ಜಾನುವಾರುಗಳಿಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ನೀಡುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಕೊಟ್ಟಿಗೆಯನ್ನು ಸ್ವಚ್ಛವಾಗಿ ಹಾಗೂ ಒಣವಾಗಿಡುವುದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಮತ್ತು ರೋಗಗಳಿಂದ ರಕ್ಷಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸುವುದು, ಯಾವುದೇ ಅಸಹಜ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಪಶುವೈದ್ಯರನ್ನು ಸಂಪರ್ಕಿಸುವುದು ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ಗಮನಹರಿಸುವಂತೆ ರೈತರಿಗೆ ಸಲಹೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರೈತರ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಹಾಗೂ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಕೃಷಿ ಮಹಾವಿದ್ಯಾಲಯ, ಹಾಸನದ ವಿದ್ಯಾರ್ಥಿಗಳು ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಸನ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಚೇತನ್ ಶರ್ಮಾ, ಡಾ. ಶಿವಕುಮಾರ್, ಡಾ. ದೀಪಕ್ ಹಾಗೂ ಡಾ. ಪ್ರಿಯಾಂಕಾ ಅವರು ಭಾಗವಹಿಸಿದ್ದರು. ಜೊತೆಗೆ ಹಾಸನ ಪಶು ಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ. ಕಾವ್ಯ ಅವರು ಶಿಬಿರದಲ್ಲಿ ಉಪಸ್ಥಿತರಿದ್ದು, ಜಾನುವಾರುಗಳ ಆರೋಗ್ಯ ತಪಾಸಣೆ ಹಾಗೂ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದರು. ಕಾರ್ಯಕ್ರಮಕ್ಕೆ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕಿ ಡಾ. ಶಶಿಕಲಾ ಎಸ್.ಜಿ. ಹಾಗೂ ಸಹ ಸಂಯೋಜಕರಾದ ಡಾ. ಸಹನಾ ಮತ್ತು ಡಾ. ಚಂದನಾ ಎಲ್. ಅವರು ಆಗಮಿಸಿ ಶಿಬಿರಕ್ಕೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಕಾರ್ಯವನ್ನು ಉತ್ತೇಜಿಸಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ಶಿಬಿರಗಳ ಮಹತ್ವವನ್ನು ತಿಳಿಸಿದರು. ಶಿಬಿರದ ಅಂಗವಾಗಿ ಪಶುವೈದ್ಯರು ಗ್ರಾಮದ ರೈತರ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿದರು. ಜಾನುವಾರುಗಳಲ್ಲಿ ಕಂಡುಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯವಿರುವ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡಲಾಯಿತು. ಜಾನುವಾರುಗಳ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ರೈತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲಾಯಿತು.ರೈತರು ತಮ್ಮ ಜಾನುವಾರುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಪಶುವೈದ್ಯರೊಂದಿಗೆ ನೇರವಾಗಿ ಚರ್ಚಿಸಿ, ರೋಗಗಳ ಲಕ್ಷಣಗಳು, ಚಿಕಿತ್ಸೆ ಹಾಗೂ ಜಾನುವಾರುಗಳ ಸರಿಯಾದ ನಿರ್ವಹಣೆಯ ಕುರಿತು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು. ಜಾನುವಾರುಗಳಿಗೆ ಸಮತೋಲಿತ ಹಾಗೂ ಪೌಷ್ಟಿಕ ಆಹಾರ ನೀಡುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಕೊಟ್ಟಿಗೆಯನ್ನು ಸ್ವಚ್ಛವಾಗಿ ಹಾಗೂ ಒಣವಾಗಿಡುವುದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಮತ್ತು ರೋಗಗಳಿಂದ ರಕ್ಷಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸುವುದು, ಯಾವುದೇ ಅಸಹಜ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ಪಶುವೈದ್ಯರನ್ನು ಸಂಪರ್ಕಿಸುವುದು ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ನಿಯಮಿತವಾಗಿ ಗಮನಹರಿಸುವಂತೆ ರೈತರಿಗೆ ಸಲಹೆ ನೀಡಲಾಯಿತು. ಜಾನುವಾರುಗಳ ಉತ್ತಮ ಆರೋಗ್ಯವು ಅವುಗಳ ಉತ್ಪಾದಕತೆ ಹೆಚ್ಚಿಸುವುದರೊಂದಿಗೆ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಲಾಯಿತು. ಶಿಬಿರದಲ್ಲಿ ಒಟ್ಟು ೧೧೦ ಜಾನುವಾರುಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆಯನ್ನು ನೀಡಿ ಔಷಧಿಗಳನ್ನು ವಿತರಿಸಲಾಯಿತು. ಶಿಬಿರದಿಂದ ಗ್ರಾಮದ ರೈತರಿಗೆ ಜಾನುವಾರುಗಳ ಆರೋಗ್ಯ ಸಂರಕ್ಷಣೆ, ರೋಗಗಳ ಆರಂಭಿಕ ಗುರುತಿಸುವಿಕೆ, ಸೂಕ್ತ ಚಿಕಿತ್ಸೆ ಹಾಗೂ ವೈಜ್ಞಾನಿಕ ಪಶುಪಾಲನಾ ಪದ್ಧತಿಗಳ ಕುರಿತು ಹೆಚ್ಚಿನ ಅರಿವು ಮೂಡಿತು.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ವಿದ್ಯಾರ್ಥಿಗಳ ಈ ಸೇವಾ ಕಾರ್ಯಕ್ಕೆ ಗ್ರಾಮದ ರೈತರು ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ವಿದ್ಯಾರ್ಥಿಗಳು ರೈತರೊಂದಿಗೆ ನೇರವಾಗಿ ಸಂಪರ್ಕ ಹೊಂದಿ ಕೃಷಿಯ ಜೊತೆಗೆ ಪಶುಸಂಗೋಪನೆಯ ಮಹತ್ವವನ್ನು ಅರಿತುಕೊಳ್ಳಲು ಇಂತಹ ಶಿಬಿರಗಳು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.