದ್ರದ ಅಧಿಕಾರಿಗಳು ಭಾಗವಹಿಸಿದ್ದರು.

Share this article